Tuesday, 26th November 2024

ಫಲಶೃತಿ : ಎಂ.ಎಸ್.ಫಾರ್ಮಾಸ್ಯುಟಿಕಲ್ಸ್ ಕಂಪನಿ ಕಪ್ಪುಪಟ್ಟಿಗೆ ಸೇರ್ಪಡೆ

ಬೆಂಗಳೂರು:
ದರ ಗುತ್ತಿಗೆ ಒಪ್ಪಂದ ಉಲ್ಲಂಘನೆ ಹಾಗೂ ಗುಣಮಟ್ಟವಲ್ಲದ ಸ್ಯಾನಿಟೈಸರ್ ಸರಬರಾಜು ಮಾಡಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದ್ದ ಎಂ.ಎಸ್.ಫಾರ್ಮಾಸ್ಯುಟಿಕಲ್ಸ್ ಅನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿಯು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಆದೇಶಿಸಿದೆ.
ಕಳಪೆ ಸ್ಯಾನಿಟೈಸರ್: 11 ಕೋಟಿ ರು. ನಷ್ಟ ಎಂಬ ಶೀರ್ಷಿಕೆಯಡಿ ಜೂನ್.22 ರಂದು ‘ವಿಶ್ವವಾಣಿ‌’ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಅಲ್ಲದೆ ಸರಣಿ ಸುದ್ದಿಗಳನ್ನು ಬರೆಯುವ ಮೂಲಕ ಸರಕಾರದ ಗಮನ ಸೆಳೆದಿತ್ತು. ಕಳಪೆ ಸ್ಯಾನಿಟೈಸರ್ ಪೂರೈಕೆ ಮಾಡಿದ ಎಂ.ಎಸ್.ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಅವ್ಯವಹಾರ ಬಯಲಿಗೆಳೆಯಲಾಗಿತ್ತು. ಇದೀಗ ಕಂಪನಿಯು ಉತ್ಪನ್ನವನ್ನು ಐದು ವರ್ಷ ಉತ್ಪಾದನೆಗೆ ಬೀಗ ಹಾಕಲಾಗಿದೆ‌.
 ಡ್ರಗ್ಸ್ ಬೋರ್ಡ್ ಕರೆದಿದ್ದ ಟೆಂಡರ್ ನಲ್ಲಿ ಮೂಲತಃ ಸ್ಯಾನಿಟೈಸರ್ ಉತ್ಪಾದಕರಾದ ಎಂ.ಎಸ್.ಫಾರ್ಮಾಸ್ಯುಟಿಕಲ್ಸ್ 500 ಎಂ.ಎಲ್.ಗೆ 97.44 ರು. ನಮೂದಿಸಿ ಎಲ್ 1 ಆಗಿತ್ತು. ಖರೀದಿ ಆದೇಶ ಪಡೆದಿದ್ದ ಈ ಕಂಪನಿ ಸ್ಯಾನಿಟೈಸರ್ ಅನ್ನು ಸರಬರಾಜು ಮಾಡಿರಲಿಲ್ಲ. ಎರಡನೇ ಬಾರಿ ಇದೇ ಕಂಪನಿಗೆ ಟೆಂಡರ್ ನೀಡಿದರೂ ಕಲಬುರಗಿ ಮತ್ತು ರಾಮನಗರಕ್ಕೆ ಕಳಪೆ ಸದಯಾತ ಪೂರೈಕೆ ಮಾಡಿತ್ತು. ಕನಿಷ್ಠ ಎರಡು ಬ್ಯಾಚ್ ನಲ್ಲಿ ಕಳಪೆ ಎಂದು ಕಂಡು ಬಂದರೆ ಟೆಂಡರ್ ಷರತ್ತುಗಳ ಪ್ರಕಾರ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸದೆಯೇ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯ ಆರೋಪಕ್ಕೆ  ಗುರಿಯಾಗಿದ್ದರು.