Thursday, 28th November 2024

ಹಳಸಿ ಹೋಯಿತಾ ಬಿಸಿಯೂಟ ?

ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಮಕ್ಕಳಿಗೆ ಅನ್ನವಿಲ್ಲ

ಕರೋನಾ ಕಾರಣದಿಂದ ನಿಂತಿದ್ದ ಬಿಸಿಯೂಟ

ಮಕ್ಕಳಿಗೆ ಸದ್ಯಕ್ಕೆ ನೀರೇ ಗತಿ!

ಬೆಂಗಳೂರು: ಕರೋನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿದ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಮಹತ್ವಾ ಕಾಂಕ್ಷಿ ಬಿಸಿಯೂಟ ಯೋಜನೆಗೆ ಗ್ರಹಣ ಬಡಿದಿದೆ.

ಕರೋನಾ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಶಾಲೆಗಳತ್ತ ಮುಖ ಮಾಡಿರುವ ಮಕ್ಕಳು ಮಧ್ಯಾಹ್ನ ಬಿಸಿಯೂಟ ಇಲ್ಲದೆ ಹಸಿವಿ ನಿಂದ ಮನೆಗೆ ಮರಳುವಂತಾಗಿದೆ. ಬಿಸಿಯೂಟ ಬದಲು ಸದ್ಯ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಆದರೂ ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಆಹಾರ ಧಾನ್ಯ ವಿತರಣೆಗೆ ಮತ್ತಷ್ಟು ದಿನ ಕಾಯಬೇಕಿದೆ.

ಜತೆಗೆ, ಬಿಸಿಯೂಟ ಯೋಜನೆ ಆರಂಭಿಸಲು ಕೇಂದ್ರ ಸರಕಾರ ಇನ್ನೂ ಅನುಮತಿ ನೀಡದ ಕಾರಣ ಇತ್ತ ಆಹಾರ ಧಾನ್ಯ ಸಿಗದೆ ಅತ್ತ ಊಟವೂ ಸಿಗದೆ ಬಡ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದ ಮಹತ್ವಾಕಾಂಕ್ಷಿ ಯೋಜನೆಯೇ ಹಳ್ಳಹಿಡಿಯುವಂತಾಗಿದೆ. ಕರೋನಾ ಹಾವಳಿಗೆ ನಲುಗಿದ ಕೂಲಿ ಕಾರ್ಮಿಕರು ಒಂದೆಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಡ ಕುಟುಂಬಗಳು ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಇಂದಿಗೂ ಎಷ್ಟೋ ಜನರಿಗೆ ಕೆಲಸ ಸಿಗದೆ ಆರ್ಥಿಕ ನಿರ್ವಹಣೆಗೆ ಪರದಾ ಡುತ್ತಿದ್ದಾರೆ. ಈ ಹಿಂದೆ ಶಾಲೆಗಳಲ್ಲೇ ಬಿಸಿಯೂಟ ಸೇವಿಸುತ್ತಿದ್ದರಿಂದ ಕೂಲಿಕಾರರ ಹಾಗೂ ಕಾರ್ಮಿಕರ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ದೊರೆಯುತ್ತಿತ್ತು.

ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ: 1ರಿಂದ 5ನೇ ತರಗತಿ ಮಕ್ಕಳಿಗೆ 100 ಗ್ರಾಂ ಅಕ್ಕಿ, 20 ಗ್ರಾಂ ತೊಗರಿಬೇಳೆಯುಳ್ಳ ಬಿಸಿಯೂಟ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿಬೇಳೆ ಪ್ರಮಾಣದಲ್ಲಿ ಅನ್ನ ಸಾಂಬಾರು ನೀಡಲಾಗುತ್ತಿತ್ತು. ಆದರೆ, ಈವರೆಗೂ 1-5ನೇ ತರಗತಿ ಆರಂಭವಾಗದ ಹಿನ್ನೆಲೆಯಲ್ಲಿ ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗದಂತಾಗಿದೆ. ಇದು ಬಡ ಪಾಲಕರಿಗೂ ಹೊರೆಯಾಗುವ ಜತೆಗೆ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಕಾಡುವ ಸಾಧ್ಯತೆಯೂ
ಹೆಚ್ಚಿದೆ.

‘ವಿದ್ಯಾಗಮ’ ಯೋಜನೆಯಡಿ ಪ್ರಸ್ತುತ 6-10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಕಲಿಕಾ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಆ ಶಾಲೆಗಳಲ್ಲಿ ಇನ್ನೂ ಬಿಸಿಯೂಟ ನೀಡಲಾಗುತ್ತಿಲ್ಲ. ನವೆಂಬರ್‌ನಿಂದ ಮಾರ್ಚ್‌ವರೆಗೆ ಮಕ್ಕಳಿಗೆ ಆಹಾರ ಧಾನ್ಯ ವಿತರಣೆಗಾಗಿ ಈಗಾಗಲೇ ಸರಕಾರ 514 ಕೋಟಿ ರು. ಬಿಡುಗಡೆ ಮಾಡಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಉಪ್ಪು, ಅಡುಗೆ ಎಣ್ಣೆೆ ಹಾಗೂ ತೊಗರಿಬೇಳೆ
ನೀಡಬೇಕು. ಇದಕ್ಕಾಗಿ ಅನುದಾನ ಸಹ ಬಿಡುಗಡೆಯಾದರೂ ನಿಗಮವು ಟೆಂಡರ್ ನಡೆಸಿಲ್ಲ. ಹಾಗಾಗಿ, ಅಧಿಕಾರಿಗಳ
ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ಟೆಂಡರ್ ವಿಳಂಬವಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದರೆ ಮಕ್ಕಳಿಗೆ ವಿತರಿಸಬಹುದು. ಇಲ್ಲದಿದ್ದರೆ ಮತ್ತಷ್ಟು ದಿನ ಕಾಯಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

54 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಊಟ
ಪ್ರತಿ ವರ್ಷ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂದಾಜು 54 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಕಳೆದ ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ 108 ದಿನಗಳ ಕಾಲ (ಸಾರ್ವತ್ರಿಕ ರಜೆ ಹೊರತುಪಡಿಸಿ) ಬಿಸಿಯೂಟ ಬದಲಿಗೆ, ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನೇ
ವಿದ್ಯಾರ್ಥಿಗಳಿಗೆ ವಿತರಿಸಲು ಸರಕಾರ ನಿರ್ಧರಿಸಿತ್ತು. ಇದರಂತೆ ಎರಡು ಹಂತದಲ್ಲಿ ಆಹಾರ ಧಾನ್ಯ ವಿತರಣೆಗೂ ಕ್ರಮ ಕೈಗೊಂಡಿತ್ತು. ಪ್ರಥಮ ಹಂತದಲ್ಲಿ ಜೂನ್ ಮತ್ತು ಜುಲೈ ತಿಂಗಳ (53 ದಿನಗಳಿಗೆ) ಆಹಾರ ಧಾನ್ಯ ವಿತರಿಸಲಾಗಿದೆ. ಆದರೆ, ಟೆಂಡರ್ ಸಮಸ್ಯೆಯಿಂದಾಗಿ ಆಗಸ್ಟ್‌‌ನಿಂದ ಅಕ್ಟೋಬರ್‌ವರೆಗಿನ 55 ದಿನಗಳ ಆಹಾರ ವಿತರಣೆ ಬಾಕಿ ಉಳಿದಿದೆ. ನಂತರದ ಮುಂದಿನ 5 ತಿಂಗಳ ಆಹಾರ ಧಾನ್ಯ ವಿತರಣೆ ಮಾಡಬೇಕಿದೆ.

ಕ್ಷೀರ ಭಾಗ್ಯ ಯೋಜನೆ ಬಂದ್
ಕರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಕ್ಷೀರಭಾಗ್ಯ ಯೋಜನೆ ಸಹ ಸದ್ಯಕ್ಕೆ ಪುನರಾರಂಭವಾಗುವ ಸಾಧ್ಯತೆ ಕಡಿಮೆಯಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಮಧ್ಯಾಹದ ಬಿಸಿಯೂಟದ ಬಳಿಕ ಹಾಲು
ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಕ್ಕಳು ಇದೀಗ ನೀರು ಕುಡಿದು ತೃಪ್ತಿಪಟ್ಟುಕೊಳ್ಳುವಂತಾಗಿದೆ.