ಬೆಂಗಳೂರು:
ಜೆಡಿಎಸ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಗೌಡರನ್ನೇ ರಾಜ್ಯಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಒತ್ತಾಯ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ರಾಜ್ಯಸಭೆಗೆ ಸ್ಪರ್ಧಿಸಲು ದೇವೇಗೌಡರು ಇನ್ನೂ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿರುವ ಅವರು, ಕಾಂಗ್ರೆಸ್ನಿಂದ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು. ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. 3ನೇ ಅಭ್ಯರ್ಥಿಯನ್ನು ಕಣಕ್ಕಿ ಇಳಿಸಲು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯೆಯ ಕೊರತೆ ಇದೆ. ಎರಡೂ ಪಕ್ಷವನ್ನ ನೋಡಿದಾಗ ನಮಲ್ಲಿ ಸಂಖ್ಯೆ ಬಲ ಜಾಸ್ತಿ ಇದೆ. ಕಾಂಗ್ರೆಸ್, ಬಿಜೆಪಿಯಲ್ಲೂ ಅಭ್ಯರ್ಥಿಯನ್ನು ಹಾಕಿದಾಗ ನಾವು ಯೋಚನೆ ಮಾಡುತ್ತೇವೆ. ಇದುವರೆಗೂ ನಮ್ಮನ್ನು ಯಾವ ಕಾಂಗ್ರೆಸ್ ನಾಯಕರೂ ಸಂಪರ್ಕ ಮಾಡಿಲ್ಲ. ಆದರೆ, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು ಈ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ? ನಾನು ಮುಖ್ಯಮಂತ್ರಿ ಹುದ್ದೆಯನ್ನು ಅತ್ಯಂತ ಸಂತೋಷದಿಂದ ಬಿಟ್ಟು ಬಂದಿದ್ದೇನೆ. ಬಿಜೆಪಿ ಸರಕಾರವನ್ನು ಉರುಳಿಸಬೇಕು ಎಂದು ನಾನು ಯಾವ ಆಸಕ್ತಿಯನ್ನೂ ಇಟ್ಟುಕೊಂಡಿಲ್ಲ. ಸರ್ಕಾರದ ಲೋಪವನ್ನು ಬದಲಾಯಿಸಿಕೊಳ್ಳಿ ಅಂತ ಸಲಹೆ ನೀಡಿದ್ದೆ. ನನಗೆ ಆ ಸರಕಾರದ ಬಗ್ಗೆ ಆಸಕ್ತಿ ಇಲ್ಲ ಎನ್ನುವಾಗ ಆ ಸರಕಾರದ ಬಗ್ಗೆ ನಾನು ಯಾಕೆ ಯೋಚನೆ ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ಸಮಾಜಘಾತುಕ ಶಕ್ತಿಗಳಿಂದ ನಮ್ಮ ಸರ್ಕಾರ ಉರುಳಿತು. ಮಂತ್ರಿಯಾಗಬೇಕು ಎಂದು ನಮ್ಮ ಸರ್ಕಾರವನ್ನು ಉರುಳಿಸಿದರು. ಈಗ ಎಲ್ಲವನ್ನೂ ನಾನು ನೋಡುತ್ತಿದ್ದೇನೆ. ಅದೇ ಸಮಾಜಘಾತುಕ ಶಕ್ತಿಗಳು ಬಿಜೆಪಿ ಸರ್ಕಾರವನ್ನು ತೆಗೆಯಲು ಹೊರಟಿರುವ ಬಗ್ಗೆ ನೀವೇ ಹೇಳುತ್ತಿದ್ದೀರಿ. ಈ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.