ಆಗ್ರಾ,
ಕೊರೋನಾ ಹಿಮ್ಮೆಟ್ಟಿಸಲು ದೇಶದಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ನಿಂದ ಪ್ರವಾಸೋದ್ಯಮ ಇಲಾಖೆ ಅತಿ ಹೆಚ್ಚು ಹಾನಿಯಾಗಿದ್ದು, ಅದರಲ್ಲೂ ವಿಶ್ವವಿಖ್ಯಾತ ತಾಜ್ ಮಹಲ್ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.
ಈಗ ದೇಶ ಅನ್ ಲಾಕ್ 1.0 ಮೂಲಕ ಆರ್ಥಿಕ ಚಟುವಟಿಗಳಿಗೆ ತೆರೆದುಕೊಳ್ಳುತ್ತಿರುವಾಗಲೇ ಪ್ರವಾಸೋದ್ಯಮ ವಲಯ 10 ಲಕ್ಷ ಕೋಟಿ ರೂ. ನಷ್ಟ ಎದುರಿಸುತ್ತಿರುವುದ ಹಾಗೂ 50 ದಶಲಕ್ಷ ಜನರ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿರುವುದು ತಿಳಿದು ಬಂದಿದೆ. ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ ನೇರ ಹಾಗೂ ಪರೋಕ್ಷ ಉದ್ಯೋಗ ಪಡೆದಿದ್ದ ಒಂದು ಮಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರವಾಸಿ ಮಾರ್ಗದರ್ಶಕರು, ಹೋಟೆಲ್, ರೆಸ್ಟೋರೆಂಟ್ ಗಳು, ಸಾರಿಗೆ ಮತ್ತು ಇತರ ಸಂಬಂಧಿ ವಲಯಗಳಿಗೆ ಸಂಬಂಧಿಸಿದ್ದಾಗಿದೆ.
ಈ ನಡುವೆ, ದೇಶದ ಅತಿ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿರುವ ಆಗ್ರಾದ ತಾಜ್ ಮಹಲ್ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಹಲವು ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿನಿತ್ಯ ಕನಿಷ್ಠ 20 ಸಾವಿರ ಪ್ರವಾಸಿಗರನ್ನು ಹೊಂದಿದ್ದ ತಾಜ್ ಮಹಲ್ ಈಗ ಜನರಿಲ್ಲದೆ ಬಿಕೋ ಅನ್ನುತ್ತಿದೆ. ಆದ್ದರಿಂದ ಇದನ್ನೇ ನಂಬಿಕೊಂಡ ಜನರು ಬೀದಿಗೆ ಬಿದ್ದಿದ್ದಾರೆ.
ಲಾಕ್ ಡೌನ್ ಘೋಷಣೆಯಾಗುವ ಒಂದು ತಿಂಗಳ ಮುಂಚೆಯಷ್ಟೇ ಅಂದರೆ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ತಾಜ್ ಮಹಲ್ ಗೆ ಭೇಟಿ ನೀಡಿದ್ದರಿಂದ ಇದು ವಿಶ್ವದ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತ್ತು. ಟ್ರಂಪ್ ಗೆ ತಾಜ್ ಮಹಲ್ ಮಾರ್ಗದರ್ಶನ ನೀಡಿದ ಸಿಂಗ್ , ಲಾಕ್ ಡೌನ್ ನಿಂದ ಎಲ್ಲರ ಜೀವನ ಅಲ್ಲೋಲಕಲ್ಲೋಲವಾಗಿದೆ. ನಾವು ನಮ್ಮ ಉಳಿತಾಯದ ಹಣದಿಂದ ಜೀವನ ನಡೆಸುತ್ತಿದ್ದೇವೆ. ಪ್ರವಾಸೋದ್ಯಮ ಶೀಘ್ರದಲ್ಲಂತೂ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದರು.