Tuesday, 26th November 2024

Actor Darshan: ನಟ ದರ್ಶನ್‌ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka Swamy Murder Case) ಸಂಬಂಧಿಸಿ ನಟ ದರ್ಶನ್‌ (Actor Darshan) ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆದಿದ್ದು, ವಿಚಾರಣೆಯನ್ನು ಸಂಜೆ 4 ಗಂಟೆಗೆ ಮುಂದೂಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ.

ಅರ್ಹತೆ ಆಧಾರದಲ್ಲಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಮಂಡನೆ ಮಾಡಿದರು. ಆರೋಪಿ ಪವಿತ್ರಾ ಗೌಡಗೆ ಕಳುಹಿಸಿದ್ದ ಸಂದೇಶಗಳನ್ನು ಓದಿದ ವಕೀಲ, ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಜಾಮೀನು ಅರ್ಜಿ ವಿಚಾರಣೆಯನ್ನು ಸಂಜೆ 4 ಗಂಟೆಗೆ ಮುಂದೂಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ದಾಸ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್, ಲಕ್ಷ್ಮಣ್ ಮತ್ತು ಜಗದೀಶ್ ಸೇರಿ ಒಟ್ಟು ಆರು ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಇಂದು ನಡೆಯಿತು.

ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ನಟ ದರ್ಶನ್‌ ಹೊರಗಡೆ ಬಂದು, ಚಿಕಿತ್ಸೆ ಪಡೆಯಿತ್ತಿದ್ದರೆ, ಇತ್ತ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್, ಈವರೆಗೂ ಸರ್ಜರಿ ಮಾಡಿಸಿಲ್ಲ. ಈ ಬಗ್ಗೆ ಎಸ್​ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು. ದರ್ಶನ್ ಅನಾರೋಗ್ಯ ಸಂಬಂಧ ಹೈಕೋರ್ಟ್​ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಲಾಗಿದೆ.

ಕೊಲೆ ಪ್ರಕರಣದಲ್ಲಿ 131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ.
ನಟ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಬೆಂಗಳೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ನಟ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೊಂದು ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ನಟ ದರ್ಶನ್‌ ನಿಂತಿರುವ ಫೋಟೋ ಲಭ್ಯವಾಗಿದ್ದು, ಇದು ನಟನಿಗೆ ಇನ್ನೊಂದು ತಲೆಬಿಸಿ ಸೃಷ್ಟಿಸಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಮಂಡಿಸಲಾಗಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ನಾಲ್ಕೇಟು ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೊಗಳು ಹೇಳುತ್ತಿರುವುದೇ ಬೇರೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಫೋಟೊಗಳು ಇದಾಗಿದ್ದು, ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೊರೆತ ಸಾಕ್ಷ್ಯಗಳನ್ನು ಪರೀಕ್ಷೆಗಾಗಿ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್​ಎಸ್​ಎಲ್ ಕೇಂದ್ರಗಳಿಗೆ ಕಳಿಸಿದ್ದರು. ಹೈದರಾಬಾದ್​ನಿಂದ ಕೆಲವು ವರದಿಗಳು ತಡವಾಗಿ ಬಂದಿದ್ದು, ಆರೋಪಿ ಪವನ್​ ಎಂಬಾತನ ಮೊಬೈಲ್​ನಿಂದ ಕ್ಲಿಕ್ಕಿಸಲಾದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಚಿತ್ರವನ್ನು ಪವನ್ ಕ್ಲಿಕ್ಕಿಸಿದ್ದ. ನಂತರ ಅವನ್ನು ಡಿಲೀಟ್ ಮಾಡಿದ್ದ. ಆದರೆ ಎಫ್​ಎಸ್​ಎಲ್​ ಕೇಂದ್ರದವರು ತಂತ್ರಜ್ಞಾನ ಬಳಸಿ ಆ ಫೋಟೊಗಳನ್ನು ರಿಟ್ರೀವ್ ಮಾಡಿದ್ದಾರೆ.

ಈಗ ಲಭ್ಯವಾಗಿರುವ ಚಿತ್ರದಲ್ಲಿ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿ ದರ್ಶನ್ ನಿಂತಿರುವ ಚಿತ್ರವಿದೆ. ಚಿತ್ರದಲ್ಲಿ ಪ್ರಕರಣದ ಇತರೆ ಕೆಲವು ಆರೋಪಿಗಳು ಸಹ ಇದ್ದಾರೆ. ಚಿತ್ರದಲ್ಲಿ ರೇಣುಕಾ ಸ್ವಾಮಿಯ ಶವವೂ ಇದೆ. ಈ ಚಿತ್ರವನ್ನು ಪವನ್ ತೆಗೆದಿದ್ದಾರೆ. ಪವನ್ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Abhishek Bachchan: ಡಿವೋರ್ಸ್‌ ರೂಮರ್ಸ್‌ ನಡುವೆಯೇ ಐಶ್ವರ್ಯಾ ರೈ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ನಟ ಅಭಿಷೇಕ್ ಬಚ್ಚನ್!