ಬೆಂಗಳೂರು:
‘ಯೋಗೇಶ್ವರ್ ಬಣ್ಣ ಹಾಕಿ ನಾಟಕ ಮಾಡುವುದರಲ್ಲಿ ನಿಸ್ಸೀಮ. ನಾವು ಅವನಂತೆ ಹಗಲು ಒಂದು, ರಾತ್ರಿ ಒಂದು ಕೆಲಸ ಮಾಡುವುದಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸದರು ಹೇಳಿದ್ದಿಷ್ಟು…
‘ಯೋಗೇಶ್ವರ್ ಅವರ ಹೇಳಿಕೆ ಗಮನಿಸಿದ್ದೇನೆ. ಇವಾಗ ಹುಚ್ಚು ಆಸ್ಪತ್ರೆಯಿಂದ ಬಿಡುಗಡೆ ಆಗಿ ಬಂದಿದ್ದಾರೆ ಅಂತ ಕಾಣುತ್ತೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ. ಬಿಜೆಪಿ ನಾಯಕರು ಅವನಿಗೆ ಒಳ್ಳೆಯ ಚಿಕಿತ್ಸೆ ಕೋಡಸಲಿ. ಭಗವಂತ ಒಳ್ಳೆಯ ಬುದ್ಧಿ ಕೊಡಲಿ.
ಈಗಷ್ಟೇ ಪರಿಷತ್ ಸದಸ್ಯನಾಗಿದ್ದು, ಬಾಯಿ ಚಪಲಕ್ಕೆ ಮಾತನಾಡುವುದು ಬಿಟ್ಟು, ಇನ್ನು ಮುಂದೆ ಬಿಜೆಪಿಗೆ ನಿಯತ್ತಾಗಿರಲಿ. ಕೇವಲ ಪ್ರಚಾರಕ್ಕೆ ಮಾತನಾಡುವುದು ಅವನ ಖಯಾಲಿ.
ಸಿಎಂ ಭೇಟಿ ಮಾಡಿದ್ದು ಕೊರೋನಾ ಹಾಗೂ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ. ನಮಗೆ ಒಳ ರಾಜಕೀಯ ಮಾಡಿ ಗೊತ್ತಿಲ್ಲ. ನಾವು ಒಳಗೊಂದು, ಹೊರಗೊಂದು ರಾಜಕೀಯ ಮಾಡುವುದಿಲ್ಲ.
ಇದೆ ಹದಿನೈದು ದಿನದ ಹಿಂದೆ ನಮ್ಮನ್ನು ಭೇಟಿ ಆಗಿದ್ದ. ಸಿಎಂ ಬದಲಾವಣೆ ಆಗ್ತಾರೆ ಅಂತ ಬಂದಿದ್ದ. ಈಗ ಈ ರೀತಿ ಹೇಳಿಕೆ ಕೊಟ್ಟಿದ್ದಾನೆ. ಅವ ಮುಂದೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಚಿಲ್ಲರೆ ರಾಜಕಾರಣ ಬಿಟ್ಟು ನೇರ ರಾಜಕಾರಣ ಮಾಡಲಿ.
ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಕೆಲಸಕ್ಕೆ ಸ್ಪಂದಿಸುತ್ತಾ ಬಿಜೆಪಿಗೆ ಪಕ್ಷಕ್ಕೆ ನಿಯತ್ತಾಗಿರಿ. ಯೋಗೇಶ್ವರ್ ಬಣ್ಣ ಹಾಕಿ ನಾಟಕ ಮಾಡುವುದರಲ್ಲಿ ನಿಸ್ಸೀಮ. ಮುಂಚೆಯಿಂದ ಅವನ ಬಂಡವಾಳ ನಮಗೆ ಗೊತ್ತು. ಆತ ಅವಶ್ಯಕತೆ ಇದ್ದಾಗ ಯಾರ ಕಾಲನ್ನ ಕೂಡ ಹಿಡಿಯುವ ಗಿರಾಕಿ.’
ಕುಮಾರಸ್ವಾಮಿ ಬಗ್ಗೆ ಗೌರವವಿದೆ:
ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಸುರೇಶ್, ‘ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳು. ಅವರ ಬಗ್ಗೆ ಅಪಾರ ಗೌರವ ಇದೆ. ಅವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ.’
ಕೋವಿಡ್ ಕುರಿತು ಸರ್ಕಾರ ಸುಳ್ಳು ಮಾಹಿತಿ:
‘ಸರ್ಕಾರ ತಪ್ಪು ಬುಲೆಟಿನ್ ಕೊಡುತ್ತಿದ್ದಾರೆ. ಇವರು ಕೇವಲ ‘ಎ’ ಸಿಂಪ್ಟಮ್ಸ್ ಇರುವವರನ್ನು ಮಾತ್ರ ಚೆಕ್ ಮಾಡುತ್ತಿದ್ದಾರೆ. ಸರ್ಕಾರ ಸ್ವಾಬ್ ಟೆಸ್ಟ್ ಸರಿಯಾಗಿ ಮಾಡಿತ್ತಿಲ್ಲ. ಸರಿಯಾಗಿ ಮಾಡಿದ್ರೆ ಬೆಂಗಳೂರಿನಲ್ಲಿ ೫ ಸಾವಿರ ಬರುತ್ತೆ. ಇವರು ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ್ದನ್ನು ಮಾತ್ರ ಹೇಳುತ್ತಿದ್ದಾರೆ.
ರಾಮನಗರ ಜಿಲ್ಲೆಯವರು 56 ಜನ ಕೋವಿಡ್ ನಿಂದ ಸತ್ತಿದ್ದಾರೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 30 ರಿಂದ 35 ಜನ ಸತ್ತಿದ್ದಾರೆ. ಇಂದು ರಾಜರಾಜೇಶ್ವರಿ ಮೆಡಿಕಲ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಅಲ್ಲಿ 56 ಜನ ಕೋವಿಡ್ ನಿಂದ ಸತ್ತುಹೋಗಿದ್ದಾರೆ.
ಸರ್ಕಾರ ಆಡಳಿತ ಸರಿ ಇಲ್ಲ, ಸರ್ಕಾರವೇ ಜನರ ಸಾವಿಗೆ ನೇರ ಕಾರಣ. ಜನರ ರಕ್ಷಣೆ ಬಗ್ಗೆ, ಸೋಂಕನ್ನು ತಡೆಯುವ ಬಗ್ಗೆ ಇವರು ಚಿಂತೆ ಮಾಡುತ್ತಿಲ್ಲ. ಗಿನ್ನಿಸ್ ರೆಕಾರ್ಡ್ ಮಾಡುವುದಕ್ಕೆ ಬೆಡ್ ಸಿದ್ಧಪಡಿಸಲು ಹೋಗುತ್ತಿದ್ದಾರೆ.
ಇದನ್ನು ಮಾನಿಟ್ರು ಮಾಡುವುದಕ್ಕೆ ಆಗುತ್ತಿಲ್ಲ, ಇವರು ಬೆಳಗ್ಗೆ ಒಂದು ಆರ್ಡರ್ ಮಾಡಿದ್ರೆ ಸಂಜೆ ಒಂದು ಆರ್ಡರ್ ಮಾಡುತ್ತಾರೆ.
ನಾನು ಆಸ್ಪತ್ರೆಯ ಸ್ಥಿತಿ ಬಗ್ಗೆ ಮಾತನಾಡಿದರೆ ರೋಗಿಗಳು ಮಾನಸಿಕವಾಗಿ ಕುಗ್ಗುತ್ತಾರೆ. ಹೀಗಾಗಿ ಆ ಬಗ್ಗೆ ಮಾತನಾಡುವುದಿಲ್ಲ.’