ಬೆಂಗಳೂರು: ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸಸ್ಯ ಮೂಲದ ನ್ಯಾನೋ ಕಣಗಳನ್ನು ಬಳಸಿದ ನೂರಾರು ಔಷಧ, ಆಹಾರ, ಕಾಸ್ಮೆಟಿಕ್ಸ್ ಉತ್ಪನ್ನಗಳ ಉತ್ಪಾದನೆಯಲ್ಲಿ ತಮ್ಮ ನೂತನ ʼಕದಂಬ ಗ್ರೀನ್ ಟೆಕ್ನಾಲಜಿ ಸಂಸ್ಥೆʼಯು ಯಶಸ್ವಿಯಾಗಿದೆ ಎಂದು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಶುಕ್ರವಾರ ತಿಳಿಸಿದ್ದಾರೆ.
ಗ್ರೀನ್ ನ್ಯಾನೋ ಟೆಕ್ನಾಲಜಿಯಲ್ಲಿ ಕದಂಬ ಮುಂಚೂಣಿಯಲ್ಲಿದ್ದು ಹಲವಾರು ಕಾಯಿಲೆಗಳಿಗೆ ಹಸಿರು ತಂತ್ರಜ್ಞಾನ ಧರಿತ ಸಸ್ಯ ಜನ್ಯ ಔಷಧಗಳನ್ನು ಸಿದ್ಧಪಡಿಸಲಾಗಿದೆ. ಡಾ.ಕಟ್ಟೇಶಗ ಕಟ್ಟಿ ಮತ್ತು ಕವಿತಾ ಕಟ್ಟಿ ನೇತೃತ್ವದ ವಿಜ್ಞಾನಿಗಳ ತಂಡವು ಕದಂಬಕ್ಕೆ 9 ಪೇಟೆಂಟ್ಗಳನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಕ್ಯಾನ್ಸರ್ ರೋಗಿಗಳಿಗೂ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಸೂಕ್ತ ಔಷಧಗಳನ್ನು ಗ್ರೀನ್ ನ್ಯಾನೋ ಪದ್ಧತಿಯಲ್ಲಿ ತಯಾರಿಸಲಾಗಿದೆ. ಹಾಗೂ ಇದು ರೋಗ ಉಪಶಮನ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ. ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಅನಂತ್ ಕುಮಾರ್ ಹೆಗಡೆಯವರು ಸುದ್ದಿಗಾರರಿಗೆ ವಿವರಿಸಿದರು.
ನೂರಕ್ಕೆ ನೂರು ಪರಿಸರಸ್ನೇಹಿ ಉತ್ಪನ್ನ:
ನ್ಯಾನೋ ಗ್ರೀನ್ ಟೆಕ್ನಾಲಜಿಯು ಪ್ರಕೃತಿಗೆ ಹತ್ತಿರವಾದದ್ದು. ನೂರಕ್ಕೆ ನೂರರಷ್ಟು ನೇಚ್ಯುರಲ್ ಆಗಿದೆ. ಇಲ್ಲಿ ಯಾವುದೇ ರಾಸಾಯನಿಕ ಅಂಶಗಳು ಇರುವುದಿಲ್ಲ. ಸಸ್ಯ ಮೂಲಗಳಿಂದಲೇ ನಾನಾ ನ್ಯಾನೋ ಕಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಕದಂಬ ಸಂಸ್ಥೆಯು ಗ್ರೀನ್ ಲೇಬಲ್ ಮತ್ತು ಜೀರೊ ಕೆಮಿಕಲ್ ನೀತಿಯನ್ನು ತನ್ನೆಲ್ಲ ಉತ್ಪನ್ನಗಳಲ್ಲಿ ಅಳವಡಿಸಿಕೊಂಡಿದೆ. ನ್ಯಾನೋ ಮೆಟೀರಿಯಲ್ ಉತ್ಪನ್ನಗಳಲ್ಲಿ “ನಿವ್ವಳ ಶೂನ್ಯ ಇಂಗಾಲʼ ಸಾಧಿಸಿದ ಸಂಸ್ಥೆ ಕದಂಬವಾಗಿದೆ ಎಂದರು.
ಗ್ರೀನ್ ನ್ಯಾನೋ ಉತ್ಪನ್ನಗಳ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಇದು ಆಯುರ್ವೇದಕ್ಕೆ ಪುಷ್ಟಿ ನೀಡುವಂಥದ್ದು. ಭವಿಷ್ಯದ ದಿನಗಳಲ್ಲಿ ನ್ಯಾನೋ ಗ್ರೀನ್ ತಂತ್ರಜ್ಞಾನ ಅತ್ಯಂತ ನಿರ್ಣಾಯಕವಾಗಲಿದೆ ಎಂದರು.
ಅನಂತ್ ಕುಮಾರ್ ಹೆಗಡೆಗೆ ಪ್ರೇರಣೆ ಏನು?
ಕೇವಲ ಯಾವುದೋ ಒಂದು ಪ್ರಬಂಧವನ್ನು ಬರೆದು ಮುಗಿಸಿದರೆ ಸಾಕಾಗುವುದಿಲ್ಲ. ನಮ್ಮ ಸಂಶೋಧನೆಗಳು ಜನರಿಗೆ ಅನುಕೂಲವಾಗಬೇಕು. ಆಗಲೇ ಅದು ಸಾರ್ಥಕವಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಂತಿಮ ಉತ್ಪನ್ನವೇ ಮುಖ್ಯ. ನಾವು ಈ ನಿಟ್ಟಿನಲ್ಲಿ ಸುದೀರ್ಘ ಸಂಶೋಧನೆಯ ನಂತರ ನೂರಾರು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜನರ ಮುಂದಿಟ್ಟಿದ್ದೇವೆ. ಬೆಂಗಳೂರಿನ ಜಯನಗರದಲ್ಲಿ ಕದಂಬದ ಕಾರ್ಪೊರೇಟ್ ಕಚೇರಿಯಿದ್ದರೆ, ಪೀಣ್ಯದಲ್ಲಿ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.
ಗ್ರೀನ್ ನ್ಯಾನೋ ಟೆಕ್ನಾಲಜಿಯ ಮೂಲಕ ತಯಾರಿಸಿದ ಔಷಧಗಳ ಬಳಕೆ ವ್ಯಾಪಕವಾದ ಬಳಿಕ ಅದರ ದರಗಳೂ ತಗ್ಗಲಿವೆ ಎಂದು ತಿಳಿಸಿದರು. ನ್ಯಾನೊ ತಂತ್ರಜ್ಞಾನದ ಬಗ್ಗೆ ಹಲವಾರು ವರ್ಷಗಳಿಂದಲೂ ಅಧ್ಯಯನ ನಡೆಸುತ್ತಿದ್ದೆ, ವಿಜ್ಞಾನಿಗಳ ಒಡನಾಟದಿಂದ ಗ್ರೀನ್ ನ್ಯಾನೋ ಟೆಕ್ನಾಲಜಿ ಬಗ್ಗೆ ಆಸಕ್ತಿ ಹೆಚ್ಚಿತು. ಕೊನೆಗೆ ಇದನ್ನೇ ಉದ್ಯಮದ ಸಾಂಸ್ಥಿಕ ರೂಪದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವುದು ಮತ್ತು ಸಮಾಜದ ಋಣ ತೀರಿಸಲು ಕಾರ್ಯಪ್ರವೃತ್ತನಾದೆ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದರು.
ಚಿನ್ನ, ಬೆಳ್ಳಿಯ ನ್ಯಾನೋ ಕಣಗಳ ಅಭಿವೃದ್ಧಿ:
ಹಿರಿಯ ವಿಜ್ಞಾನಿ ಕಟ್ಟೇಶ್ ಕಟ್ಟಿಯವರು ಮಾತನಾಡಿ, ಅನಂತ್ ಕುಮಾರ್ ಹೆಗಡೆ ನೇತೃತ್ವದ ಕದಂಬ ಸಂಸ್ಥೆಯು ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ನುರಿತ ವಿಜ್ಞಾನಿಗಳ ತಂಡವು ನಾನಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಮೆಟಲ್ ನ್ಯಾನೋ ಸಿಂಥೆಸಿಸ್ ವಲಯದಲ್ಲಿ ಚಿನ್ನ, ಬೆಳ್ಳಿ, ಕಬ್ಬಿಣದ ನ್ಯಾನೊ ಕಣಗಳನ್ನೂ ಕದಂಬ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Viral News: ರಾತ್ರಿ ಬೆಳಗಾಗುವುದರೊಳಗೆ ವ್ಯಕ್ತಿಗೆ ಜಾಕ್ಪಾಟ್- 50 ಕಂಪನಿಗಳಿಂದ ಸಂದರ್ಶನಕ್ಕೆ ಕರೆ; ಇದೆಲ್ಲಾ ಆಗಿದ್ದು ಹೇಗೆ?
ಕದಂಬದ ಗ್ರೀನ್ ನ್ಯಾನೋ ಟೆಕ್ನಾಲಜಿಯನ್ನು ಬಳಸಿಕೊಳ್ಳಲು ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಿಂದ ಬೇಡಿಕೆ ಬಂದಿದೆ ಎಂದು ವಿವರಿಸಿದರು. ಔಷಧ, ಜವಳಿ, ಆಹಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕದಂಬದ ಉತ್ಪನ್ನಗಳು ಬೇಡಿಕೆ ಗಳಿಸಿದೆ ಎಂದರು.