Thursday, 12th December 2024

ವೇಮನರಂತಹ ಚಿಂತಕರನ್ನ ಪಡೆದ ನಾವು ಪುಣ್ಯವಂತರು: ಅಖಿಲಗೌಡ ಪಾಟೀಲ್

ಕೊಲ್ಹಾರ: ಶ್ರೇಷ್ಠ ವಚನಕಾರ, ಸಮಾಜ ಚಿಂತಕ ಮಹಾನ್ ಯೋಗಿ ವೇಮನ ಜಯಂತಿ ಕಾರ್ಯಕ್ರಮ ಹಾಗೂ ಹೇಮ ವೇಮ ವೃತ್ತ ಉದ್ಘಾಟನಾ ಕಾರ್ಯಕ್ರಮ ಪಟ್ಟಣದಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು.

ವೃತ್ತ ಉದ್ಘಾಟಿಸಿ ಶಾಸಕ ಶಿವಾನಂದ ಪಾಟೀಲ ಮಾತನಾಡುತ್ತಾ ಸಮಾಜದಲ್ಲಿ ಸಾಧನೆಗೈದ ಮಹಾನ್ ನಾಯಕರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡುತ್ತಾ ಮಹಾನ್ ಯೋಗಿ ವೇಮನರ ಬದುಕು ಅತ್ಯಂತ ಸ್ಪೂರ್ತಿದಾಯಕವಾದದ್ದು ಒಡಹುಟ್ಟಿದವರಿಂದ, ಬಂಧುಗಳಿಂದ ಅನಾದಾರಕ್ಕೆ ಗುರಿ ಯಾಗಿ ದುಶ್ಚಟಗಳ ದಾಸನಾಗಿದ್ದ ವೇಮನನಿಗೆ ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ, ಅತ್ತಿಗೆಯ ಪ್ರೇರಣೆಯಿಂದ ವೇಮನ ಮಹಾನ್ ಸಮಾಜ ಚಿಂತಕನಾಗಿ ಬದಲಾಗಿ ಇತರರಿಗೆ ದಾರಿದೀಪ ವಾಗುತ್ತಾನೆ ಎಂದು ಹೇಳಿದರು.

ಯುವ ಮುಖಂಡ ಅಖಿಲ್ ಪಾಟೀಲ್ ಮಾತನಾಡುತ್ತಾ ವೇಮನರಂತಹ ಮಹಾನ್ ಚಿಂತಕರನ್ನ, ಸಮಾಜ ಸುಧಾರಕರನ್ನ ಪಡೆದಿರುವ ನಾವುಗಳು ಪುಣ್ಯವಂತರು ಎಂದು ಹೇಳಿದರು.

ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ರೆಡ್ಡಿ ಸಮಾಜದ ಅಧ್ಯಕ್ಷ ಎಸ್.ಜಿ ಪಾಟೀಲ್. ಮೋಹನಗೌಡ ಪಾಟೀಲ, ಸುರೇಶ ವಠಾರ, ಪ್ರದೀಪ ಪಾಟೀಲ, ಪ್ರಲ್ಹಾದ ಶಿರೋಳ ಉಪಸ್ಥಿತರಿದ್ದರು ಹಾಗೂ ಸಮುದಾಯ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.