Monday, 28th October 2024

ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ಮೋದಿಯವರ ಸಾಧನೆ : ಸಿದ್ದರಾಮಯ್ಯ

ಬೆಂಗಳೂರು :

ಕೇಂದ್ರದ ಎನ್‍ಡಿಎ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಯುವಕರಿಗೆ, ರೈತರು, ಕಾರ್ಮಿಕರಿಗೆ ಅನ್ಯಾಯ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ.

ಕಳೆದ ಒಂದು ವರ್ಷದಲ್ಲಿ ಕೇಂದ್ರದ ಸಾಧನೆ ದೊಡ್ಡ ಸೊನ್ನೆ. ರೈತರು, ಯುವಕರು ಹಾಗೂ ಕಾರ್ಮಿಕರಿಗೆ ಕೇಂದ್ರದಿಂದ ಭಾರಿ ಅನ್ಯಾಯವಾಗಿದೆ. ವೈಫಲ್ಯಗಳನ್ನು ಹೇಳುತ್ತಾ ಹೋದರೆ ಗಂಟೆಗಟ್ಟಲೆ ಸಮಯವಾಗುತ್ತದೆ. ರೈತ, ಕಾರ್ಮಿಕ, ಜನ ವಿರೋಧಿ ಆಡಳಿತ ವಿರೋಧಿ ಆಡಳಿತ ನೀಡಿರುವುದೇ ಮೋದಿಯವರ ಬಹುದೊಡ್ಡ ಸಾಧನೆ.

ಇದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಭಿಪ್ರಾಯ. ಕೇಂದ್ರ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ದೇಶದ ಜನತೆ ಮೋದಿಯವರ ಮೇಲೆ ವಿಶ್ವಾಸ ಇಟ್ಟು ಎರಡನೇ ಅವಧಿಗೂ ಅವರಿಗೆ ಪ್ರಧಾನಿಯಾಗುವ ಅವಕಾಶ ಮಾಡಿಕೊಟ್ಟರು.
ಮೊದಲ ಅವಧಿಯಲ್ಲಿ ಮೋದಿಯವರ ಆಡಳಿತ ಎಲ್ಲ ದೃಷ್ಟಿಕೋನದಿಂದಲೂ ಸಂಪೂರ್ಣವಾಗಿ ವೈಫಲ್ಯ ಕಂಡಿತ್ತು. ಜನರಿಗೆ ನೀಡಿದ ಯಾವುದೇ ಭರವಸೆಯನ್ನೂ ಅವರು ಈಡೇರಿಸಲಿಲ್ಲ. ಸುಳ್ಳುಗಳ ಸರಮಾಲೆಯನ್ನೇ ಅವರು ಜನರ ಮುಂದೆ ಪೋಣಿಸಿದ್ದರು. ಆರನೇ ವರ್ಷದಲ್ಲೂ ಅವರ ಸುಳ್ಳುಗಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ.
ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿಯವರು ದೇಶದ ಜನತೆಗೆ ಪತ್ರ ಬರೆದಿದ್ದು, ತ್ರಿವಳಿ ತಲಾಖ್, ಅಯೋಧ್ಯೆ ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಾರೆ. ರೈತರಿಗೆ ತಿಂಗಳಿಗೆ ಆರು ಸಾವಿರದಂತೆ 72 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದಿದ್ದಾರೆ. ರಾಮಮಂದಿರ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇಂದ್ರ ಸರ್ಕಾರದ ಗೆಲುವು ಅಲ್ಲ. ಅದು ಸರ್ಕಾರದ ಸಾಧನೆ ಏನಲ್ಲ. ಕಾಶ್ಮೀರ, ತ್ರಿವಳಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶ ಹೊರಬಿದ್ದಿದೆ. ಇದೂ ದೊಡ್ಡ ಸಾಧನೆ ಏನಲ್ಲ ಎಂಬುದು ನನ್ನ ಅಭಿಪ್ರಾಯ.
ದೇಶದ ಬಡತನ, ನಿರುದ್ಯೋಗ, ರೈತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಪರಿಹಾರ ಏನು ಎಂಬುದರ ಬಗ್ಗೆ ಮೋದಿಯವರು ಪ್ರಸ್ತಾಪ ಮಾಡಿಲ್ಲ. ಕಪ್ಪು ಹಣ ವಾಪಸ್, ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮೆ, ಯುವಕರಿಗೆ ಉದ್ಯೋಗ, ಜಿಡಿಪಿ ಬೆಳವಣಿಗೆ ಬಗ್ಗೆ ಪ್ರಧಾನಿಯವರೇಕೆ ಮಾತನಾಡುವುದಿಲ್ಲ.
ಜಿಡಿಪಿ ಬೆಳವಣಿಗೆ ಹನ್ನೊಂದು ವರ್ಷಗಳಲ್ಲೇ ತೀರಾ ಕೆಳಮಟ್ಟಕ್ಕೆ (4.2) ಹೋಗಿದೆ. ಶ್ರೀಲಂಕಾ, ನೇಪಾಳ ಪಾಕಿಸ್ತಾನ, ಬಾಂಗ್ಲಾ ದೇಶಕ್ಕಿಂತ ಹಿಂದಕ್ಕೆ ಹೋಗಿದ್ದೇವೆ. ನನ್ನ ಪ್ರಕಾರ ಈ ವರ್ಷ ನಕಾರಾತ್ಮಕ ಬೆಳವಣಿಗೆಯಾಗಲಿದೆ. ನಿರುದ್ಯೋಗ ಪ್ರಮಾಣ ಕಳೆದ 50 ವರ್ಷಗಳಲ್ಲಿಯೇ ಈ ಮಟ್ಟದಲ್ಲಿ ಏರಿಕೆಯಾಗಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಏನು ? ಕೈಗಾರಿಕೆ ವಲಯದಲ್ಲಿ ಹೂಡಿಕೆ ಎಷ್ಟಾಗಿದೆ ? ಎಂಬುದರ ಬಗ್ಗೆ ಪ್ರಧಾನಿಯವರು ಅಂಕಿ-ಸಂಖ್ಯೆ ಸಮೇತ ವಿವರಿಸಬೇಕು.
ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯುವುದು ಅವರ ಮಾಡಿರುವ ಸಾಧನೆಯ ಮೇಲೆ ಅಳೆಯಬೇಕೇ ಹೊರತು ಭಾವನಾತ್ಮಕ ವಿಚಾರಗಳನ್ನು ಮುಂದಿಟುಕೊಂಡು ಬೆಂಕಿ ಹಚ್ಚುವುದು ಆ ಮೂಲಕ ನಾಯಕತ್ವ ಅಳೆಯುವುದಲ್ಲ. ಪತ್ರ ಬರೆಯುವ ಬದಲು ಮೋದಿಯವರು ಪತ್ರಿಕಾಗೋಷ್ಠಿ ಕರೆದು ವಿವರಣೆ ನೀಡಬಹುದಲ್ಲ. ಅವರ ದೃಷ್ಟಿಯಲ್ಲಿ ಮಾಧ್ಯಮದವರು ಅಸ್ಪøಶ್ಯರು. ಇದು ತಮಾಷೆಗೆ ಹೇಳುವ ಮಾತಲ್ಲ. ಎಲ್ಲದರ ಬಗ್ಗೆ ವಿವರಣೆ ಕೇಳುತ್ತಾರೆ ಎಂಬ ಕಾರಣಕ್ಕೆ ಅವರು ಮಾಧ್ಯಮ ಪತ್ರಿತಿನಿಧಿಗಳನ್ನು ಭೇಟಿಯಾಗುವುದಿಲ್ಲ.
ಕೃಷಿ ಕ್ಷೇತ್ರ ಸ್ಥಿರವಾಗಿದೆ ಎಂದು ಮೋದಿಯವರು ಹೇಳುತ್ತಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ತೊಗರಿಯನ್ನೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಆಗಲಿಲ್ಲ. ರೈತರಿಗೆ ವರ್ಷಕ್ಕೆ ಆರು ಸಾವಿರ ಕೊಟ್ಟಿದ್ದೇವೆ ಎನ್ನುತ್ತಾರೆ. ತಿಂಗಳಿಗೆ 500 ರೂ. ಸಾಕಾಗುವುದೇ ಅವರಿಗೆ. ಇದು ದೊಡ್ಡ ಸಾಧನೆಯೇ ? ಆದರೂ ರೈತರ ಆತ್ಮಹತ್ಯೆ ನಿಂತಿಲ್ಲವೇಕೆ ? ರೈತರ ಪರವಾಗಿದ್ದರೆ ಅವರಿಗೆ ಮಾರಕವಾಗುವಂತೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದೇಕೆ ?
ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಕಾರ್ಮಿಕ ವಿರೋಧಿ ಧೋರಣೆ. ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ಗಾಯದ ಮೇಲೆ ಇದು ಬರೆ ಎಳೆದಂತೆ. ಅನ್ನ, ಆಹಾರ, ಔಷಧ ಇಲ್ಲದೆ ರೈಲು ಪ್ರಯಾಣದ ವೇಳೆ 80 ಕಾರ್ಮಿಕರು ಸಾವಿಗೀಡಾಗಿದ್ದಾರೆ. ಇದಕ್ಕೆ ಹೊಣೆ ಯಾರು ?
ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್. ಜಿಡಿಪಿಯಲ್ಲಿ ಶೇ.1ರಷ್ಟನ್ನೂ ಸರ್ಕಾರ ಕೊರೊನಾಗೆ ಖರ್ಚು ಮಾಡಿಲ್ಲ. ಜೇಬಲ್ಲಿ ದುಡ್ಡಿದ್ದರೆ ಬಿರಿಯಾನಿ ತಿನ್ನುವುದು, ಬಿರಿಯಾಗಿ ತಿಂದರೆ ತಾನೆ ದುಡಿಯಲು ಶ್ರಮಿಕ ವರ್ಗದವರಿಗೆ ಶಕ್ತಿ ಬರುವುದು.
ಅಂತ್ಯೋದಯ ಈಗ ಆರಂಭವಾಗಿದೆ ಎನ್ನುತ್ತಾರೆ. ಇದು ಅಂತ್ಯೋದಯ ಅಲ್ಲ. ವಿನಾಶ. ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಕೊರೊನಾ ಪರೀಕ್ಷೆ ಪ್ರಮಾಣ ದೇಶ ಮತ್ತು ರಾಜ್ಯದಲ್ಲಿ ತೀರಾ ಕಡಿಮೆ ಇದೆ.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಭಾವನಾತ್ಮಕವಾಗಿ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ದೇಶದಲ್ಲಿ ಸೋಂಕು ಕಂಡು ಬಂದ ಕೂಡಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧಿಸಿದ್ದರೆ, ಟ್ರಂಪ್ ಕಾರ್ಯಕ್ರಮ ನಡೆಸದೇ ಹೋಗಿದ್ದರೆ, ತಬ್ಲಿಘ್‍ಗಳ ಸಮಾವೇಶಕ್ಕೆ ಅನುಮತಿ ಕೊಡದೇ ಹೋಗಿದ್ದರೆ ಸೋಂಕು ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ. ಲಕ್ಷಾಂತರ ವಲಸಿಗ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜವಾಬ್ದಾರಿ ಹೊರುವವರು ಯಾರು ? ಲಾಕ್‍ಡೌನ್ ಜಾರಿಗೆ ತರುವ ಮುನ್ನ ಈ ಎಲ್ಲದರ ಬಗ್ಗೆ ಆಲೋಚಿಸಲಿಲ್ಲವೇ ? ಸಂಘ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕರು ನೊಂದವರ ನೆರವಿಗೆ ನಿಲ್ಲದೇ ಹೋಗಿದ್ದರೆ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಆಗುತ್ತಿತ್ತು.
ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹತ್ತು ತಿಂಗಳಾಗಿದೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಈ ವರೆಗೆ ಸೂರು ಒದಗಿಸಲಿಲ್ಲ. ಪ್ರವಾಹದಿಂದ ಒಂದು ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದರೂ ಪ್ರಧಾನಿಯವರು ಬಂದು ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಹೇಳುವ ಧೈರ್ಯ ಯಡಿಯೂರಪ್ಪ ಅವರಿಗೆ ಇದೆಯೇ ?
ಕೇಂದ್ರದಿಂದ ಹಣಕಾಸು ನೆರವು ಬರುವ ವಿಚಾರದಲ್ಲಿಯೂ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದರೂ ಯಡಿಯೂರಪ್ಪ ಅವರು ಕೇಳುವ ಸಾಹಸ ಮಾಡಲಿಲ್ಲ. ಬಿಜೆಪಿಯ 25 ಸಂಸದರಿದ್ದರೂ ಧ್ವನಿ ಎತ್ತರಲಿಲ್ಲ. ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳುವುದೇ ?
ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ತೀವ್ರವಾಗಿ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿಲ್ಲ. ಗ್ಯಾಸ್ ಸಿಲಿಂಡರ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಿದಕ್ಕೇ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿಯವರು ಭಾರಿ ಪ್ರತಿಭಟನೆ ನಡೆಸಿದ್ದರು. ರಸ್ತೆಗಳಲ್ಲಿ ಒಲೆ ಹಚ್ಚಿ ವಿರೋಧ ಮಾಡಿದ್ದರು. ಬೀದಿಗಿಳಿಯುವುದು ಬಿಟ್ಟರೆ ಜನರ ಕಷ್ಟ ನಿವಾರಣೆ ಮಾಡುವುದು ಹೇಗೆ ಎಂಬುದೇ ಬಿಜೆಪಿಯವರಿಗೆ ತಿಳಿದಿಲ್ಲ. ಈಗ ಯಡಿಯೂರಪ್ಪ ಅವರು ಸಿಲಿಂಡರ್ ಅನ್ನು ತಲೆಯ ಮೇಲೆ ಹೊತ್ತು ತಿರುಗುವರೇ?

ವಿಧಾನಸಭೆಯ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಪ್ರಕಾಶ್ ರಾಥೋಡ್, ಬೈರತಿ ಸುರೇಶ್, ನಸೀರ್ ಅಹಮದ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿ.ಆರ್. ಸುದರ್ಶನ್, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.