Wednesday, 27th November 2024

ಬಲವಂತದ ‘ಬಳ್ಳಾರಿ ಬಂದ್’ ಮಾಡಿದರೆ ಕ್ರಮ: ಸಚಿವ ಆನಂದ ಸಿಂಗ್

ಆಡಳಿತಾತ್ಮಕ ಅನುಕೂಲಕ್ಕಾಗಿ ವಿಜಯನಗರ ಜಿಲ್ಲೆ ರಚನೆ
ಹೊಸಪೇಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಮಾಡುವುದಕ್ಕೆ ಮತ್ತು ಹೋರಾಟ ಮಾಡುವುದಕ್ಕೆ ಸ್ವಾತಂತ್ರ್ಯ ಇದೆ. ಬಲವಂತದ ಬಂದ್ ಮಾಡಿದರೆ ಕಾನೂನಿನ ಕ್ರಮಕೈಗೊಳ್ಳಲಾಗುವುದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದರು.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ. 26ರಂದು ಬಳ್ಳಾರಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೊಸಪೇಟೆಯ ಅಮರಾವತಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಯಾವುದೇ ರೀತಿಯ ಬಲವಂತದ ಮತ್ತು ಜನರಿಗೆ ತೊಂದರೆಯಾಗುವಂತೆ ಹೋರಾಟ ಮತ್ತು ಬಂದ್ ಮಾಡಿದರೆ ಕ್ರಮಕೈಗೊಳ್ಳಲಾಗುವುದು. ಸಾಂಕೇತಿಕ ಹೋರಾಟ ಮಾಡಲಿ ಎಂದರು.
ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ರಾಮನಗರ,ಯಾದಗಿರಿಗಳು ಜಿಲ್ಲೆ ಮಾಡಿದಂತೆ ವಿಜಯನಗರ ಜಿಲ್ಲೆ ಮಾಡುವುದಕ್ಕೆ ಸರಕಾರ ತೀರ್ಮಾನಿಸಿದೆ ಎಂದರು.
ವಿಜಯನಗರ ಜಿಲ್ಲೆಯ ಕೂಗು ಇಂದು ನಿನ್ನೆಯದಲ್ಲ;ಇದು ಬಹಳದಿನಗಳಿಂದ ಇತ್ತು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಬಹುದಿನಗಳ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಮಾಧಾನವಾಗಿಯೇ ಇದ್ದಾರೆ;ಮಾಧ್ಯಮದವರೇ ಅವರನ್ನು ಪ್ರಚೋದಿಸ್ತಾ ಇರುವುದು ಎಂದರು.
ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಕುಳಿತು ಚರ್ಚಿಸಿ ಯಾವ ತಾಲೂಕುಗಳು ಯಾವ್ಯಾವ ಜಿಲ್ಲೆಗೆ ಸೆರಿಸಬೇಕು ಅಂತ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಇದುವರೆಗೆ ಯಾವಾ ತಾಲೂಕು ಯಾವ ಜಿಲ್ಲೆಗಳಿಗೆ ಸೇರಿಸಬೇಕು ಎಂಬುದು ನಿರ್ಧರಿಸಿಲ್ಲ. ನೂತನ ಜಿಲ್ಲೆಯ ಮ್ಯಾಪ್ ಇನ್ನೂ ರೆಡಿ ಮಾಡಿಲ್ಲ;ಕೆಲವರು ತಮ್ಮ ಬೆಳೆ‌ ಬೇಯಿಸಿಕೊಳ್ಳುವುದಕ್ಕೆ ಪ್ರಚೋದಿಸ್ತಾ ಇದ್ದಾರೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಹಕಾರ ಸಚಿವ ಸೋಮಶೇಖರ್ ಮತ್ತಿತರರು ಇದ್ದರು.