Thursday, 28th November 2024

ಕ್ಷೇತ್ರಕ್ಕೆ ಅಪರಿಚಿತನಾದ ಅಣ್ಣಾ

ಪತ್ನಿಯ ಕ್ಷೇತ್ರದಲ್ಲಿ ಮಗ್ನರಾದ ಸಂಸದ

ಸಂಸದರ ಹೆಸರನ್ನೇ ಮರೆತ ಕ್ಷೇತ್ರದ ಜನ

ವಿಶೇಷ ವರದಿ: ವಿನಾಯಕ ಮಠಪತಿ

ಬೆಳಗಾವಿ: ಇವರು ಹೆಸರಿಗಷ್ಟೇ ಚಿಕ್ಕೋಡಿ ಲೋಕಸಭಾ ಸದಸ್ಯರು. ಆದರೆ ತಮ್ಮ ಧರ್ಮಪತ್ನಿ ಪ್ರತಿನಿಧಿಸುವ ನಿಪ್ಪಾಣಿ ಕ್ಷೇತ್ರಕ್ಕೆ ಮಾತ್ರ ಸೀಮಿತ ರಾಗಿರುವ ಸಂಸದರು.

ಚುನಾಯಿತರಾಗಿ ಎರಡು ವರ್ಷ ಕಳೆದರೂ ಇನ್ನೂಇವರ ಮುಖದರ್ಶನ ಕ್ಷೇತ್ರದ ಜನ ಪಡೆದಿಲ್ಲ. ಜನರ ಸಂಕಷ್ಟ ಕೇಳುವ ಮನಸ್ಸು ಇವರೂ ಮಾಡಿಲ್ಲ. ಯಾರು ನಮ್ಮ ಸಂಸದರು ಎಂದು ಜನರಲ್ಲೇ ಒಂದು ದ್ವಂದ್ವ ಶುರುವಾಗಿದೆ. ಅಷ್ಟಕ್ಕೂ ಈ ಸಂಸದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ್ ಜೊಲ್ಲೆ.

ಕಳೆದ ಎರಡು ವರ್ಷಗಳಿಂದ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿ ಕೋಟ್ಯಂತರ ರು. ಹಾನಿ ಅನುಭವಿಸಿದ್ದ ಗಡಿನಾಡ ಜನರಿಗೆ ಇಲ್ಲಿಯವರೆಗೂ ಸೂರು ಸಿಕ್ಕಿಲ್ಲ. ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಇಲ್ಲಿಯವರೆಗೆ ಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ಕಿವಿಗೊಡದೇ ತಮ್ಮ ಪಾಡಿಗೆ ತಮ್ಮ ಪತ್ನಿ ಪ್ರತಿನಿಧಿ ಸುವ ಕ್ಷೇತ್ರದ ಸುತ್ತ ಸುತ್ತುತ್ತಿದ್ದಾರೆ. ವಿಪರ್ಯಾಸವೆಂದರೆ ಈಗಲೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು ಯಾರೆಂದು ಜನರನ್ನು ಪ್ರಶ್ನೆ ಮಾಡಿ ದರೆ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಹೆಸರು ಹೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಸ್ತುತ ಸಂಸದರು ಜನರಿಂದ ದೂರ ಉಳಿದಿ ದ್ದಾರೆ.

ಸಂಸದರನ್ನು ಭೇಟಿಯಾಗಲು ಜನರ ಹರಸಾಹಸ: ಚಿಕ್ಕೋಡಿ ಸಂಸದರು ಅಷ್ಟೊಂದು ಸುಲಭವಾಗಿ ಜನರಿಗೆ ಸಿಗುವುದಿಲ್ಲ. ಎಂಟು ವಿಧಾನ ಸಭಾ ಕ್ಷೇತ್ರ ಹೊಂದಿರುವ ಲೋಕಭಾ ಕ್ಷೇತ್ರ ಇದಾಗಿದ್ದು, ವಿಸ್ತೀರ್ಣದಲ್ಲಿಯೂ ಅತ್ಯಂತ ದೊಡ್ಡ ಜಿಲ್ಲೆ. ಅಥಣಿ ಭಾಗದ ಕಟ್ಟಕಡೆಯ ಗ್ರಾಮಗಳಾದ ತೆಲಸಂಗ ಸೇರಿದಂತೆ ಮುಂತಾದ ಗ್ರಾಮಗಳ ಜನ ತಮ್ಮ ಸಂಸದರನ್ನು ಭೇಟಿಯಾಗಬೇಕಾದರೆ ಸುಮಾರು 100 ಕಿ.ಮೀ ದೂರದ ಚಿಕ್ಕೋಡಿಗೆ ಬರಬೇಕಾದ ಅನಿವಾರ್ಯತೆ ಇದೆ. ಅಣ್ಣಾಸಾಹೇಬ್ ಜೊಲ್ಲೆ ಸಂಸದರಾಗಿ ಎರಡು ವರ್ಷ ಕಳೆಯುತ್ತಿದ್ದರೂ, ಇಲ್ಲಿಯವರೆಗೆ ಒಂದು ಜನಸಂಪರ್ಕ ಕಚೇರಿ ಕೂಡ ದೂರದ ಅಥಣಿ, ರಾಯಬಾಗ ತಾಲೂಕುಗಳಲ್ಲಿ ಮಾಡಿಲ್ಲ.

ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತ: ಚಿಕ್ಕೋಡಿ-ಸದಲಗಾ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಯಾಗಿದ್ದ ಅಣ್ಣಾ ಸಾಹೇಬ್ ಜೊಲ್ಲೆ ಸೋಲು ಕಂಡಿದ್ದರು. ಮುಂದೆ ಬರಲಿರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಇವರು, ಅದೇ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡು ಲೋಕಸಭೆ ಕ್ಷೇತ್ರವನ್ನೇ ಮರೆತಿದ್ದಾರೆ. ಒಂದು ಕಡೆ ಪ್ರವಾಹದಿಂದ ತತ್ತರಿಸಿರುವ ನದಿ ಭಾಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದು ಕಡೆ ಕಬ್ಬು ಬೆಳೆಗಾರರು ಹಾಗೂ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತಾಗಿ ಕೇಂದ್ರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಪತ್ನಿಯ ಸಚಿವ ಸ್ಥಾನ ಉಳಿಸಲು ಅವಿರತ ಪ್ರಯತ್ನ: ಕಳೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ವದಂತಿ ಸಂದರ್ಭದಲ್ಲಿ ಅಣ್ಣಾಸಾಹೆಬ್ ಜೊಲ್ಲೆ ಪಟ್ಟ ಪ್ರಯತ್ನ
ಅಷ್ಟಿಷ್ಟಲ್ಲ. ಆದರೆ ಕ್ಷೇತ್ರದ ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ ಅತ್ತ ಕಡೆ ಮುಖ ಮಾಡಿಲ್ಲ. ಒಂದು ಕಡೆ ದೇಶದ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಮಾತನಾಡುವ ನರೇಂದ್ರ ಮೋದಿಯವರ ಪಕ್ಷದ ಸಂಸದರೇ ಈ ರೀತಿಯ ವರ್ತನೆ ಮಾಡುವುದು ಎಷ್ಟು ಸರಿ ಎಂಬುದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರ ಮಾತು

ಅಭಿವೃದ್ಧಿಯಲ್ಲಿ ಬೆಳಗಾವಿ ಮುಂದೆ, ಚಿಕ್ಕೋಡಿ ಹಿಂದೆ: ಬೆಳಗಾವಿಯನ್ನು ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಬೆಳಗಾವಿ ನಾಯಕರು ಹಾಗೂ ಹಿಂದಿನ ಸಂಸದರಾಗಿದ್ದ ದಿ.ಸುರೇಶ್ ಅಂಗಡಿ ಮಾಡಿದ್ದ ಪ್ರಯತ್ನ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಕಂಡು ಬರುತ್ತಿಲ್ಲ.

ಸರಕಾರಿ, ಶಿಕ್ಷಣ ಸಂಸ್ಥೆಗಳು ಹಾಗೂ ಯಾವುದೇ ಕೈಗಾರಿಕೆಗಳು ಇಲ್ಲಿಯವರೆಗೂ ಪ್ರಾರಂಭವಾಗಿಲ್ಲ. ಜತೆಗೆ ನಿರುದ್ಯೋಗ ಸಮಸ್ಯೆ  ಹೋಗಲಾಡಿಸು ವಲ್ಲಿ ಚಿಕ್ಕೋಡಿ ಸಂಸದರ ಕೊಡುಗೆ ಶೂನ್ಯ. ಇಲ್ಲಿಯವರೆಗೆ ಕ್ಷೇತ್ರದ ಕುರಿತಾಗಿ ಕೇಂದ್ರದ ಯಾವುದೇ ನಾಯಕರನ್ನು ಭೇಟಿಯಾಗಿ ತಮ್ಮ ಬೇಡಿಕೆ ಇಟ್ಟ ಉದಾಹರಣೆ ಕೂಡ ಇಲ್ಲ. ಸಂಸದರ ಅನುದಾನದ ಅಡಿಯಲ್ಲಿ ಗ್ರಾಮ ಹಾಗೂ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಒಂದು ಸಣ್ಣ ಕೆಲಸ ನಡೆಯ ದಿರುವುದು ಕ್ಷೇತ್ರದ ಜನರ ಪಾಲಿಗೆ ದುರಂತವೇ ಸರಿ.

ಕೋಟ್‌

ಕಳೆದ ವರ್ಷ ಪ್ರವಾಹದಿಂದ ಜನರ ಜೀವನ ತತ್ತರಿಸಿ ಹೋಗಿದೆ. ಆದರೆ ಸಂಸದರು ಇಲ್ಲಿಯವರೆಗೂ ಅದಕ್ಕೆ ಪರಿಹಾರ ಕೊಡಿಸಿಲ್ಲ. ಈ ಹಿಂದೆ ಸಂಸದ ರಾದವರು ಪ್ರತಿ ತಾಲೂಕಿಗೆ ಜನಸಂಪರ್ಕ ಕಚೇರಿ ತೆರೆದು ಜನರಿಗೆ ಹತ್ತಿರವಾಗುತ್ತಿದ್ದರು. ಆದರೆ ಇವರಿಗೆ ಜನರನ್ನು ಭೇಟಿಯಾಗುವುದೆಂದರೆ ಅಲರ್ಜಿ. ಇಂಥವರು ನಮಗೆ ಬೇಕಾ?

-ಶರಣಪ್ಪ ನಾಯಿಕ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರ

ನಮ್ಮ ಸಂಸದರು ಅವರ ಉದ್ದಿಮೆ ಬೆಳೆಸುವಲ್ಲಿಯೇ ಮಗ್ನರಾಗಿದ್ದಾರೆ. ತಮ್ಮ ಪತ್ನಿಯ ಸಚಿವ ಸ್ಥಾನ ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ
ಹಿಂದಿನ ಸಂಸದರು ಆರು ತಿಂಗಳಿಗೆ ಒಂದು ಬಾರಿಯಾದರೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಜನರ ಕಷ್ಟ-ನಷ್ಟ ಆಲಿಸುತ್ತಿದ್ದರು. ಆದರೆ ಇವರು ಜನರಿಗೆ ಗಗನಕುಸುಮವಾಗಿದ್ದಾರೆ.

– ಬಾವುಸಾಬ ಬಿಸ್ವಾಗರ ಗ್ರಾಪಂ ಮಾಜಿ ಸದಸ್ಯ