Wednesday, 30th October 2024

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೆ.5ರ ವರೆಗೂ ಕರಾವಳಿ, ದಕ್ಷಿಣ ಒಳನಾಡಿನ ಹಾಗೂ ರಾಜ್ಯದ ಪೂರ್ವಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದಾರೆ.
ಕಳೆದ 120 ವರ್ಷಗಳಲ್ಲಿ 4ನೇ ಬಾರಿಗೆ ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ವಿಶೇಷವಾಗಿದೆ. ಕೇಂದ್ರ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 3 ದಿನಗಳ ಕಾಲ ಉತ್ತರ ಭಾರತ, ಈಶಾನ್ಯ ರಾಜ್ಯಗಳು ಹಾಗೂ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಂಭವವಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್‌ನಲ್ಲಿ ಇಷ್ಟೊಂದು ಮಳೆ ಬಿದ್ದಿರುವುದು 1976ರ ಬಳಿಕ ಇದೇ ಮೊದಲು ಎಂದು ಇಲಾಖೆ ಹೇಳಿದೆ. ಜುಲೈ ತಿಂಗಳಲ್ಲಿ ಸರಾಸರಿಗಿಂತ ಶೇ.10ರಷ್ಟು ಕಡಿಮೆ ಮಳೆಯಾಗಿತ್ತು. ಆದರೆ, ಆಗಸ್ಟ್‌ನಲ್ಲಿ ದೇಶಾದ್ಯಂತ ಉತ್ತಮ ಮಳೆಯಾದ ಕಾರಣ, ಈ ದಾಖಲೆ ಸೃಷ್ಟಿಯಾಗಿದೆ.
ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 5ರವರಗೆ ವ್ಯಾಪಕ ಮಳೆಯಾಗಲಿದೆ. ಬೆಂಗಳೂರಿನಲ್ಲಿ ನಿತ್ಯ ರಾತ್ರಿ ಮಳೆ ಆಗುತ್ತಲೇ ಇದೆ. ಮುಂದಿನ ಎರಡು ದಿನಗಳವರಗೆ ಬೆಂಗಳೂರಿನಲ್ಲೂ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಕರಾವಳಿ ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಶಿರಾಡಿ, ಕುಮಟಾ, ಅಂಕೋಲಾ ತಲಾ ಎಂಟು ಸೆಂ.ಮೀ ಮಳೆಯಾಗಿದ್ದು, ಗೋಕರ್ಣ, ಕದರಾದಲ್ಲಿ ತಲಾ ಏಳು ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.