ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಜೂನ್ 14ರಂದು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು,..
ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮವನ್ನು ಜೂನ್ 14ರಂದು ನಡೆಸಲು ಅನುಮತಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ.
ಜೂನ್ 8ರ ನಂತರ ಲಾಕ್ ಡೌನ್ ಸಡಿಲ ಮಾಡುವ ನಿರೀಕ್ಷೆ ಇದ್ದು, ನನ್ನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಹೀಗಾಗಿ 14ರಂದು ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.
ಅವರು ನನಗೆ ಈವರೆಗೆ ಅನುಮತಿ ನಿರಾಕರಿಸಿಲ್ಲ. ಒಂದುವೇಳೆ ನಿರಾಕರಿಸಿದರೆ ಆಮೇಲೆ ಅವರ ವರ್ಚುವಲ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತೇನೆ.
ನಮ್ಮ ಪಕ್ಷದಿಂದ ಒಬ್ಬರೇ ಅಭ್ಯರ್ಥಿ ಸ್ಪರ್ಧೆ:
ರಾಜ್ಯಸಭೆ ಚುನಾವಣೆಗೆ ನಮ್ಮ ಪಕ್ಷದಿಂದ ಕೇವಲ ಒಬ್ಬ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಜೂನ್8ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಯಾವುದೇ ಕಾರ್ಯಕರ್ತರು ಈ ವೇಳೆ ಆಗಮಿಸಬಾರದು. ಅವರು ಗೆದ್ದ ಬಳಿಕ ಅವರ ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿ. ನಾಮಪತ್ರ ಸಲ್ಲಿಕೆ ವೇಳೆ ಹೆಚ್ಚು ಜನ ಜಮಾಯಿಸಿ ಸಾಮಾಜಿಕ ಅಂತರ ಕಾಪಾಡಲಿಲ್ಲ ಅಂತಾ ಆರೋಪ ಬರುವಂತೆ ಮಾಡಿ ಅವರ ಹಿರಿತನಕ್ಕೆ ಅಗೌರವ ತರುವುದು ಬೇಡ. ದೂರದಿಂದಲೇ ನಿಮ್ಮ ಪ್ರೀತಿ, ಅಭಿಮಾನ ತೋರಿಸಿ ಎಂದು ಮನವಿ ಮಾಡುತ್ತೇನೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿ ಉಳಿದ ಮತಗಳನ್ನು ಯಾರಿಗೆ ಹಾಕಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಾಯಕರು ಸೂಚನೆ ನೀಡಲಿದ್ದು, ಅದನ್ನು ನಾವು ಪಾಲಿಸುತ್ತೇವೆ.
*ಮೈಶುಗರ್ ಕಾರ್ಖಾನೆಗೂ ಮಂಡ್ಯಕ್ಕೂ ಭಾವನಾತ್ಮಕ ಸಂಬಂಧವಿದೆ:*
ಮೈಶುಗರ್ ಕಾರ್ಖಾನೆಯನ್ನು ಬಿಜೆಪಿ ನಾಯಕ ಹಾಗೂ ಉದ್ಯಮಿ ಮುರುಗೇಶ್ ನಿರಾಣಿ ಅವರಿಗೆ ಮಾರುವ ವಿಚಾರವಾಗಿ ಹಳೇ ಮೈಸೂರು ಭಾಗದ ನಾಯಕರಾಗಿ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನಾನು ಅಖಂಡ ಕರ್ನಾಟಕದ ನಾಯಕ. ಕೇವಲ ಹಳೇ ಮೈಸೂರು ಭಾಗದ ನಾಯಕ ಅಲ್ಲ. ಕಾರ್ಖಾನೆಯನ್ನು ಅವರದೇ ಪಕ್ಷದ ನಾಯಕರಿಗೆ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಂಡ್ಯ ಜನರಿಗೂ ಮೈಶುಗರ್ ಕಾರ್ಖಾನೆಗೂ ಭಾವನಾತ್ಮಕ ಸಂಬಂಧವಿದೆ. ಅದು ವ್ಯಾಪಾರ ವಸ್ತುವಾಗಲು ಸಾಧ್ಯವಿಲ್ಲ. ಖಾಸಗಿಯವರು ಕಾರ್ಖಾನೆ ನಡೆಸಬಹುದು ಸರ್ಕಾರ ನಡೆಸಲು ಸಾಧ್ಯವಿಲ್ಲವೇ? ಏನೇನು ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಿಕೊಂಡರೆ ಸಾಕು. ಕಾರ್ಖಾನೆಗೆ ದೊಡ್ಡ ಪ್ರಮಾಣದ ಆಸ್ತಿ ಇದೆ. ಸರ್ಕಾರಕ್ಕೆ ಕಾರ್ಖಾನೆ ನಡೆಸಲು ಆಗದಿದ್ದರೆ ಹೇಳಲಿ, ಅದನ್ನು ಹೇಗೆ ನಡೆಸುವುದು ಅಂತಾ ನಾವು ತೋರಿಸುತ್ತೇವೆ.