Saturday, 28th December 2024

Actor Charith Balappa: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಕನ್ನಡ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ

Actor Charith Balappa

ಬೆಂಗಳೂರು: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕನ್ನಡದ ಕಿರುತೆರೆ ನಟ ಚರಿತ್ ಬಾಳಪ್ಪ (Actor Charith Balappa) ಅವರನ್ನು ಆರ್​ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನ್ನಡದ ‘ಮುದ್ದುಲಕ್ಷ್ಮಿ‌’ ಸೇರಿ ಹಲವು ಧಾರವಾಹಿಗಳಲ್ಲಿ ಮಾತ್ರವಲ್ಲದೇ ತೆಲುಗಿನ ಅನೇಕ ಸೀರಿಯಲ್‌ಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ನಟನ ವಿರುದ್ಧ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಪ್ರೀತಿಸುವೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ಸಹಚರರ ಜತೆ ಮನೆಗೆ ನುಗ್ಗಿ ಚರಿತ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೊ, ವಿಡಿಯೊ ಹರಿಬಿಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಚರಿತ್ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ. ಡಿವೋರ್ಸ್​ ನಂತರವೂ ಅವರು ಮಾಜಿ ಪತ್ನಿಯ ಜತೆ ಕಿರಿಕ್ ಮಾಡಿಕೊಂಡಿದ್ದರು.

2017ರಲ್ಲಿ ನಟಿ ಮಂಜು ಜತೆ ಚರಿತ್​ ಬಾಳಪ್ಪ ಅವರಿಗೆ ವಿವಾಹ ಆಗಿತ್ತು. 2022ರ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಅವರಿಬ್ಬರು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ನೀಡಿದ್ದಕ್ಕೆ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂದು ಚರಿತ್ ಬಾಳಪ್ಪ ವಿರುದ್ಧ ಈ ಹಿಂದೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

ಈ ಸುದ್ದಿಯನ್ನೂ ಓದಿ | Viral Video: ಮದುವೆ ಮಂಟಪಕ್ಕೆ ವಧುವಿನ ಎಂಟ್ರಿ  ನೋಡಿ ನೆಟ್ಟಿಗರು ಫುಲ್‌ ಗರಂ! ವಿಡಿಯೊ ಇದೆ

ರಾಮನಗರದಲ್ಲಿ ಬ್ಯೂಟಿಷಿಯನ್ ಮೇಲೆ ಅತ್ಯಾಚಾರ; ರಿಯಲ್ ಎಸ್ಟೇಟ್ ಏಜೆಂಟ್ ಅರೆಸ್ಟ್

ಬೆಂಗಳೂರು: ಬ್ಯೂಟಿಷಿಯನ್ ಮೇಲೆ ಅತ್ಯಾಚಾರ (Physical Abuse) ಎಸಗಿದ ಆರೋಪದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ ಒಬ್ಬನನ್ನು ಜಿಲ್ಲೆಯ ಸಾತನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸೊರನಹಳ್ಳಿ ಚೆಲುವರಾಮು (32) ಎಂದು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂತ್ರಸ್ತೆಯು ಸಾತನೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಬ್ಯಾಂಕ್ ಸಾಲಕ್ಕಾಗಿ ಎದುರು ನೋಡುತ್ತಿದ್ದ ಆಕೆ ಸ್ನೇಹಿತೆಯ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದರು. ಆರೋಪಿ ತನ್ನ ಸಂಪರ್ಕಗಳ ಮೂಲಕ ಸಾಲ ಕೊಡಿಸುವುದಾಗಿ ಆಕೆಗೆ ಭರವಸೆ ನೀಡಿದ್ದ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಸಾಲ ಕೊಡಿಸುವ ನೆಪದಲ್ಲಿ ಆಕೆಯನ್ನು ರಾಮನಗರದ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಸಂತ್ರಸ್ತೆ ಸೋಮವಾರ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಗೆ ಆರೋಪಿಯನ್ನು ಪರಿಚಯಿಸುವಲ್ಲಿ ಪರಸ್ಪರ ಸ್ನೇಹಿತನ ಪಾತ್ರವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಅತ್ಯಾಚಾರ (ಬಿಎನ್‌ಎಸ್ 64), ಲೈಂಗಿಕ ಕಿರುಕುಳ (ಬಿಎನ್‌ಎಸ್ 75), ಮಹಿಳೆಯ ಮೇಲಿನ ದೌರ್ಜನ್ಯ (ಬಿಎನ್‌ಎಸ್ 76) ಜತೆಗೆ ಬಿಎನ್‌ಎಸ್‌ನ ಇತರ ವಿಭಾಗಗಳಲ್ಲಿ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ | K Annamalai: ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ- DMK ಸರ್ಕಾರದ ವಿರುದ್ಧ ವಿನೂತನ ಪ್ರೊಟೆಸ್ಟ್‌