Saturday, 4th January 2025

Areca nut Price: ‘ಮ್ಯಾಮ್‌ಕೋಸ್‌‌’ ಸಂಸ್ಥೆಯ ರಾಶಿ ಇಡಿ ಅಡಿಕೆಗೆ ಹೆಚ್ಚಿದ ಡಿಮ್ಯಾಂಡ್, ಏರುತ್ತಿರುವ ದರ

Areca nut price
-ಅರವಿಂದ ಸಿಗದಾಳ್, ಮೇಲುಕೊಪ್ಪ
Aravinda Sigdal Melukoppa

ಕಳೆದ ನಾಲ್ಕೈದು ತಿಂಗಳಿಂದ ಇಳಿಮುಖ ಕಂಡಿದ್ದ ಅಡಿಕೆ ಧಾರಣೆ ನಿಧಾನವಾಗಿ ಚೇತರಿಕೆ (Areca nut Price) ಕಾಣುತ್ತಿದೆ. ಅದರಲ್ಲೂ ಮ್ಯಾಮ್‌ಕೋಸ್ (ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ) ಸಂಸ್ಥೆಯ ಹೊಸ ರಾಶಿ ಇಡಿ ಕೆಂಪಡಿಕೆಗೆ ಹೆಚ್ಚು ದರ ಸಿಗುತ್ತಿದ್ದು, ಸಂಸ್ಥೆಯ ಸದಸ್ಯ ರೈತರು ತಮ್ಮ ಮೊದಲನೇ ಕೊಯಿಲಿನ ಅಡಿಕೆಯನ್ನು ಮ್ಯಾಮ್‌ಕೋಸ್‌ನಲ್ಲೇ ವ್ಯಾಪಾರಕ್ಕೆ ಹಾಕಿ, ಹೆಚ್ಚಿನ ದರ ಪಡೆಯುತ್ತಿದ್ದಾರೆ.

ಕಳೆದ ಆರೇಳು ತಿಂಗಳುಗಳಿಂದ ‘ಮಿಕ್ಸಿಂಗ್ ಅಡಿಕೆ’, ‘ಕ್ವಾಲಿಟಿ ಇಲ್ಲದ ಅಡಿಕೆ’ ಇತ್ಯಾದಿ ಕೃತಕ ಇಲ್ಲೂಷನ್ ಸಮಸ್ಯೆಗಳನ್ನು ಸೃಷ್ಟಿಸಿ ಲಾಬಿ ಮಾಡಿದ್ದ ಖಾಸಗೀ ಮಧ್ಯವರ್ತಿಗಳು ಮತ್ತು ಕೆಲವು ಗುಟ್ಕಾ ಕಂಪನಿಗಳು, ಸಹಕಾರಿ ಸಂಘಗಳ ಅಡಿಕೆಯನ್ನೂ ತಿರಸ್ಕರಿಸುವಂತೆ ಮಾಡಿದ ಪ್ರಹಸನದಲ್ಲಿ, ಸಹಕಾರಿ ಸಂಸ್ಥೆಗಳಲ್ಲಿನ ಅಡಿಕೆಗೆ ‘ದರ ಕುಸಿತ’ದ ಸಂಚಲನ ಉಂಟಾಯಿತು. ಪರಿಣಾಮ ಮ್ಯಾಮ್‌ಕೋಸ್ ಸೇರಿದಂತೆ APMC ಒಳಗಿನ ಸಹಕಾರಿ ಸಂಘಗಳಲ್ಲಿನ ಬಹುತೇಕ ಲಾಟ್‌ಗಳ ಕ್ವಿಂಟಾಲ್ ರಾಶಿ ಇಡಿ ಅಡಿಕೆಗೆ ₹12,000 ರಿಂದ ₹.13,000 ಕುಸಿಯಿತು. ಕಂಗಾಲಾದ ನೂರಾರು ರೈತರು ಸಹಕಾರ ಸಂಸ್ಥೆಗಳಿಂದ ಅಡಿಕೆ ಹಿಂಪಡೆದು, ಹೊರಗಡೆ ಮಾರುಕಟ್ಟಯಲ್ಲಿ ಖಾಸಗಿ ವರ್ತಕರಿಗೆ ಮಾರಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದರು.

MAMCOS

ಆದರೆ ಈಗ ಮ್ಯಾಮ್‌ಕೋಸ್‌ನಲ್ಲೇ ರಾಶಿ ಇಡಿ ಅಡಿಕೆಗೆ ಹೆಚ್ಚಿನ ಧಾರಣೆ ದೊರೆಯುತ್ತಿದ್ದು, ಮಲೆನಾಡು ಅಡಿಕೆ ಬೆಳೆಗಾರರು ಮತ್ತೆ ಮ್ಯಾಮ್‌ಕೋಸ್ ಕಡೆಗೆ ಮುಖ ಮಾಡಿದ್ದಾರೆ.

ಸೈಕ್ಲೋನ್‌ಗಳ ಮಳೆ ಕಾರಣದಿಂದ ಒಂದು ತಿಂಗಳು ತಡವಾಗಿ ಶುರುವಾದ ಅಡಿಕೆ ಕೊಯ್ಲಿನಿಂದ ಮಲೆನಾಡಿನ ಸಾಂಪ್ರದಾಯಕ ಪದ್ಧತಿಯ ಕೆಂಪಡಿಕೆಗೆ ಬೇಡಿಕೆಯೂ ಹೆಚ್ಚುತ್ತಿದೆ. ತೀರ್ಥಹಳ್ಳಿಯ ಮ್ಯಾಮ್‌ಕೋಸ್‌ನಲ್ಲಿನ ರಾಶಿ ಇಡಿ ಕ್ವಿಂಟಾಲ್ ಅಡಿಕೆಯ ಧಾರಣೆ ಕಳೆದ ವಾರ ₹51,565ಕ್ಕೆ ಏರಿದೆ. ಇನ್ನಷ್ಟು ಏರುವ ಲಕ್ಷಣಗಳೂ ಕಾಣುತ್ತಿವೆ.

ಹಾಗಾದರೆ ಈಗ ಮ್ಯಾಮ್‌ಕೋಸ್‌ನಲ್ಲಿ ರಾಶಿ ಇಡಿ ಅಡಿಕೆ ದರ ಏರಲು ಕಾರಣ ಏನು?

ಖಾಸಗಿ ವರ್ತಕರ ಲಾಬಿಯ ಪರಿಣಾಮದಿಂದ ದರ ಕುಸಿತ ಕಂಡಾಗ, ಅಡಿಕೆ ಬೆಳೆಗಾರರು, APMC ಯ ಸಹಕಾರಿ ಸಂಸ್ಥೆಗಳಿಂದ ಅಡಿಕೆ ಹಿಂಪಡೆಯುವ ಪ್ರಕ್ರಿಯೆಗೆ ಎಚ್ಛತ್ತಕೊಂಡ ಮ್ಯಾಮ್‌ಕೋಸ್ ಸಂಸ್ಥೆ ತನ್ನ ಸದಸ್ಯರಿಗೆ ಅಡಿಕೆ ಕ್ವಾಲಿಟಿಗೆ ಗಮನ ಕೊಡುವಂತೆ ವಿನಂತಿಸಿತು. ನಾಲ್ಕೈದು ವರ್ಷಗಳಿಂದ ಗೊರಬಲು ಪಾಲೀಶ್ ಯಂತ್ರದಲ್ಲಿ ಪಾಲೀಶ್ ಮಾಡಿದ ಇಡಿ ಅಡಿಕೆಯನ್ನು ರಾಶಿ ಇಡಿಗೆ ಸೇರಿಸಿ (ನಾಲ್ಕೈದು ವರ್ಷಗಳೂ ಗೊರಬಲು ಫಾಲೀಶ್ ಯಂತ್ರದ ಉತ್ತಮ ಇಡಿ ಅಡಿಕೆಯನ್ನು ರಾಶಿ ಇಡಿಗೆ ಸೇರಿಸುವುದು ಜುಲೈ 2024ರವರೆಗೂ ಗುಣಮಟ್ಟ ಅಪರಾಧ ಆಗಿರಲಿಲ್ಲ) ಒಳ್ಳೆಯ ದರ ಪಡೆಯುತ್ತಿದ್ದ ರೈತರಿಗೆ ಇನ್ನು ಮುಂದೆ ಗೊರಬಲು ಫಾಲೀಶ್ ಯಂತ್ರದ ಇಡಿ ಅಡಿಕೆಯನ್ನು ರಾಶಿ ಇಡಿಗೆ ಮಿಶ್ರಣ ಮಾಡದೆ ಎರಡನ್ನೂ ಬೇರೆ ಬೇರೆಯಾಗಿಯೇ ಕೊಡುವಂತೆ ವಿನಂತಿಸಿತು. ಅಡಿಕೆಯನ್ನು ಸಾಕಷ್ಟು ಬಿಸಿಲಿನಲ್ಲಿ ಒಣಗಿಸಿಯೇ ಮ್ಯಾಮ್‌ಕೋಸ್‌ಗೆ ಕಳಿಸುವಂತೆಯೂ ವಿನಂತಿಸಿತು. ಚೇಣಿದಾರರು ಅಡಿಕೆ ಒಣಗಿಸುವಾಗ, ಅಡಿಕೆ ಆರಿಸುವಾಗ ಹೆಚ್ಚಿನ ಮುತುವರ್ಜಿ ವಹಿಸದೇ ಹೋಗಬಹುದು, ಚೊಗರು ಮಾತ್ರ ಅಲ್ಲದೆ ಕೃತಕ ಕೆಮಿಕಲ್ ಬಣ್ಣ ಹಾಕುವ ಸಾಧ್ಯತೆಯೂ ಇದೆ, ಇವೆಲ್ಲವುಗಳನ್ನು ಗಮನಿಸುವಂತೆ ಮ್ಯಾಮ್‌ಕೋಸ್ ರೈತರಿಗೆ ಪ್ರಕಟಣೆಯ ಮಾಹಿತಿಯನ್ನು ನೀಡಿ ವಿನಂತಿಸಿತು.

ಪರಿಣಾಮ, ರೈತರು, ಚೇಣಿದಾರರು ಈಗ ಉತ್ತಮ ಅಡಿಕೆಯನ್ನು ಮ್ಯಾಮ್‌ಕೋಸ್‌ಗೆ ಕಳಿಸುತ್ತಿದ್ದಾರೆ. ಇದಲ್ಲದೆ, ಮ್ಯಾಮ್‌ಕೋಸ್‌ನಲ್ಲಿ ಪ್ರತೀ ಲಾಟ್/ಬ್ಯಾಚ್ ಅಡಿಕೆಯನ್ನು ಸಂಪೂರ್ಣ ಸುರಿದು, ಗುಣಮಟ್ಟ ಪರಿಶೀಲಿಸಿ, ಒಂದು ಬ್ಯಾಚ್ ಅಡಿಕೆಯ ಎಲ್ಲಾ ಚೀಲಗಳಲ್ಲೂ ಒಂದೇ ರೀತಿ ಇರುವಂತೆ ಮಾಡಿ, ಹೊಸ ಚೀಲಗಳಿಗೆ ತುಂಬಿಸಿ ಪ್ಯಾಕ್ ಮಾಡುವ, ಗುಣಮಟ್ಟ-ತೇವಾಂಶ ಪರೀಕ್ಷೆ ಮಾಡುವ, ಚೀಲದಲ್ಲಿ ಇರಬಹುದಾದ ಪುಡಿ ಅಡಿಕೆಯನ್ನು ಜರಡಿ ಯಂತ್ರದಲ್ಲಿ ಬೇರ್ಪಡಿಸುವ ವ್ಯವಸ್ಥೆ ಮಾಡಿದ್ದು ಉತ್ತಮ ರಾಶಿ ಇಡಿ ಅಡಿಕೆಗಳು ಮಾತ್ರ ಮ್ಯಾಮ್‌ಕೋಸ್ ಗೋದಾಮಿನ ಒಳಗೆ ಪ್ರವೇಶ ಪಡೆಯುತ್ತಿದೆ.

ಮ್ಯಾಮ್‌ಕೋಸ್‌ನಲ್ಲಿ ಟೆಂಡರ್‌ಗೆ ಬರುವವರಿಗೆ ಮತ್ತು ನೇರ ವ್ಯಾಪಾರ ಮಾಡುವ ಗುಟ್ಕಾ ಕಂಪನಿಯವರಿಗೆ, ಕ್ವಾಲಿಟಿ ಅಡಿಕೆಗಾಗಿ ತೆಗೆದುಕೊಂಡ ಪರಿಕ್ರಮಗಳ ಮಾಹಿತಿಯನ್ನು ಹಂಚಿಕೊಂಡಿದೆ. ಎಲ್ಲ ಚೀಲಗಳಲ್ಲೂ ಏಕ ರೂಪತೆಗಾಗಿ, ನಿಗದಿತ ತೇವಾಂಶ ಮಿತಿ, ರಾಶಿ ಇಡಿ ಅಡಿಕೆ ಚೀಲಗಳಲ್ಲಿ ಪುಡಿ ರಹಿತವಾಗಿ ಇರುವಂತೆ ಮ್ಯಾಮ್‌ಕೋಸ್ ತೆಗೆದುಕೊಂಡ ಪರಿಕ್ರಮಗಳಿಂದಾಗಿ, ಈಗ ಮ್ಯಾಮ್‌ಕೋಸ್ ರಾಶಿ ಇಡಿ ಅಡಿಕೆಗೆ ಹೆಚ್ಚಿನ ಧಾರಣೆ ಲಭಿಸುತ್ತಿದೆ.

ಬದಲಾಯಿಸುವುದಕ್ಕೂ ಅವಕಾಶ

ಹಿಂದಿನ ಹಳೇ ಅಡಿಕೆಯನ್ನು ಮ್ಯಾಮ್‌ಕೋಸ್‌ನಲ್ಲಿ ದಾಸ್ತಾನು ಇಟ್ಟಿರುವ ರೈತರು, ಅಷ್ಟೇ ತೂಕದ ಹೊಸ ಅಡಿಕೆಯನ್ನು ತಂದು ಬದಲಾಯಿಸಿಕೊಂಡು ಹೋಗುವುದಕ್ಕೂ ಮ್ಯಾಮ್‌ಕೋಸ್ ಅವಕಾಶ ಮಾಡಿಕೊಟ್ಟಿದೆ.

ಒಂದೇ ಬ್ಯಾಚ್‌ನ ಎಲ್ಲ ಚೀಲಗಳ ಅಡಿಕೆಯನ್ನು ಏಕ ರೂಪತೆಗೆ ಮಿಶ್ರಣ ಮಾಡುವ, ಪುಡಿ ತೆಗೆಯುವ, ಹೊಸ ಚೀಲಕ್ಕೆ ತುಂಬಿಸುವ ಆಧುನಿಕ ಯಂತ್ರಗಳನ್ನು ಈಗಾಗಲೆ ಸಾಗರ, ಹೊಸನಗರ, ಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗ ಬ್ರಾಂಚ್‌ಗಳಲ್ಲಿ ಅಳವಡಿಸಿದ್ದು, ಉಳಿದ ಕಡೆಗಳಲ್ಲಿ ಈ ಯಂತ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮ್ಯಾಮ್‌ಕೋಸ್ ನಿರ್ದೇಶಕರಾದ ಎ. ಸುರೇಶ್ಚಂದ್ರ ಮತ್ತು ಟಿ.ಕೆ. ಪರಾಶರರವರು ತಿಳಿಸಿದ್ದಾರೆ.
ಅಡಿಕೆಯ ತೇವಾಂಶ ಪರಿಶೀಲಿಸುವ ಯಂತ್ರಗಳನ್ನು ಸಧ್ಯದಲ್ಲೇ ಎಲ್ಲಾ ಮ್ಯಾಮ್‌ಕೋಸ್ ಬ್ರಾಂಚ್‌ಗಳಲ್ಲಿ ಅಳವಡಿಸಲಾಗುವುದು ಎಂದೂ ನಿರ್ದೇಶಕರು ತಿಳಿಸಿದ್ದು, ಇದೆಲ್ಲದರ ಪರಿಣಾಮ ಅಡಿಕೆ ವ್ಯಾಪಾರಿಗಳಲ್ಲೂ, RMD, ರಜನಿಗಂಧ ತಯಾರಿಸುವಂತಹ ಪ್ರಮುಖ ಗುಟ್ಕಾ ಕಂಪನಿಗಳೂ, ವ್ಯಾಪಾರಿಗಳಿಗೂ ಮ್ಯಾಮ್‌ಕೋಸ್‌ ಮೇಲೆ ಭರವಸೆ ಹೆಚ್ಚಿದ್ದು, ಸಾಂಪ್ರದಾಯಿಕ ಮಲೆನಾಡು ಅಡಿಕೆ ಬೆಳೆಗಾರರಿಗೂ ಸಂಸ್ಥೆಯ ಮೇಲೆ ಧೈರ್ಯ ಹೆಚ್ಚುತ್ತಿದೆ.

ಜತೆಗೆ ಕೆಂಪಡಿಕೆಗೆ ಮಲೆನಾಡ ಸಾಂಪ್ರದಾಯಿಕ ಬ್ರಾಂಡ್ ಅಡಿಕೆ ಮಾಡಲು ಮ್ಯಾಮ್‌ಕೋಸ್ ಪ್ರಯತ್ನಿಸುತ್ತಿದ್ದು, ಇದರಿಂದ ಮಲೆನಾಡ ಅಡಿಕೆಗೆ ದೇಶೀಯ ಮತ್ತು ವಿಶ್ವ ಮಾನ್ಯತೆ ಸಿಕ್ಕಿ, ಮಲೆನಾಡ ಕೆಂಪಡಿಕೆಗೆ ಮೌಲ್ಯ ಹೆಚ್ಚುವ ಸಾಧ್ಯತೆಯೂ ಇದೆ.

ಇದೆಲ್ಲವುದರ ಜತೆಗೆ, ಸಹಕಾರಿ ಸಂಸ್ಥೆ ಮ್ಯಾಮ್‌ಕೋಸ್ ಅಡಿಕೆ ಬೆಳೆಗಾರರ ಪರವಾಗಿ ನಿಂತು, ರೈತರ ತಲೆಯ ಮೇಲೆ ತೂಗುಕತ್ತಿಗಳಾಗಿರುವ ಅಡಿಕೆ ಹಾನಿಕಾರಕ ಅರೋಪ ಕೇಸ್, ವಿದೇಶಿ ಅಕ್ರಮ ಅಡಿಕೆ ಅವ್ಯಾಹತವಾಗಿ ಒಳ ಬರುತ್ತಿರುವುದು, ಅಡಿಕೆಗೆ ಮಧ್ಯವರ್ತಿಗಳು ರಾಸಾಯನಿಕ ಬಣ್ಣ ಬಳಸುತ್ತಿರುವ ದಂದೆ, ದೇಶೀಯವಾಗಿಯೂ ನೆಡೆಯುತ್ತಿರುವ ಅಕ್ರಮ ಅಡಿಕೆ ಸಾಗಾಣಿಕೆ, ವಿದೇಶಿ ಕಳಪೆ ಅಡಿಕೆಯನ್ನು ದೇಶೀಯ ಕ್ವಾಲಿಟಿ ಅಡಿಕೆಯೊಂದಿಗೆ ಮಿಶ್ರಣ ಮಾಡುವ ಕಳ್ಳ ವ್ಯವಹಾರಗಳು, ಅಡಿಕೆ ರೋಗಗಳಿಗೆ ಸೂಕ್ತ ಸಂಶೋಧನೆ, ಪರಿಹಾರಗಳಿಗೆ ಸರಕಾರಗಳೊಂದಿಗೆ ನೇರ ವ್ಯವಹರಿಸುವಿಕೆ ಮುಂತಾದ ವಿಚಾರಗಳಿಗೆ ಗಮನ ಹರಿಸಿ, ಅಡಿಕೆ ಬೆಳೆಗಾರರ ಆತಂಕ ಕಮ್ಮಿ ಮಾಡುವ ಜವಾಬ್ದಾರಿಯನ್ನು ಮ್ಯಾಮ್‌ಕೋಸ್ ಹೋರಬೇಕಿದೆ ಎಂಬುದು ಎಲ್ಲಾ ಅಡಿಕೆ ಬೆಳೆಗಾರರ ನಿರೀಕ್ಷೆ.

2025ಕ್ಕೆ ಮ್ಯಾಮ್‌ಕೋಸ್ ಈ ಎಲ್ಲ ನಿರೀಕ್ಷೆಗಳಿಗೆ ಸ್ಪಂದಿಸಿ, ದಾಪುಗಾಲನ್ನಿಟ್ಟು, ಧನಾತ್ಮಕ ಶ್ರೇಯಸ್ಸನ್ನು ಪಡೆದು ರೈತರಿಗೆ ಬಲ ತುಂಬುವಂತಾಗಲಿ.

ಈ ಸುದ್ದಿಯನ್ನೂ ಓದಿ | KSRTC news: ರಾಜ್ಯದ ಹೆಮ್ಮೆಯ ಕೆಎಸ್‌ಆರ್‌ಟಿಸಿಗೆ 9 ರಾಷ್ಟ್ರೀಯ ಪ್ರಶಸ್ತಿ!