ಕರೋನಾಗೆ ಸೆಡ್ಡು ಹೊಡೆದ 99 ವಯಸ್ಸಿನ ವೃದ್ಧೆ!
ವಿಶ್ವವಾಣಿ ವಿಶೇಷ
ಬೆಂಗಳೂರು:
ದಿನದಿಂದ ದಿನಕ್ಕೆ ಜಗತ್ತಿನ ಮೇಲೆ ಸವಾರಿ ಹೆಚ್ಚು ಮಾಡುತ್ತಿರುವ ಕರೋನಾ ವೈರಸ್ ಈಗಾಗಲೇ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇತ್ತ ಹಲವರು ಮಹಾಮಾರಿಯ ವಿರುದ್ಧ ಹೋರಾಟ ಮಾಡಿ ಗುಣಮುಖರಾಗುತ್ತಿದ್ದು, ಮಂಗಳೂರಿನ 99 ವರ್ಷದ ವೃದ್ಧೆ ಕರೋನಾಗೆ ಸೆಡ್ಡು ಹೊಡೆದಿದ್ದಾರೆ.
ಹೌದು, ದೇಶಾದ್ಯಂತ ಕರೋನಾ ಹೆಚ್ಚಾಗುತ್ತಿದ್ದು ಜನರನ್ನು ಭಯ ಪಡಿಸಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇರುವ ಸನ್ನಿವೇಶದಲ್ಲಿ 99 ವರ್ಷದ ಮಹಿಳೆ ಕರೋನಾದಿಂದ ಮುಕ್ತಿ ಪಡೆದಿರುವುದು ಅಚ್ಚರಿಯೇ ಸರಿ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೂನ್ 18 ರಂದು ದಾಖಲಾಗಿದ್ದು, ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಳು. ಈಕೆಗೆ ರಕ್ತದೊತ್ತಡ ಹಾಗೂ ವೃದ್ಧಾಪ್ಯದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರು. ಮನೆಯಲ್ಲಿ ಇರುವಾಗ ಯಾರೊಂದಿಗೂ ಸಂಪರ್ಕ ಹೊಂದಿಲ್ಲದಿದ್ದರೂ ಕರೋನಾ ಸೋಂಕು ತಾಕಿತ್ತು. ತೀವ್ರ ಉಸಿರಾಟದ ಸಮಸ್ಯೆ ಎದುರಾದಾಗ ಆಸ್ಪತ್ರೆಯಲ್ಲಿ ದಾಖಲಾದ ಕೂಡಲೆ ಕರೋನಾ ಚಿಕಿತ್ಸೆ ಮಾಡಲಾಯಿತು. ಈಕೆಗೆ ಕರೋನಾ ರೋಗಿಗಳಿಗೆ ನೀಡುವ ಚಿಕಿತ್ಸೆ ಮತ್ತು ಔಷಧಿ ನೀಡಲಾಗಿತ್ತು. ಚೇತರಿಸಿಕೊಂಡ ಮೇಲೆ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಕರೋನಾ ನೆಗಟೀವ್ ವರದಿ ಬಂದಿದೆ.
ರಾಜ್ಯದಲ್ಲಿ ಹೆಚ್ಚು ಸಾವಿನ ಪ್ರಕರಣಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು. 42 ರೋಗಿಗಳು 50 ರಿಂದ 60 ವರ್ಷ ಮೇಲ್ಪಟ್ಟವರು. 21 ರೋಗಿಗಳು 40 ರಿಂದ 50 ರೊಳಗೆ. ಕರೋನಾ ಸೋಂಕಿತ ಯುವಕರು ಅಸುನೀಗಿರುವುದು ಆಘಾತಕಾರಿ ವಿಷಯ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಕರೋನಾ ಗೆದ್ದಿದ್ದು ಮತ್ತೊಂದು ಅಚ್ಚರಿಯಾಗಿದೆ. ಅಂದರೆ ಕಿರಿಯ ಮತ್ತು ಹಿರಿಯ ವಯಸ್ಸಿನವರು ಕರೋನಾ ಗೆದ್ದಿದ್ದು ಮಾದರಿಯಾಗಿದೆ.
————–
ವೃದ್ಧೆಯ ಮಗನಿಗೂ ಕರೋನಾ ಸೋಂಕು!
ವೃದ್ಧೆಯ ಮಗನಿಗೂ ಕರೋನಾ ಸೋಂಕು ದೃಢ ಪಟ್ಟಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೃದ್ಧೆಯ ಜತೆ ಇದ್ದಿದ್ದರಿಂದ ಕರೋನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇದೀಗ ಇವರ ಆರೋಗ್ಯದಲ್ಲೂ ಕೊಂಚ ಚೇತರಿಕೆ ಕಂಡು ಬಂದಿದೆ. ಒಂದು ವಾರದೊಳಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
|
|