Saturday, 4th January 2025

31 DAYS Movie: ವಿ. ಮನೋಹರ್ ಸಂಗೀತ ಸಂಯೋಜನೆಯ 150ನೇ ಸಿನಿಮಾ ʼ31 DAYSʼನ ಒಪೇರ ಸಾಂಗ್ ರಿಲೀಸ್‌!

31 DAYS Movie

ಬೆಂಗಳೂರು: ʼಜಾಲಿಡೇಸ್ʼ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ (Niranjan Shetty) ನಾಯಕನಾಗಿ ನಟಿಸಿರುವ ʼ31 DAYSʼ ಚಿತ್ರಕ್ಕಾಗಿ (31 DAYS Movie) ವಿ. ಮನೋಹರ್ (V Manohar) ಬರೆದು, ಹಾಡಿ, ಸಂಗೀತ ಸಂಯೋಜಿಸಿ, ನಿರಂಜನ್ ಶೆಟ್ಟಿ ಅವರೊಂದಿಗೆ ನಟಿಸಿರುವ ಒಪೇರ ಶೈಲಿಯ ಗೀತೆ ಇತ್ತೀಚೆಗೆ (ಡಿಸೆಂಬರ್ 31 ರಂದು) ಬಿಡುಗಡೆಯಾಯಿತು. ಇದು ವಿ. ಮನೋಹರ್ ಅವರು ಸಂಗೀತ ಸಂಯೋಜಿಸಿರುವ 150ನೇ ಚಿತ್ರ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ಸಂಗೀತ ನಿರ್ದೇಶಕ ವಿ. ಮನೋಹರ್, ಇಂದು ಬಿಡುಗಡೆಯಾಗಿರುವ ಒಪೇರ (ಕಥನಾ ಗೀತೆ) ಶೈಲಿಯ ಹಾಡು ಕನ್ನಡದಲ್ಲಿ ಇದೇ ಮೊದಲು ಎನ್ನುವುದು ನನ್ನ ಅಭಿಪ್ರಾಯ. ನಿರಂಜನ್ ಅವರ ಒತ್ತಾಯಕ್ಕೆ ಮಣಿದು ಈ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಒಟ್ಟಾರೆ ಈ ಚಿತ್ರದಲ್ಲಿ ಹತ್ತು ಹಾಡುಗಳಿದೆ. ಎಂ.ಡಿ. ಪಲ್ಲವಿ, ರವೀಂದ್ರ ಸೊರಗಾವಿ ಸೇರಿದಂತೆ ನಾಡಿನ ಅನೇಕ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಿದ್ದಾರೆ ಎಂದರು.‌

ʼಜಾಲಿಡೇಸ್ʼ ನಿಂದ ಶುರುವಾದ ನನ್ನ‌ ಸಿನಿಜರ್ನಿ‌‌ಗೆ ಈಗ ಹದಿನೈದು ವರ್ಷಗಳಾಗಿದೆ. ಈಗ NSTAR ಎಂಬ ಸಂಸ್ಥೆ ಮೂಲಕ‌ ನಾವೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನನ್ನ ಪತ್ನಿ ನಾಗವೇಣಿ ಇದರ ನಿರ್ಮಾಪಕರು. ಇದೊಂದು 31 ದಿನಗಳಲ್ಲಿ ನಡೆಯುವ ಈಗಿನ ಕಾಲಘಟ್ಟದ ಪ್ರೇಮಕಥೆ. ಹಾಗಾಗಿ ʼ31 DAYSʼ ಎಂದು ಹೆಸರಿಟ್ಟಿದ್ದೇವೆ. ಮಧ್ಯಂತರಕ್ಕೂ ಮುನ್ನ ಹದಿನೈದು ದಿನಗಳು ಹಾಗೂ ನಂತರ ಹದಿನೈದು ದಿನಗಳ ಕಥೆ ಸಾಗುತ್ತದೆ. ಕೊನೆಯ ದಿನವನ್ನು ಕ್ಲೈಮ್ಯಾಕ್ಸ್‌ಗೆ ಮೀಸಲಿಡಲಾಗಿದೆ. ಯಾರು ಊಹಿಸದ ಕ್ಲೈಮ್ಯಾಕ್ಸ್ ಚಿತ್ರದಲ್ಲಿದೆ. ಇನ್ನೂ ಇಂದು ಬಿಡುಗಡೆಯಾಗಿರುವ ಹಾಡಿನ‌ ಬಗ್ಗೆ ಹೇಳುವುದಾದರೆ, ಎರಡೂವರೆ ನಿಮಿಷಗಳ ಈ ಹಾಡನ್ನು ಚಿತ್ರದಲ್ಲಿ ಒಂದು ನಿಮಿಷ ಬಳಸಿಕೊಳ್ಳಲಾಗಿದೆ. ನನ್ನ ಗುರುಗಳು ಹಾಗೂ ಅನ್ನದಾತರಾದ ವಿ. ಮನೋಹರ್ ಅವರು ಸಂಗೀತ ಸಂಯೋಜನೆಯ 150ನೇ ಚಿತ್ರ ನನಗೆ ದೊರಕಿದ್ದು ನನ್ನ‌ ಪುಣ್ಯ. ಸೆನ್ಸಾರ್ ಅಂಗಳದಲ್ಲಿರುವ ಈ ಚಿತ್ರವನ್ನು ಫೆಬ್ರವರಿಯಲ್ಲಿ ತೆರೆಗೆ ತರುವ ಪ್ರಯತ್ನ‌ ನಡೆಯುತ್ತಿದೆ ಎಂದರು ನಾಯಕ‌ ನಿರಂಜನ್ ಶೆಟ್ಟಿ. ‌
ಮೊದಲ‌ ನಿರ್ಮಾಣದ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದು ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ ಮನವಿ ಮಾಡಿದರು.

ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನನ್ನನ್ನು ನಿರಂಜನ್ ಈ ಚಿತ್ರದ ಮೂಲಕ ನಿರ್ದೇಶಕನಾಗಿ‌ ಮಾಡಿದ್ದಾರೆ. ವಿ.ಮನೋಹರ್ ಸಂಗೀತ ನಿರ್ದೇಶನದ 150 ನೇ ಚಿತ್ರ, ನನ್ನ‌ ಮೊದಲ ನಿರ್ದೇಶನದ ಚಿತ್ರವಾಗಿರುವುದು ಖುಷಿಯಾಗಿದೆ. ಇದೊಂದು ಹೈ ವೋಲ್ಟೇಜ್ ಲವ್ ಸ್ಟೋರಿಯಾಗಿದೆ ಎಂದರು ನಿರ್ದೇಶಕ ರಾಜ ರವಿಕುಮಾರ್.

ಚಿತ್ರದ ನಾಯಕಿ ಪ್ರಜ್ವಲಿ ಸುವರ್ಣ, ಕಲಾವಿದರಾದ ಅನೇಕಲ್ ಮುನಿಯಪ್ಪ, ಗೋವಿಂದಸ್ವಾಮಿ, ವೇದ್ಯಾಸ್ ಸಂಸ್ಥೆಯ ರವಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | KSRTC news: ರಾಜ್ಯದ ಹೆಮ್ಮೆಯ ಕೆಎಸ್‌ಆರ್‌ಟಿಸಿಗೆ 9 ರಾಷ್ಟ್ರೀಯ ಪ್ರಶಸ್ತಿ!

ವಿನುತ್ ಕೆ. ಛಾಯಾಗ್ರಹಣ, ತ್ರಿಭುವನ್, ಧನು ಕುಮಾರ್ ರವರ ನೃತ್ಯ ನಿರ್ದೇಶನ ಹಾಗೂ ರವಿತೇಜ್ ಸಿ.ಎಚ್. ನಿತೀಶ್ ಪೂಜಾರಿ, ಸನತ್ ಅವರ ಸಂಕಲನ, ಲಕ್ಕಿ ನಾಗೇಶ್ ಅವರ ನಿರ್ವಹಣೆ, ಸುಧೀಂದ್ರ ವೆಂಕಟೇಶ್ ಅವರ ಪ್ರಚಾರ, ಸೋಹಿಲ್ ವಿನ್ಯಾಸ ಇರುವ ಈ ಚಿತ್ರಕ್ಕೆ ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಅಡಿಬರಹವಿದೆ.