Tuesday, 26th November 2024

ಪಾಲಿಟೆಕ್ನಿಕ್ ಸಿಬ್ಬಂದಿ ವೇತನ ಪಾವತಿಗೆ ರಮೇಶ್ ಬಾಬು ಮನವಿ

ಬೆಂಗಳೂರು:

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿ ವೇತನವನ್ನು ಪಾವತಿ ಮಾಡಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಸಿಎಂಗೆ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಸರ್ಕಾರಿ ಪಾಲಿಟೆಕ್ನಿಕ್ ಸಿಬ್ಬಂದಿಯ ವೇತನ ಪಾವತಿ ಆಗಿಲ್ಲ. ಅದೇ ರೀತಿ ಎರಡು ತಿಂಗಳಿಂದ ಸಂಬಳವಿಲ್ಲದೆ ಅನುದಾನಿತ ಪಾಲಿಟೆಕ್ನಿಕ್ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ಒಂದೆಡೆ ಕೋವಿಡ್ ಮಹಾಮಾರಿ, ಮತ್ತೊಂದೆಡೆ ವೇತನ ರಹಿತ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಸಂಬಳಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್-19 ಸಮಸ್ಯೆ ಇರುವುದರಿಂದ ನೌಕರರು ಸಂಬಳವಿಲ್ಲದೆ ತಮ್ಮ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಸದರಿ ಸಮಸ್ಯೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಗಮನಕ್ಕೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳು ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ಪ್ರಾರಂಭಿಸಬೇಕಾಗಿದೆ. ಮಕ್ಕಳ ವಾರ್ಷಿಕ ಚಟುವಟಿಕೆಗಳ ಮೇಲೆ ಗಮನ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರ ವೇತನ ನಿಲುಗಡೆ ಶಿಕ್ಷಕರ ಹಾಗೂ ನೌಕರರ ಕುಟುಂಬಗಳ ಮೇಲೆ ಮಾನಸಿಕ ಒತ್ತಡ ನೀಡುವುದರ ಜೊತೆಗೆ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಆಗುತ್ತದೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

ಇಲಾಖೆಯಲ್ಲಿ ಸಂಪನ್ಮೂಲ ಅಥವಾ ಹಣದ ಕೊರತೆ ಇರುವುದಿಲ್ಲ. ಆದರೆ ಅಧಿಕಾರಿಗಳ ಸಮನ್ವಯದ ಕೊರತೆ ಮತ್ತು ಸಂಬಂಧಪಟ್ಟ ವಿಭಾಗದ ನೌಕರರ ನಿರ್ಲಕ್ಷ್ಯದ ಕಾರಣಕ್ಕೆ ವೇತನ ಪಾವತಿ ಸಮಸ್ಯೆ ಉದ್ಭವಿಸಿದೆ. ಹಾಗಾಗಿ ತಾವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೂಡಲೇ ಪಾಲಿಟೆಕ್ನಿಕ್ ನೌಕರರ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ‌ ಕಾರಣವಿಲ್ಲದೆ ವೇತನ ಪಾವತಿ ವಿಳಂಬಕ್ಕೆ ಕಾರಣಕರ್ತರಾದ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ರಮೇಶ್ ಬಾಬು ಆಗ್ರಹಿಸಿದ್ದಾರೆ.