ಬೆಂಗಳೂರು: ಕನ್ನಡ ಕಿರುತೆರೆಯ (Small screen) ಜನಪ್ರಿಯ ನಟಿ ಆಗಿರುವ ಶಾಂಭವಿ (Actress Shabhavi) ಅವರ ಬಾಳಿನಲ್ಲಿ ವಿಧಿ ಕ್ರೂರ ಆಟವಾಡಿದೆ. ಅವರ ಅವಳಿ ಮಕ್ಕಳಲ್ಲಿ ಒಬ್ಬ ಗಂಡು ಮಗುವಿಗೆ ಕ್ಯಾನ್ಸರ್ ಕಾಯಿಲೆ (Cancer) ಬಂದಿದ್ದು, ಈ ಕುರಿತ ಪೋಸ್ಟ್ ಒಂದನ್ನು ಶಾಂಭವಿ ಹಂಚಿಕೊಂಡಿದ್ದಾರೆ.
ನಟಿ ಶಾಂಭವಿಗೆ ಮೂರು ವರ್ಷದ ದುರ್ಗಾ ಮತ್ತು ದುಶ್ಯಂತ್ ಎಂಬ ಅವಳಿ ಮಕ್ಕಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾಂಭವಿ ಅವಳಿ ಮಕ್ಕಳ ಕ್ಯೂಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬದುಕಿಗೆ ಬಡಿದಿರುವ ಬರ ಸಿಡಿಲಿನ ಬಗ್ಗೆ ನಟಿ ಶಾಂಭವಿ ಹಂಚಿಕೊಂಡಿದ್ದಾರೆ. ತಮ್ಮ ಮಕ್ಕಳ ಪೈಕಿ ಗಂಡು ಮಗು ದುಶ್ಯಂತ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ.
“ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ ಮೂರನೇ ಸ್ಟೇಜ್ ಬ್ಲಡ್ ಕ್ಯಾನ್ಸರ್ ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋವರೆಗೆ ಪ್ರತಿ ಕ್ಷಣವೂ ಇದು ಕ್ಯಾನ್ಸರ್ ಆಗಿರದೆ ಇರಲಿ ಅಂತಾ ಪ್ರಾರ್ಥಿಸಿದೆವು. ಆದರೆ ಹಣೆಯಲಿ ಬರೆದಿರೋದನ್ನು ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರಕೆಗಳೆಲ್ಲ ಯಾಕೆ ಅನಿಸುತ್ತದೆ.”
“ಏನಾಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದ್ದೇವೆ ಇವಾಗ. ಬೇರೆ ಆಯ್ಕೆ ಆದರೂ ಏನಿದೆ..? ಇದು 95% ಗುಣ ಮುಖವಾಗುತ್ತದೆ ಅಂತಾ ವೈದ್ಯರು ಭರವಸೆ ಕೊಟ್ಟಿದ್ದಾರೆ. ಆದರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. ‘ನಿನಗೆ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ’ ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡುತ್ತಾ ಇರುತ್ತೇನೆ. ಕಿಮಿಯೋ ಥೆರಪಿ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ ಥೆರಪಿಯ ಮೊದಲ ದಿನದಂದು ಕ್ಲಿಕ್ಕಿಸಿದ ಫೋಟೋ ಇದು” ಎಂದು ದುಶ್ಯಂತ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಶಾಂಭವಿ ಪೋಸ್ಟ್ ಹಾಗೂ ದುಶ್ಯಂತ್ ಫೋಟೋ ನೋಡಿದವರು ಮಗುವಿನ ಆರೋಗ್ಯ ಚೇತರಿಕೆಗಾಗಿ ಹಾರೈಸಿದ್ದಾರೆ. ನಿಮ್ಮ ಮಗ ಹುಷಾರಾಗುತ್ತಾನೆ ಎಂದು ನಟಿಗೆ ಧೈರ್ಯ ತುಂಬಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಗೂಢರಾತ್ರಿ, ಪಾರು, ಲಕ್ಷ್ಮಿ, ಗೀತಾಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದ ಶಾಂಭವಿ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಮಾಜಿ ಪ್ರೇಯಸಿ ಮಾನ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುತೇಕ ನೆಗೆಟಿವ್ ಶೇಡ್ ರೋಲ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಾಂಭವಿ ಕಳೆದ ಕೆಲವು ವರ್ಷಗಳಿಂದ ನಟನೆಗೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು.
ಇದನ್ನೂ ಓದಿ: Salman khan : 60 ಬಾಡಿಗಾರ್ಡ್ಗಳ ಜತೆ ಬಿಗ್ ಬಾಸ್ ಶೂಟಿಂಗ್ಗೆ ತೆರಳಿದ ಸಲ್ಮಾನ್ ಖಾನ್!