ಬೆಂಗಳೂರು: ಗಂಗೇನಹಳ್ಳಿಯಲ್ಲಿ 1.11 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆ ಮಾಡಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ (ADGP Chandrashekhar) ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ (HD Kumaraswamy) ಹಲವಾರು ಆರೋಪಗಳನ್ನು ಮಾಡಿದ್ದರು. ಅವರು ಮಾನ್ಯತಾ ಟೆಕ್‌ಪಾರ್ಕ್ ಬಳಿಕ 38 ಅಂತಸ್ತಿನ ಮನೆಕಟ್ಟುತ್ತಿದ್ದಾರೆ, ಅವರ ಮೇಲೆಯೇ ಹಿಂದೆ ಕೇಸ್ ಆಗಿತ್ತು ಎಂದೆಲ್ಲ ಆರೋಪಿಸಿದ್ದರು. ಇದರಿಂದ ಸಿಟ್ಟಿಗೆದ್ದಿರುವ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ಶನಿವಾರ, ತಾವು ವಹಿಸಿರುವ ಎಸ್‌ಐಟಿ ತನಿಖಾ ತಂಡದ ಸಹೋದ್ಯೋಗಿಗಳನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಅವರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಆರೋಪಿ ಎಂದು ಉಲ್ಲೇಖಿಸಿರುವ ಜತೆಗೆ ‘ಹಂದಿಯೊಂದಿಗೆ ಗುದ್ದಾಡಬಾರದು ‘ ಎಂಬ ಜಾರ್ಜ್ ಬರ್ನಾರ್ಡ್ ಷಾ ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಅಧಿಕಾರದಲ್ಲಿರುವ ಕೇಂದ್ರ ಸಚಿವರೊಬ್ಬರನ್ನು ಈ ರೀತಿ ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಬೇಕೆನ್ನುವ ಉದ್ದೇಶದಿಂದಲೇ ಈ ಪತ್ರವನ್ನು ಅವರು ಬರೆದಿದ್ದಾರೆ. ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಧೈರ್ಯ ತುಂಬುವ ರೀತಿಯಲ್ಲಿ ಪತ್ರವಿದೆ. ಪ್ರಕರಣ ಒಂದರ ಆರೋಪಿ ಎಂದು ಪತ್ರ ಆರಂಭಿಸಿರುವ ಚಂದ್ರಶೇಖರ್. ನನ್ನ ಮೇಲೆ ಕುಮಾರಸ್ವಾಮಿ ಅವರು ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ. ಎಸ್ಐಟಿ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿತ್ತು. ಆರೋಪಿ ಹೆಚ್ ಡಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ಇದೀಗ ಅವರು ನಮ್ಮನ್ನ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲವೂ ಭಯಗೊಳಿಸುವ ತಂತ್ರ ಎಂದು ಚಂದ್ರಶೇಖರ್ ಅವರು ಪತ್ರದಲ್ಲಿ ಬರೆದಿದ್ದಾರೆ.
ಕುಮಾರಸ್ವಾಮಿ ಅವರು ನಮ್ಮ ಮೇಲೆ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಎಷ್ಟೇ ಉನ್ನತ ಸ್ಥಾನದಲ್ಲಿದ್ರು ಆತನೊಬ್ಬ ಆರೋಪಿ. ಇಂತಹ ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು ಎಸ್‌ಐಟಿ ಮುಖ್ಯಸ್ಥನಾಗಿ ನಾನು ಭಯವಿಲ್ಲದೆ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಚಂದ್ರಶೇಖರ್ ಅವರು ಸಹೋದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.
ಹಂದಿ ಜತೆ ಗುದ್ದಾಡಬಾರದು
ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಷಾ ಅವರ ಕೋಟ್ ಉಲ್ಲೇಖಿಸಿರುವ ಐಪಿಎಸ್ ಚಂದ್ರಶೇಖರ್ “ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ, ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ”. ಎಂದು ಬರೆದಿದ್ದಾರೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ. ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವ ಪರಿಸ್ಥಿತಿಯಿಂದ ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅಪರಾಧಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Pralhad Joshi: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ; ಪ್ರಲ್ಹಾದ್ ಜೋಶಿ ಆಗ್ರಹ
ನಾವು ಕರ್ತವ್ಯ ನಿರ್ವಹಿಸುವುದರಿಂದ ನಮ್ಮನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಬರೆದ ಅವರು ಸತ್ಯಮೇವ ಜಯತೆ ಎಂದು ಕೊನೆಯಲ್ಲಿ ಹಾಕಿದ್ದಾರೆ.