Thursday, 21st November 2024

Actor Darshan: ದರ್ಶನ್‌ ಜಾಮೀನಿಗೂ ಧಕ್ಕೆ? ಮೇಲ್ಮನವಿಗೆ ಇಲಾಖೆ ಸಿದ್ಧತೆ, ಪೊಲೀಸರಿಂದ ಸಿಎಂ ಮೊರೆ

Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ (Renuka Swamy Murder Case) ಪ್ರಕರಣದ ಆರೋಪಿ, ನಟ ದರ್ಶನ್‌ (Actor Darshan) ಅವರಿಗೆ ನ್ಯಾಯಾಲಯವು ನೀಡಿರುವ ಮಧ್ಯಂತರ ಜಾಮೀನಿನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ (Supreme court) ಮೇಲ್ಮನವಿ ಸಲ್ಲಿಸಲು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆಯೂ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.

‘ಮೇಲ್ಮನವಿ ಸಲ್ಲಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು. ನಾವು ಪತ್ರ ಬರೆದಿದ್ದೇವೆ. ಅನುಮತಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಜಾಮೀನು ನೀಡುವಂತೆ ದರ್ಶನ್‌ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕಿದ ಬಳಿಕ ಜೈಲಿನಿಂದ ದರ್ಶನ್‌ ಬಿಡುಗಡೆಯಾಗಿ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಗೃಹ ಇಲಾಖೆಯ ಅನುಮತಿ ಬೇಕಿದೆ. ಗೃಹ ಇಲಾಖೆಯ ಅನುಮತಿ ಸಿಕ್ಕಿದ್ದರೆ ದರ್ಶನ್ ಗೆ ಜಾಮೀನು ಸಿಕ್ಕ ಒಂದೆರಡು ದಿನದಲ್ಲೇ ಸುಪ್ರೀಂಕೋರ್ಟ್ ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಬೇಕಿತ್ತು. ಆದರೆ, ಜಾಮೀನು ಸಿಕ್ಕಿ ಎರಡು ವಾರಗಳೇ ಕಳೆಯುತ್ತಿದ್ದರೂ ಗೃಹ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ನಿನ್ನೆ (ನ. 12) ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ದರ್ಶನ್ ಕೇಸ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಾಯಶಃ ಇದೇ ವಾರದಲ್ಲಿ ಸಿಎಂ ಕಚೇರಿಯಿಂದ ದರ್ಶನ್ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಲು ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ಹೋಗುವ ಸಾಧ್ಯತೆಯಿದೆ. ಒಮ್ಮೆ ಸಿಎಂ ಕಚೇರಿಯಿಂದ ಗೃಹ ಸಚಿವಾಲಯಕ್ಕೆ ಸೂಚನೆ ಹೋದರೆ, ಗೃಹ ಇಲಾಖೆಯು ದರ್ಶನ್ ಗೆ ಜಾಮೀನು ಸಿಕ್ಕಿರುವ ವಿಚಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಅನುಮತಿ ನೀಡುತ್ತದೆ. ಅದರಂತೆ, ಸುಪ್ರೀಂ ಕೋರ್ಟ್ ಗೆ ಕೇಸ್ ಹೋದರೆ ಅಲ್ಲಿ ದರ್ಶನ್ ಅವರ ಸದ್ಯದ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್, ಸಂಬಂಧಪಟ್ಟ ಆಸ್ಪತ್ರೆಯಿಂದ ಮಾಹಿತಿ ಕೇಳಬಹುದು.

ಇದನ್ನೂ ಓದಿ: Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌