Wednesday, 8th January 2025

Addanda Cariappa: ನಾಟಕ ಪ್ರದರ್ಶನ ರದ್ದು; ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುವೆ ಎಂದ ಅಡ್ಡಂಡ ಕಾರ್ಯಪ್ಪ

Addanda Cariappa

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ.8ರಂದು ನಿಗದಿಯಾಗಿದ್ದ ʼಸತ್ಯವನ್ನೇ ಹೇಳುತ್ತೇನೆʼ (Satyavanne Heluttene) ನಾಟಕ ಪ್ರದರ್ಶನ ರದ್ದು ಮಾಡಿರುವುದಕ್ಕೆ ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Cariappa) ಕಿಡಿಕಾರಿದ್ದಾರೆ. ಸಾಣೆಹಳ್ಳಿ ಶ್ರೀಗಳು ನನ್ನ ಬಗ್ಗೆ ಹೊರಡಿಸಿರುವ ʼಫತ್ವಾʼ ದಿಂದಾಗಿ ನಾಟಕ ರದ್ದು ಮಾಡಲಾಗಿದೆ ಎಂಬ ವದಂತಿ ಇದ್ದು, ಜ.10ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದು ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ಈ ಬಗ್ಗೆ ಅರಸೀಕೆರೆಯ ಹಿರಿಯ ನಾಗರಿಕರ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಅಡ್ಡಂಡ ಕಾರ್ಯಪ್ಪ ಅವರು, ʼಸತ್ಯವನ್ನೇ ಹೇಳುತ್ತೇನೆʼ ನಾಟಕ ಪ್ರದರ್ಶನ ರದ್ದುಗೊಳಿಸಿದ್ದೇವೆ ಎಂದು ನೀವು ಫೋನ್ ಮೂಲಕ ತಿಳಿಸಿರುವುದರಿಂದ, ನಾಟಕ ಪ್ರದರ್ಶನ ನೀಡಲು ಸಕಲ ರೀತಿಯಿಂದ ಸಜ್ಜಾದ ನನಗೆ ನಿಮ್ಮ ಕರೆಯಿಂದ ಆಘಾತವಾಗಿದೆ ಎಂದಿದ್ದಾರೆ.

ಇದರ ಮೂಲ ಕೆದಕುತ್ತಾ ಹೋದಾಗ ನಾನು ಈ ಹಿಂದೆ ಸಾಣೆಹಳ್ಳಿ ಸ್ವಾಮಿಗಳ ತಂಡದ ʼತುಲಾಭಾರʼ ನಾಟಕದ ಬಗ್ಗೆ ನೀಡಿದ ಹೇಳಿಕೆಯಿಂದ ನನ್ನ ನಾಟಕ ರದ್ದಾಗುವಂತೆ ಕೆಲ ಹಿತಾಸಕ್ತಿಗಳು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಮುಖ್ಯಪಾತ್ರ ಸಾಣೆಹಳ್ಳಿ ಸ್ವಾಮಿ ನನ್ನ ಬಗ್ಗೆ ಹೊರಡಿಸಿರುವ ʼಫತ್ವಾʼ ದಿಂದಾಗಿ ನಾಟಕ ರದ್ದು ಮಾಡಲಾಗಿದೆ ಎಂಬ ವದಂತಿ ಇದೆ ಎಂದಿದ್ದಾರೆ.

ನನಗೂ ಸಾಣೆಹಳ್ಳಿಯ ನಾಟಕದ ರೂವಾರಿಗಳಿಗೆ ತತ್ವ ಮತ್ತು ಧ್ಯೇಯಗಳಿಗೂ ವ್ಯತ್ಯಾಸವಿದ್ದರೂ ಶ್ರೀಗಳು ಭಾರತದ ಸಂವಿಧಾನದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವು ಒಬ್ಬ ರಂಗಭೂಮಿ ನಾಟಕ ನಿರ್ದೇಶಕನ ಮತ್ತು ನನ್ನ ತಂಡದ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲವೆಂದು ಭಾವಿಸುತ್ತೇನೆ. ಸೈದ್ಧಾಂತಿಕ ಚರ್ಚೆಗೆ ನಾನು ಮುಕ್ತವಾಗಿದ್ದೇನೆ. ಒಂದು ವೇಳೆ ಶ್ರೀಗಳ ಅನುಯಾಯಿಗಳು ಶ್ರೀಗಳ ನಿರೀಕ್ಷೆ ಮತ್ತು ಆಶಯವನ್ನು ತಪ್ಪಾಗಿ ಭಾವಿಸಿದ್ದರೆ ಈ ಎಲ್ಲಾ ವಿಚಾರವನ್ನು ಅರ್ಥೈಸಿಕೊಂಡು ನಾಟಕ ನಡೆಸಲು ಅವಕಾಶ ಮಾಡಿ ರಂಗಭೂಮಿಗೂ, ಈ ನೆಲದ ನಾಡಿನ ಸಂವಿಧಾನಕ್ಕೂ ಗೌರವಿಸಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.

ನಾಟಕ ರದ್ದಾಗಿದೆ, ನಾನು ಜ. 10 ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದು ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ಸಾಣೇಹಳ್ಳಿ ಸ್ವಾಮೀಜಿ ಒಬ್ಬ ʼಕಮ್ಯುನಿಸ್ಟ್ʼ ಸ್ವಾಮೀಜಿ

ಸಾಣೇಹಳ್ಳಿ ಮಠದ ‘ಶಿವಸಂಚಾರ’ ಸಂಸ್ಥೆ ಪ್ರದರ್ಶನ ಮಾಡುತ್ತಿರುವ ‘ತುಲಾಭಾರ’ ನಾಟಕದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಒಬ್ಬ “ಕಮ್ಯುನಿಸ್ಟ್” ಸ್ವಾಮೀಜಿ, ಹಿಂದೂ ಧರ್ಮವನ್ನು ಅವಮಾನಿಸುವುದು, ಅದರ ಬಗ್ಗೆ ದ್ವೇಷ ಹರಡುವುದು ಅವರ ಅಜೆಂಡಾ ಆರೋಪಿಸಿದ್ದರು.

ಶ್ರೀಗಳ ಡೊಂಗಿ ಜಾತ್ಯತೀಯತೆ, ಪ್ರಗತಿಪರ ಧೋರಣೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದ ಚಳ್ಳಕೆರೆಯ ಪ್ರಶಸ್ತಿ ವಿಜೇತ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಅನುಭವ ಆಧಾರಿತ ನಾಟಕ ‘ತುಲಾಭಾರ’ ಆಗಿದೆ. ಆದರೆ ಇದರಲ್ಲಿ ಬ್ರಾಹ್ಮಣ ಪಾತ್ರದಾರಿಯ ಬದಲು ಮುಸ್ಲಿಂ ಪಾತ್ರ ಇದೆ. ನಾಟಕದಲ್ಲಿ ಒಬ್ಬ ಮುಸಲ್ಮಾನ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾನೆ. ರಂಜಾನ್, ಈದ್ ಮಿಲಾದ್ ಮುಂತಾದ ಹಬ್ಬಗಳ ಪಾವಿತ್ರ್ಯತೆಯನ್ನೂ ಮಕ್ಕಳಿಗೆ ಕಲಿಸುತ್ತಾನೆ. ಆದರೆ, ಶಿಕ್ಷಣ ಕ್ರಾಂತಿ ಮಾಡಿದ್ದು ಬ್ರಾಹ್ಮಣ ಅಂತ ನಾಟಕದಲ್ಲಿ ತೋರಿಸಿದರೆ ಅದು ಹಿಂದೂ ಧರ್ಮದ ಭಾಗವಾಗುತ್ತದೆ. ನಿಮ್ಮ ಜಾತ್ಯಾತೀಯತೆ ಪ್ರಗತಿಪರ ಧೋರಣೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಮುಸುಲ್ಮಾನ ಶ್ರೇಷ್ಠ ಎಂದು ತೋರಿಸಲು ಇದನ್ನು ಮಾಡಿದ್ದೀರಿ ಎಂದು ಸಾಣೇಹಳ್ಳಿ ಶ್ರೀಗಳ ವಿರುದ್ಧ ಅಡ್ಡಂಡ ಕಾರ್ಯಪ್ಪ ಕಿಡಿಕಾರಿದ್ದರು.

ಈ ಸಂಕುಚಿತ ಸ್ವಾಮೀಜಿಯ ಡೋಂಗಿ ಜಾತ್ಯತೀಯತೆ ಮತ್ತು ಪ್ರಗತಿಪರ ಧೋರಣೆಯನ್ನು ಖಂಡಿಸುತ್ತೇನೆ. ಈ ತರಹ ಕಮ್ಯುನಿಸ್ಟ್ ನಾಟಕಕಾರರು ಮಾಡುವ ಕುತಂತ್ರ, ಚೇಷ್ಟೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ಇದು ಕಳೆದ 60 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಅದಕ್ಕೆ ರಾಷ್ಟ್ರೀಯವಾದಿ ಚಿಂತನೆಯ ನಾಟಕಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.

ಸಾಣೆಹಳ್ಳಿ ಶ್ರೀಗಳು ಏನು ಹೇಳಿದ್ದರು?

ಅಡ್ಡಂಡ ಕಾರಿಯಪ್ಪ ಎನ್ನುವ ವ್ಯಕ್ತಿ 2024ರ ‘ಶಿವಸಂಚಾರ’ದ ನಾಟಕಗಳಲ್ಲಿ ಒಂದಾದ “ತುಲಾಭಾರ” ನಾಟಕದ ಪೂರ್ಣ ಮಾಹಿತಿ ತಿಳಿಯದೆ, ನಾಟಕ ನೋಡದೆ ಆಡಿರುವ ಅಪ್ರಬುದ್ಧ ಮಾತುಗಳು ಅವರ ಕೊಳಕು ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ. ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ. ನಾಟಕದ ಲೇಖಕರು ಉತ್ತರ ಕರ್ನಾಟಕದ ಬಿ ಆರ್ ಪೋಲಿಸ್ ಪಾಟೀಲರು. ಆ ನಾಟಕವನ್ನು ರಂಗಭೂಮಿಗೆ ಈಗ ನಿರ್ದೇಶನ ಮಾಡಿರುವವರು ವಿಶ್ವೇಶ್ವರಿ ಹಿರೇಮಠ ಅವರು ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು.

ನಾಟಕವನ್ನು ನಾಟಕವನ್ನಾಗಿ ನೋಡಬೇಕೇ ಹೊರತು ಕಾಮಾಲೆ ಕಣ್ಣುಗಳಿಂದ. ಜಾತಿಯ ಭೂತಗನ್ನಡಿಯಿಂದ ನೋಡಬಾರದು ಎನ್ನುವ ವಿವೇಕ ರಂಗಾಯಣದ ನಿರ್ದೇಶಕರಾಗಿದ್ದ ವ್ಯಕ್ತಿಗೆ ಗೊತ್ತಿಲ್ಲ ಎಂದರೆ ಇವರು ಯಾವ ಅರ್ಹತೆಯ ಮೇಲೆ ರಂಗಾಯಣದ ನಿರ್ದೇಶಕರಾಗಿರಬಹುದು? ಆತ್ಮಾವಲೋಕನ ಮಾಡಿಕೊಂಡು ಬೆಳಕಿನತ್ತ ನಡೆಯುವ ಸಂಕಲ್ಪ ಮಾಡಲಿ. ಪೂರ್ವಾಗ್ರಹ ಪೀಡಿತರಾಗಿ ಯಾರನ್ನೂ ಅವಹೇಳನ ಮಾಡಬಾರದು. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎಂದು ಹೇಳಬೇಕಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ | Film Festival: ಮಾ.1 ರಿಂದ 8ರವರೆಗೆ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Leave a Reply

Your email address will not be published. Required fields are marked *