Tuesday, 26th November 2024

ನೀವೆಷ್ಟೇ ಕಾಲ್ ಮಾಡಿದ್ರೂ ವಲ್ಲೆ ವಲ್ಲೆ  ಎನ್ನುವ ಜೊಲ್ಲೆ !

ವಿಶ್ವವಾಣಿ ವಿಶೇಷ

“ರಿಯಾಲಿಟಿ ಚೆಕ್”

ಮೊಬೈಲ್ ನಲ್ಲಿ ನೀವು ಬಿಜೆಪಿ ರಾಜ್ಯ ಅಧ್ಯಕ್ಷರನ್ನು ಸುಲಭವಾಗಿ ಸಂಪರ್ಕಿಸಬಹುದು. ಮುಖ್ಯಮಂತ್ರಿಯವರನ್ನು ಸಹ ಸಂಪರ್ಕಿಸಬಹುದು. ಒಂದು ವೇಳೆ ಕರೆ ಸ್ವೀಕರಿಸದಿದ್ದರೆ, ಇವರಿಬ್ಬರೂ ವಾಪಸ್ ಕರೆ ಮಾಡುತ್ತಾರೆ. ಆದರೆ ಈ ಕನಿಷ್ಠ ಸೌಜನ್ಯವನ್ನು ನೀವು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ನಿರೀಕ್ಷಿಸುವ ಹಾಗಿಲ್ಲ.  ಇಂಥದ್ದೊಂದು ಮಾತು, ಅವರು ಕಳೆದ ಎರಡು ಅವಧಿಗಳಿಂದ ಪ್ರತಿನಿಧಿಸುತ್ತಿರುವ ನಿಪ್ಪಾಣಿ ಕ್ಷೇತ್ರದಲ್ಲಿ ಜನಜನಿತವಾಗಿದೆ.

ಇದನ್ನು ಖಾತ್ರಿಪಡಿಸಿಕೊಳ್ಳಲು ನಾವು ರಿಯಾಲಿಟಿ ಚೆಕ್ ಮಾಡಿದಾಗ, ಅವರ ಬಗ್ಗೆ ಹರಿದಾಡುತ್ತಿರುವ ಈ ಮಾತು ನಿಜ ಎಂಬುದು ದೃಢವಾಯಿತು. ಮೊದಲು, ಈ ನಂಬರ್ (9900559874)  ಸಚಿವೆ ಜೊಲ್ಲೆ ಅವರದ್ದೇ ಎಂದು ಖಚಿತಪಡಿಸಿಕೊಂಡೆವು. ನಮ್ಮ ನಾಲ್ವರು ವರದಿಗಾರರು ಕಳೆದ ಹತ್ತು ದಿನಗಳಿಂದ ಈ ಮೊಬೈಲ್ ನಂಬರಿಗೆ ಫೋನ್ ಮಾಡುತ್ತಿದ್ದರೆ, ಸಚಿವೆ ಕಾಲ್ ಸ್ವೀಕರಿಸಲಿಲ್ಲ.

ನಂತರ ಇದೇ ನಂಬರಿಗೆ, ನಿಪ್ಪಾಣಿಯ ಎಂಟು ಜನರಿಂದ, ಬೆಳಗಾವಿಯ ಮೂವರಿಂದ, ಎಕ್ಸಾಂಬಾದ ನಾಲ್ವರಿಂದ ಬೇರೆ ಬೇರೆ ಅವಧಿಗೆ ಫೋನ್ ಮಾಡಿಸಿದಾಗಲೂ ಸಚಿವೆ ಫೋನ್ ಸ್ವೀಕರಿಸಲಿಲ್ಲ.

ಈ ಮಧ್ಯೆ, ಒಮ್ಮೆ ಸಚಿವೆಗೆ ಫೋನ್ ಮಾಡಿದಾಗ ಸ್ವತಃ ಅವರೇ ಕರೆ ಸ್ವೀಕರಿಸಿದರು. ಆದರೆ ಒಳಬಾಯಲ್ಲಿ, ‘ನಾನು ಡಿಸಿ ಸಾಹೇಬರ ಜತೆಗೆ ಮೀಟಿಂಗಿನಲ್ಲಿದ್ದೇನೆ. ನಂತರ ಮಾತಾಡುತ್ತೇನೆ‘ ಎಂದು ಕರೆ ಕಟ್ ಮಾಡಿದರು. ಒಂದು ವೇಳೆ ಮಂತ್ರಿಯವರ ಸಮ್ಮುಖದಲ್ಲಿ, ಡಿಸಿಗೆ ಫೋನ್ ಮಾಡಿದಾಗ, ಅವರು ಒಳಬಾಯಲ್ಲಿ ಹಾಗೆ ಹೇಳಿದ್ದರೆ ಪರವಾಗಿರಲಿಲ್ಲ. ಆದರೆ ಡಿಸಿ ಮುಂದೆ ಸಚಿವೆ ಹಾಗೆ ಹೇಳಿದ್ದು ವಿಪರ್ಯಾಸ.

ಹಾಗಂತ ಜೊಲ್ಲೆ ಮೊಬೈಲ್ ನಲ್ಲಿ ಕರೆ ಮಾಡೊಲ್ಲ ಎಂದಲ್ಲ. ಕೆಲವು ಸಲ ಗಂಟೆಗಟ್ಟಲೆ ಮಾತಾಡುತ್ತಾರೆ. ಅದಕ್ಕೆ ಅವರ ಮೊಬೈಲ್ ಎಂಗೇಜ್ ಆಗಿರುವುದೇ ಸಾಕ್ಷಿ. ಆದರೆ ಕ್ಷೇತ್ರದ ಜನ ಫೋನ್ ಮಾಡಿದರೆ ಜಪ್ಪಯ್ಯ ಎಂದರೂ ಕರೆ ಸ್ವೀಕರಿಸುವುದಿಲ್ಲ.

ನಮ್ಮ ವರದಿಗಾರರು (ಆಗಸ್ಟ್ ಆರರಂದು) ಸತತವಾಗಿ ಹದಿನಾಲ್ಕು ಸಲ ಫೋನ್ ಮಾಡಿದರು. ಅಷ್ಟಾಗಿಯೂ ಫೋನ್ ಕರೆ ಸ್ವೀಕರಿಸದಿದ್ದಾಗ, ಅವರಿಗೆ ಎಸ್ಸೆಮ್ಮೆಸ್ ಮತ್ತು ವಾಟ್ಸಾಪ್ ಮೆಸೇಜ್ ಮಾಡಿ, ‘ಮೇಡಂ, ಅತಿ ತುರ್ತಾಗಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಹದಿನಾಲ್ಕು ಸಲ ಕರೆ ಮಾಡಿದ ನಂತರ ನಿಮಗೆ ಈ ಸಂದೇಶ ಇಡುತ್ತಿದ್ದೇನೆ. ಸಾಧ್ಯವಾದರೆ ತಿಳಿಸಿ, ನಾನೇ ಫೋನ್ ಮಾಡುತ್ತೇನೆ’ ಎಂಬ ಮೆಸೇಜ್ ಇಟ್ಟರೂ, ಇಲ್ಲಿಯ ತನಕ ಸಚಿವೆ ಫೋನ್ ಮಾಡಿಲ್ಲ.

ಇದೇ ಸಂದೇಶವನ್ನು ಮತ್ತಿಬ್ಬರು ಇಟ್ಟಾಗಲೂ, ಸಚಿವೆಯಿಂದ ನಿರುತ್ತರ.

ಬಿಜೆಪಿ ಸರಕಾರದ ಇತರ ಸಚಿವರ ಮೊಬೈಲ್ ಅಭ್ಯಾಸದ ಬಗ್ಗೆ ರಿಯಾಲಿಟಿ ಚೆಕ್ ನ್ನು ಮುಂದುವರಿಸಿದಾಗ ಕಂಡು ಬಂಡ ಸಂಗತಿಯೇನೆಂದರೆ,  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅಶ್ವಥನಾರಾಯಣ, ಸಚಿವ ಡಾ.ಸುಧಾಕರ, ಜಗದೀಶ ಶೆಟ್ಟರ್, ಈಶ್ವರಪ್ಪ ಅವರ ವೈಯಕ್ತಿಕ ನಂಬರಿಗೆ ಫೋನ್ ಮಾಡಿದಾಗ, ಇವರೆಲ್ಲರೂ ತಾವೇ ಕರೆ ಸ್ವೀಕರಿಸಿದರು. ಕಂದಾಯ ಸಚಿವ ಅಶೋಕ ಮತ್ತು ಗೃಹ ಸಚಿವ ಬೊಮ್ಮಾಯಿ ಕರೆ ಸ್ವೀಕರಿಸದಿದ್ದರೂ, ನಂತರ ಕರೆ ವಾಪಸ್ ಮಾಡಿದರು.

ಕಾಂಗ್ರೆಸ್ ನಾಯಕರಾದ ದಿನೇಶ ಗುಂಡೂರಾವ್, ಡಿ.ಕೆ. ಶಿವಕುಮಾರ, ಕೃಷ್ಣಭೈರೇಗೌಡ ಅವರು ಖುದ್ದಾಗಿ ಕರೆ ಸ್ವೀಕರಿಸಿದರು. ಕರೆ ಮಾಡಿದ ಒಂದು ಗಂಟೆಯ ನಂತರ ಆರ್.ವಿ.ದೇಶಪಾಂಡೆ ಅವರು ಕರೆ ವಾಪಸ್ ಮಾಡಿದರು.