Sunday, 22nd December 2024

Assault Case: ಕುಲುವನಹಳ್ಳಿ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ

assault case

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru rural crime news) ನೆಲಮಂಗಲ ತಾಲ್ಲೂಕು ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಆಗಿರುವ ಮೋಹನ್ ಕುಮಾರ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಲಾಗಿದೆ. ವೈಯಕ್ತಿಕ ದ್ವೇಷದಿಂದ ಈ ಹಲ್ಲೆ ನಡೆಸಲಾಗಿದೆ.

ಇದೇ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆ ಅಮಾನತ್ತಾಗಿದ್ದ ಸಿಬ್ಬಂದಿ ಮತ್ತು ಆಕೆಯ ಕುಟುಂಬಸ್ಥರು ಪಂಚಾಯತ್ ಕಚೇರಿಗೆ ನುಗ್ಗಿ ಪಿಡಿಓ ಮೇಲೆ ಹಲ್ಲೆ ಮಾಡಿದ್ದಾರೆ. ಕುಲುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸಿ ಕರ್ತವ್ಯ ಲೋಪದ ಹಿನ್ನೆಲೆ ಅಮಾನತ್ತಾಗಿದ್ದ ಸಿಬ್ಬಂದಿ ಮಹಾಲಕ್ಷ್ಮಿ ಮತ್ತು ಆಕೆಯ ಕುಟುಂಬಸ್ಥರಾದ ಯುವರಾಜ್, ತಿಮ್ಮಯ್ಯ, ಮಹಿಮಕ್ಕ ಎಂಬವರು ಪಿಡಿಓ ಮೋಹನ್ ಕುಮಾರ್ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಗಲಾಟೆ ಬಿಡಿಸಲು ಹೋದ ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ.

ಮಾರಕ ಹಲ್ಲೆಯ ದೃಶ್ಯ ಕಚೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ 6 ತಿಂಗಳ ಹಿಂದೆ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿ ಅವರನ್ನು ಕುಲುವನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದಮ್ಮ ಅಮಾನತು ಮಾಡಿ ಆದೇಶ ನೀಡಿದ್ದರು. ಇದರಿಂದ ಜಿದ್ದಿಗೆ ಬಿದ್ದಿದ್ದ ಮಹಾಲಕ್ಷ್ಮಿ ಕುಟುಂಬಸ್ಥರು, ಉದ್ದೇಶಪೂರ್ವಕವಾಗಿ ಯಾವುದೋ ಮನವಿ ನೀಡುವ ನೆಪದಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಏಕಾಏಕಿ ಪಿಡಿಓ ಮೋಹನ್ ಕುಮಾರ್ ಮೇಲೆ ದಾಳಿ ನಡೆಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ಮೋಹನ್ ಕುಮಾರ್ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case: ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂದು ಕರ್ತವ್ಯ ನಿರತ BMTC ಚಾಲಕನ ಮೇಲೆ ಹಲ್ಲೆ; 3 ತಿಂಗಳಲ್ಲಿ 9ನೇ ಪ್ರಕರಣ