Wednesday, 30th October 2024

ಡಿ.ಜೆ.ಹಳ್ಳಿ ಗಲಭೆ; ಕೇಂದ್ರಕ್ಕೆ ವರದಿ ಸಲ್ಲಿಕೆ

ಬೆಂಗಳೂರು

ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಆಗಸ್ಟ್ 11ರಂದು ನಡೆದಿದ್ದ ಗಲಭೆಯ ಕುರಿತು ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ.

ನವೀನ್ ಎನ್ನುವ ವ್ಯಕ್ತಿ ಮುಹಮ್ಮದ್ ಪೈಗಂಬರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ನೂರಾರು ಜನರು ರಾತ್ರೋ ರಾತ್ರಿ ವಾಹನಗಳು ಹಾಗೂ ಶಾಸಕರ ಮನೆಗೂ ಬೆಂಕಿ ಹಚ್ಚಿ ಗಲಭೆ ನಡೆಸಿದ್ದರು.

ಈ ಗಲಭೆಯಲ್ಲಿ ಎಸ್‍ಡಿಪಿಐ ಪಾತ್ರ ಇದೆ ಎನ್ನುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಒತ್ತಡವೂ ಬಂದಿತ್ತು. ಅಲ್ಲದೇ ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರ ಇದೆ ಎನ್ನುವ ಅನುಮಾನವಿದ್ದು, ಈ ಕುರಿತು ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುತ್ತಿದ್ದು, ಇದುವರೆಗೂ ಗಲಭೆಯಲ್ಲಿ 300 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಘಟನೆ ನಡೆದ ನಂತರ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಹಾಗೂ ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಕೇಳಿ ಬಂದಿರುವ ಆಗ್ರಹದ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.