ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಧೂಮಪಾನಿಗಳು, ಗುಟ್ಕಾ ಬಳಕೆದಾರರು ಸಿಗರೇಟ್, ತಂಬಾಕು ಬಳಸುವಾಗ ಕೈಬೆರಳುಗಳು ನೇರವಾಗಿ ತುಟಿ, ಬಾಯಿಗಳಿಗೆ ಸ್ಪರ್ಷವಾಗುವುದರಿಂದ ಕರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮೂಲಕ ಸಾವಿನ ದವಡೆಗೆ ಸಿಲುಕಿಸುತ್ತದೆ.
ಧೂಮಪಾನಿಗಳ ಶ್ವಾಸಕೋಶಗಳು, ಶ್ವಾಸನಾಳಗಳು ಆರೋಗ್ಯವಂತರ ಶ್ವಾಸಕೋಶ, ಶ್ವಾಸನಾಳಗಳಷ್ಟು ಕಾರ್ಯಕ್ಷಮತೆ ಹೊಂದಿರುವುದಿಲ್ಲ. ನಿಕೋಟಿನ್ ಹೊಗೆಯನ್ನು ಸತತವಾಗಿ ಸೇವಿಸುವುದರಿಂದ ಈ ಅಂಗಾಂಗಗಳು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಸೋಂಕಿಗೆ ಬಲಿಯಾಗುವ ಅಥವಾ ಹೆಚ್ಚು ರೋಗಲಕ್ಷಣ ಕಂಡುಬರುವ ಸಾಧ್ಯತೆ ಇದೆಯೆಂದು ಆರೋಗ್ಯ ಸಚಿವಾಲಯದ ತಜ್ಞರೊಬ್ಬರು ಹೇಳಿದ್ದಾರೆ.
ಕರೋನಾ ಸೋಂಕು ಧೂಮಪಾನಿಗಳಲ್ಲಿ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆಯೆಂದು ಅರೋಗ್ಯ ತಜ್ಞರು ಅಭಿಪ್ರಾಯಿಸಿದ್ದಾರೆ. ಹಾಗೂ ಸಿಗರೇಟ್, ಹುಕ್ಕಾ ನಳಿಕೆ ಹಂಚುವುದರಿಂದಲೂ ಕರೋನಾ ಹರಡಲು ಸುಲಭ ದಾರಿ ಮಾಡಿಕೊಡಲಾಗುತ್ತದೆ. ಜಗಿಯುವ ತಂಬಾಕು ಉತ್ಪನ್ನಗಳು(ಖೈನಿ, ಗುಟ್ಕಾ, ಪಾನ್, ಝರ್ದಾ ಮೊದಲಾದವು) ಬಳಕೆದಾರರಲ್ಲಿ ಉಗುಳುವಿಕೆಯನ್ನು ಬಯಸುತ್ತದೆ. ಸಾಂಕ್ರಾಮಿಕ ರೋಗ ಹರಡಲು ಇದು ಕೂಡ ಕಾರಣವಾಗುತ್ತದೆ. ಆದ್ದರಿಂದ ಸಾರ್ವಜನಿಕವಾಗಿ ಉಗಿಯುವಂತಹ ತಂಬಾಕು ಬಳಕೆ ಮಾಡುವುದನ್ನು ನಿಯಂತ್ರಿಸಲು ಸಾಂಕ್ರಾಮಿಕ ರೋಗ ತಜ್ಞರು ಸಲಹೆ ನೀಡಿದ್ದಾರೆ.
ಧೂಮಪಾನವು ಕರೋನಾಗೆ ಅಪಾಯವನ್ನು ಹೆಚ್ಚಿಸಿದೆ ಮತ್ತು ವೈರಸ್ ಸೋಂಕಿಗೆ ಒಳಗಾದ ಜನರಲ್ಲಿ ಫಲಿತಾಂಶವನ್ನು ಇನ್ನಷ್ಟು ಹದಗೆಡಿಸಿದೆ ಎಂಬುವುದಕ್ಕೆ ಪುರಾವೆಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ತಿಳಿಸಿದ್ದಾರೆ.
ಸಚಿವಾಲಯ ಹೊರಡಿಸಿದ ಎರಡು ಪುಟಗಳ ಸಲಹಾ ಕೈಪಿಡಿ ಪ್ರಕಾರ, ಧೂಮಪಾನ, ಇ-ಸಿಗರೆಟ್ಗಳು, ತಂಬಾಕು, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳಿಂದ ಶ್ವಾಸನಾಳಗಳಿಗೆ ಹಾನಿಯಾಗುವುದರಿಂದ ಹಾಗೂ ಶ್ವಾಸಕೋಶದ ರೋಗನಿರೋಧಕ ಕ್ರಿಯೆಯಲ್ಲಿನ ಇಳಿಕೆಯಿಂದಾಗಿ ಶ್ವಾಸಕೋಶದ ಸೋಂಕಿನ ಅಪಾಯ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ.
ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ದೀರ್ಘಕಾಲದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಾವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಂಭಾವ್ಯ ಸಾಧ್ಯತೆಯಿದೆ. ಮುಖ್ಯವಾಗಿ ಸಾಂಕ್ರಾಮಿಕ ರೋಗದಂತಹ ಕಾಲದಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಿದೆ. ಭಾರತದಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ 63% ಸಾವುಗಳು ಇಂತಹ ಕಾಯಿಲೆಗಳಿಂದಲೇ ಸಂಭವಿಸುತ್ತದೆ ಎಂದು ಅಂದಾಜಿಸಲಾಗಿದೆ ಹಾಗು ಇವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ತಂಬಾಕು ಬಳಕೆಯು ಕ್ಷಯ ಮತ್ತು ಉಸಿರಾಟದ ಸೋಂಕುಗಳಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಅಪಾಯಕಾರಿ ಅಂಶವಾಗಿದೆ.
……..
ಕರೋನಾದಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಳ
ಕರೋನಾ ಸೋಂಕು ಹಲವು ವಿಧದ ಅವಾಂತರಗಳನ್ನು ತಂದಿಟ್ಟಿದೆ. ಸಾಮಾಜಿಕ ಅಂತರ, ಲಾಕ್ಡೌನ್ ಮುಂತಾದವುಗಳಿಂದ ತಮ್ಮ ಸ್ನೇಹ ವಲಯದೊಂದಿಗೆ ಸೇರಿಕೊಳ್ಳಲಾಗದ ಒಂಟಿತನ, ಉದ್ಯೋಗ ನಷ್ಟ, ಆರ್ಥಿಕ ನಷ್ಟ, ರೋಗ ಭಯ ಮುಂತಾದವುಗಳು ಜನರನ್ನು ಖಿನ್ನತೆಯೆಡೆಗೆ ದೂಡಿದೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಒತ್ತಡ ಕಳೆಯಲು ತಂಬಾಕು, ಆಲ್ಕೊಹಾಲ್ ಮೊರೆ ಹೋಗುತ್ತಿದ್ದಾರೆ. ಇದೂ ಕೂಡಾ ಪರೋಕ್ಷವಾಗಿ ಆತ್ಮಹತ್ಯೆ ಸ್ವರೂಪದ್ದೇ ಕ್ರಿಯೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಎಚ್ಚರಿಕೆಯ ನಿಮಿತ್ತ ಅರ್ಥಮಾಡಿಕೊಳ್ಳಬಹುದು.
|
|