Wednesday, 30th October 2024

ನೆರೆ ಅಧ್ಯಯನಕ್ಕೆ ಶೀಘ್ರ ತಂಡಗಳ ನೇಮಕ: ಡಿ.ಕೆ ಶಿವಕುಮಾರ್

ಬೆಂಗಳೂರು:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಹೆಚ್ಚಾಗಿರುವ ಪರಿಣಾಮ ಪ್ರವಾಹ ಎದುರಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಪರಿಸ್ಥಿತಿಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಹಾಗೂ ಅಲ್ಲಿನ ಜನರಿಗೆ ಧೈರ್ಯ ತುಂಬಲು ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ 4-5 ತಂಡಗಳನ್ನು ರಚಿಸಿ ವಿವಿಧ ಭಾಗಗಳಿಗೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಹುಣಸೂರಿನಲ್ಲಿ ಪರಿಸ್ಥಿತಿ ಅವಲೋಕಿಸಲು ಶನಿವಾರ ಹೊರಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು…

ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿದೆ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿಗಳು ಸಂಭವಿಸಿದೆ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಸಚಿವರುಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದಾರೆ ಹಾಗೂ ಈ ಜಿಲ್ಲೆಗಳಿಗೆ 5 ಕೋಟಿ ಅನುದಾನ ನೀಡುವುದಾಗಿ ಹೇಳಿರುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಲು ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಹಾಗೂ ಇತರೆ ಮುಖಂಡರುಗಳು ಒಳಗೊಂಡಂತೆ ತಂಡಗಳನ್ನು ರಚನೆ ಮಾಡಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು.

ಸರ್ಕಾರ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈಗಷ್ಟೇ ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಸರ್ಕಾರ 7.5 ಲಕ್ಷ ಚಾಲಕರಿಗೆ ಹಣ ನೀಡುವುದಾಗಿ ಘೋಷಿಸಿತ್ತು. ಈವರೆಗೂ 1.20 ಲಕ್ಷ ಚಾಲಕರಿಗೆ ಮಾತ್ರ ಕೊಟ್ಟು ದಾಖಲೆ ನೀಡಿ ಎಂದು ಹೇಳಿ ಮುಂದಕ್ಕೆ ಹಾಕುತ್ತಿದೆ. ಆಶಾ ಕಾರ್ಯಕರ್ತೆಯರಾಗಲಿ, ಸವಿತಾ ಸಮಾಜದವರಾಗಲಿ, ನೇಕಾರರಾಗಿರಲಿ ಯಾರಿಗೂ ಹಣ ತಲುಪಿಲ್ಲ. 11 ನೇಕಾರರು ಈವರೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಬರೀ 2 ಸಾವಿರ ಕೊಡುವುದಾಗಿ ಘೋಷಿಸಿದ ಸರ್ಕಾರ ಅದನ್ನು ಕೊಟ್ಟಿಲ್ಲ. ಇಂತಹ ವಿಚಾರಗಳು ಬೇಕಾದಷ್ಟಿವೆ. ನಮಗೆ ಈ ಸಮಯದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ. ಆದರೆ ನಾವು ಸರ್ಕಾರವನ್ನು ಪ್ರಶ್ನೆಸಿದೇ ಬೇರೆ ವಿಧಿ ಇಲ್ಲ. ನಾವು ಜನರ ಧ್ವನಿಯಾಗಿ ಅವರ ಜತೆ ನಿಲ್ಲಬೇಕಿದ್ದು, ನಾನು ಆ ಕೆಲಸ ಮಾಡುತ್ತೇನೆ.

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದು, ಈ ಸಮಯದಲ್ಲಿ ನಾನು ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸರ್ಕಾರದ ಬೇರೆ ಮಂತ್ರಿಗಳು ಈ ಜವಾಬ್ದಾರಿ ನಿರ್ವಹಿಸಬೇಕಿತ್ತು. ಆದರೆ ಅವರ ಸಂಭ್ರಮವೇ ಬೇರೆ ಇದೆ. ಸಮಾಯದಲ್ಲಿ ಅಸೂಯೆ, ದ್ವೇಷವನ್ನು ಬಿತ್ತುವ, ಸಮಾಜ ಒಡೆಯುವ ಹೇಳಿಕೆ ನೀಡುವುದರಲ್ಲಿ ಅವರು ನಿರತರಾಗಿದ್ದಾರೆ.

ಈಗ ನಾನು ಮೈಸೂರು, ಮಡಿಕೇರಿ ಭಾಗಗಳಿಗೆ ಭೇಟಿ ನೀಡಲು ಹೊರಡುತ್ತಿದ್ದೇನೆ. ಜನರ ನೋವಿಗೆ ನೆರವಾಗಲು ಹೊರಟಿದ್ದೇನೆ.

ಜನರಿಗೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ

ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಉತ್ತರ ಕೊಡಿ, ಲೆಕ್ಕ ಕೊಡಿ ಆಂದೋಲನವನ್ನು ನಾವು ನಿಲ್ಲಿಸಿಲ್ಲ. ಜನರಿಗೆ ನ್ಯಾಯ ಸಿಗುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ. ಲೆಕ್ಕ ಕೊಡಿ ಅಂತಾ ಕೇಳಿದ್ದೇವೆ, ಉತ್ತರ ಕೊಡಿ ಅಂತಾ ಕೇಳಿದ್ದೇವೆ, ನ್ಯಾಯ ಕೊಡಿ ಅಂತಾ ಕೇಳುತ್ತೇವೆ.

ಮಂತ್ರಿಗಳು ವಿಶ್ರಾಂತಿ ತೆಗೆದುಕೊಳ್ಳಲಿ
ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪ್ರವಾಹದ ಸಮಯದಲ್ಲಿ ತಮ್ಮ ಜಿಲ್ಲೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಅವರಿಗೆ ತೊಂದರೆ ಕೊಡಬೇಡಿ. ಅವರು ಮಲಗಿಕೊಂಡಿರಲಿ, ವಿಶ್ರಾಂತಿ ಪಡೆದುಕೊಂಡು ಆರೋಗ್ಯ ನೋಡಿಕೊಳ್ಳಲಿ’ ಎಂದರು.

ಅವರೇ ಮುಖ್ಯಮಂತ್ರಿಗಳಿಗೆ ಅಗೌರವ ತೋರುತ್ತಿದ್ದಾರೆ

ಪ್ರವಾಹ ವಿಚಾರವಾಗಿ ನಮ್ಮ ಪಕ್ಷದ ಯಾವುದೇ ನಾಯಕರು ಹೇಳಿಕೆ ನೀಡಿಲ್ಲ. ನಾನು ಈಗಷ್ಟೇ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಬಗ್ಗೆ ಹಾಗೂ ಹೆಚ್ಚಿನ ಅನುದಾನ ನೀಡಿರುವ ಬಗೆಗಿನ ಹೇಳಿಕೆಯನ್ನು ತಿಳಿಸಿದ್ದೇನೆ. ಕುಂಬಳಕಾಯಿ ಕಳ್ಳ ಅಂದರೆ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನಾನೇನಾದರೂ ಹೇಳಿಕೆ ನೀಡಿದ್ದೀನಾ? ಸಿದ್ದರಾಮಯ್ಯನವರು ಆಸ್ಪತ್ರೆಯಿಂದ ಹೇಳಿಕೆ ನೀಡಿದ್ದಾರಾ? ನಾನು ಕಾಂಗ್ರೆಸ್ ಪಕ್ಷದ ಧ್ವನಿ, ಸಿದ್ದರಾಮಯ್ಯನವರು ವಿರೋಧ ಪಕ್ಷದ ಧ್ವನಿ. ನಾವ್ಯಾರು ಮಾತನಾಡಿಲ್ಲ ಎಂದ ಮೇಲೆ ಅವರಿಗೇಕೆ ನೋವಾಗುತ್ತಿದೆ. ಅವರ ಪಕ್ಷದವರೇ ಮುಖ್ಯಮಂತ್ರಿಗಳಿಗೆ ಅಗೌರವ ತೋರುತ್ತಿದ್ದಾರೆ. ಯಾವುದೇ ನಾಯಕರು ಎಲ್ಲಿ ಮಾತನಾಡಿದರು ನನಗೆ ಮಾಹಿತಿ ಬರುತ್ತದೆ. ಅವರಿಗೆ ಆರೋಗ್ಯ ಸರಿ ಇಲ್ಲ ಎನಿಸುತ್ತದೆ, ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು.