Monday, 25th November 2024

ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

ದೆಹಲಿ:
ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿಯ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪರಿಶೀಲಿಸಿದ್ದಾರೆ.
‘ಭಾರತದ ಪಶ್ಚಿಮ ಕರಾವಳಿಯ ಕೆಲ ಭಾಗಗಳಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜನರಿಗೆ ಮನವಿ ಮಾಡುತ್ತಿದ್ದೇನೆ’ ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅರಬ್ಬಿ ಸಮುದ್ರದ ಮೇಲೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶವು ವಾಯಭಾರ ಕುಸಿತವಾಗಿ ಪ್ರಬಲಗೊಂಡಿದ್ದು, ಇದು ಚಂಡಮಾರುತಕ್ಕೆ ತಿರುಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿಸರ್ಗ ಚಂಡಮಾರುತ ಜೂನ್ 3 ರಂದು ಸಂಜೆ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ತೀರಗಳನ್ನು ದಾಟಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‍ ನ ಕರಾವಳಿ ಜಿಲ್ಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.