Wednesday, 30th October 2024

ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕ್ವಾರಂಟೈನ್ ವಿನಾಯಿತಿ:

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ವಿದೇಶದಿಂದ ರಾಜ್ಯಕ್ಕೆೆ ಆಗಮಿಸುವವರಿಗೆ ರಾಜ್ಯ ಸರಕಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಿದ್ದು, ಕರೋನಾ ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲಿಯೇ 14 ದಿನ ಕ್ವಾರಂಟೈನ್ ಆಗುವಂತೆ ಸೂಚಿಸಿದೆ.

ಈ ಮೊದಲು ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ ಎಲ್ಲರೂ ಕಡ್ಡಾಾಯವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದು, ನಂತರ  ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. 60 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ, ದೀರ್ಘಕಾಲದ ಅನಾರೋಗ್ಯ ಸಮಸ್ಯೆೆಯಿಂದ ಬಳುತ್ತಿರುವವರಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ಇತ್ತು. ಸದ್ಯ ಸೋಂಕಿನ ಲಕ್ಷಣ ಇಲ್ಲದ ಎಲ್ಲರಿಗೂ ವಿನಾಯಿತಿ ನೀಡಲಾಗಿದ್ದು, ಲಕ್ಷಣ ಇದ್ದರೆ ಮಾತ್ರ ಕರೋನಾ ಕೇರ್ ಸೆಂಟರ್‌ಗೆ ಕರೆದೊಯ್ದು  ಪರೀಕ್ಷೆಗೊಳಪಡಿಸಲಾಗುತ್ತದೆ.

ಇನ್ನು ಹೋಂ ಕ್ವಾರಂಟೈನ್‌ಗೆ  ಅಗತ್ಯ ಸೌಲಭ್ಯ ಇಲ್ಲದವರಿಗೆ ಸರಕಾರಿ ಅಥವಾ ಖಾಸಗಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಅವಕಾಶ ಮಾಡಿಕೊಂಡಬೇಕು ಎಂದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರು ವಿಮಾಣ ನಿಲ್ದಾಣ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಬಂದರುಗಳಲ್ಲಿ ವಿದೇಶದಿಂದ ಆಗಮಿಸಿದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ  ಸಮಯದಲ್ಲಿ ಸೋಂಕು ಲಕ್ಷಣ ಇದ್ದವರು ಮತ್ತು ಇಲ್ಲದವರನ್ನು ಪ್ರತ್ಯೇಕಿಸಬೇಕು. ಸೋಂಕು ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಕಡ್ಡಾಯ 14 ದಿನಗಳ ಹೋಂ ಕ್ವಾರಂಟೈನ್ ಇರುವಂತೆ ತಿಳಿಸಬೇಕು.

ಜ್ವರ, ಉಸಿರಾಟದ ಸಮಸ್ಯೆೆ ಸೇರಿದಂತೆ ಸೋಂಕಿನ ಲಕ್ಷಣವಿರುವ ಪ್ರಯಾಣಿಕರನ್ನು ಕರೋನಾ  ಕೇರ್ ಸೆಂಟರ್‌ಗೆ  ವರ್ಗಾಯಿಸಿ ಪರೀಕ್ಷೆಗೊಳಪಡಿಸಬೇಕು. ಮೊದಲು ರ್ಯಾಪಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ಬಂದರೆ ಹೋಂ ಐಸೋಲೇಷನ್ ಅಥವಾ ಕರೋನಾ ಆಸ್ಪತ್ರೆಗೆ  ದಾಖಲಿಸಲು (ಸರಕಾರಿ ಅಥವಾ ಖಾಸಗಿ) ಅಗತ್ಯ ವ್ಯವಸ್ಥೆ ಮಾಡಬೇಕು. ಒಂದು ವೇಳೆ ನೆಗೆಟಿವ್ ಬಂದರೆ ಆರ್‌ಟಿಪಿಸಿಆರ್ ಪರೀಕ್ಷೆ ನಡಿಸಿ ಖಚಿತ ಪಡಿಸಿಕೊಳ್ಳಬೇಕು. ಆರ್‌ಟಿಪಿಸಿಆರ್‌ನಲ್ಲೂ ನೆಗೆಟಿವ್ ಬಂದರೆ ಮನೆಯಲ್ಲಿ 14 ದಿನ ಕ್ವಾರಂಟೈನ್‌ಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರು ಯಾತ್ರಿ ಕರ್ನಾಟಕ ಆನ್‌ಲೈನ್ ಪೋರ್ಟಲ್‌ನಲ್ಲಿ ಮೂರು ದಿನಗಳ ಮುಂಚೆ ನೋಂದಣಿ ಮಾಡಿಕೊಳ್ಳಬೇಕು. ವ್ಯವಹಾರ ಉದ್ದೇಶದಿಂದ ಸೀಮಿತ ಅವಧಿಗೆ ಆಗಮಿಸುವವರು ಎಲ್ಲಾ ವಿಧದ ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಲು ಆರ್‌ಟಿಪಿಸಿಆರ್ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ತರಬೇಕು. ಎರಡಕ್ಕಿಿಂತ ಹೆಚ್ಚು ದಿನ ಕೆಮ್ಮು ನೆಗಡಿ ಇದ್ದರೆ ಕಫ ಪರೀಕ್ಷೆ ಕಡ್ಡಾಯವೆಂದು ಎಂದು ಸುತ್ತೋಲೆಯಲ್ಲಿ ನಮೂದಿಸಲಾಗಿದೆ.