Tuesday, 24th September 2024

Alanda Ganesh Visarjan: ಸೆ.27ಕ್ಕೆ ಆಳಂದ ಹಿಂದೂ ಗಣಪತಿ ವಿಸರ್ಜನೆ

Alanda Ganesh Visarjan

ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ಹಾಗೂ ಭವ್ಯ ಶೋಭಾಯಾತ್ರೆ (Alanda Ganesh Visarjan) ಸೆ.27ರ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 9 ವರ್ಷಗಳಿಂದ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದ ಪ್ರದೇಶದಲ್ಲಿ 21 ದಿನಗಳ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. 21 ದಿನಗಳ ನಿರಂತರ ಮಹಾಪೂಜೆ, ಪ್ರಸಾದ ಕಾರ್ಯಗಳು ಜರುಗುತ್ತಿವೆ. ಬೃಹತ್ ಶೋಭಾಯಾತ್ರೆ ಹಾಗೂ ವಿರ್ಸಜನೆ ಕಾರ್ಯಕ್ರಮದಲ್ಲಿ ನಾಡಿನ ಹಲವು ಕಲಾ ತಂಡಗಳು ಭಾಗವಹಿಸಲಿವೆ. ಈ ವರ್ಷ ವಿಶೇಷವಾಗಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಮಹಾರಾಷ್ಟದ ಉಸ್ಮಾನಾಬಾದ ಜಿಲ್ಲೆಯ ದಿಂಡಿ ತಂಡವು ಶೋಭಾಯಾತ್ರೆಯಲ್ಲಿ ಕಲಾ ಪ್ರದರ್ಶನ ನೀಡಲಿದೆ. ಕಲಾ ಪ್ರದರ್ಶನದಲ್ಲಿ 6 ವರ್ಷದ ಬಾಲಕರಿಂದ ಹಿಡಿದು ಹಿರಿಯ ವಯಸ್ಕರವರೆಗೆ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಖ್ಯಾತ ಬಾಲ ವಾಗ್ಮಿ ಹಾರಿಕಾ ಮಂಜುನಾಥ ಅವರಿಂದ ಸೆ. 25ರಂದು ಸಾಯಂಕಾಲ 6 ಗಂಟೆಗೆ ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಜರುಗಲಿದೆ. ಈ ಸಂದರ್ಭದಲ್ಲಿ ತಾಲೂಕಿನ ಕಡಗಂಚಿ, ಚಿಣಮಗೇರಾ, ಕಿಣ್ಣಿಸುಲ್ತಾನ, ಆಳಂದ ಹಿರೇಮಠ, ಮಹಾಂತೇಶ್ವರ ಮಠ, ಯಳಸಂಗಿ, ಶರಣನಗರ, ನಿಂಬರ್ಗಾ ಸೇರಿದಂತೆ ವಿಶ್ವಕರ್ಮ ಸಮಾಜದ ಪೂಜ್ಯರು ಭಾಗವಹಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳಲ್ಲಿ ತಾಲೂಕಿನ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಸೆ. 25ರಂದು ಬೆಳಗ್ಗೆ 10 ಗಂಟೆಗೆ ಸ್ವಚ್ಛತೆ, ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Job Fair: ಉದ್ಯೋಗ ಆಯ್ಕೆಯ ಕುರಿತು ಸ್ಪಷ್ಟ ಚಿತ್ರಣವಿರಬೇಕು: ನಾಹಿದಾ ಜಮ್ ಜಮ್ ಸಲಹೆ

ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಮಹೇಶ ಗೌಳಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮರಾಠ ಸಮಾಜದ ಮುಖಂಡ ನಾಗನಾಥ ಏಟೆ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ನಗರ ಬಿಜೆಪಿ ಅಧ್ಯಕ್ಷ ಬಸವರಾಜ ಹತ್ತರಕಿ, ಪ್ರಕಾಶ ಜೋಶಿ, ಓಂಕಾರ ಕಾಂಬಳೆ, ಗಣೇಶ ಭೋಸಲೆ, ಸತೀಶ ಮೈತ್ರಸ್ಕರ್, ಮೋಹನ ಪರೀಟ್, ನಿತೇಶ ಸೋನಾರ ಸೇರಿದಂತೆ ಇತರರು ಇದ್ದರು.