Thursday, 26th December 2024

Atal Bihari Vajpayee 100th Birth Anniversary: ಬೂತ್ ಮಟ್ಟದ ಕಾರ್ಯಕರ್ತ ಪ್ರಧಾನಿಯಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ; ಬಿ.ವೈ. ವಿಜಯೇಂದ್ರ

Atal Bihari Vajpayee 100th birth anniversary

ಬೆಂಗಳೂರು: ಬಿಜೆಪಿ (BJP) ಕರ್ನಾಟಕದಲ್ಲಿ ಸುಭದ್ರವಾಗಿ ಬೆಳೆದು ನಿಲ್ಲಲು ಯಡಿಯೂರಪ್ಪ, ಅನಂತಕುಮಾರ್ ಆದಿಯಾಗಿ ಹಿರಿಯರ ತಪಸ್ಸೇ ಅದಕ್ಕೆ ಕಾರಣ. ತನು, ಮನ, ಧನ ಅರ್ಪಿಸಿದ ಲಕ್ಷಾಂತರ ಕಾರ್ಯಕರ್ತರ ಅವಿರತ ಶ್ರಮ ಅದರ ಹಿಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು. ಮಾಜಿ ಪ್ರಧಾನಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ (Atal Bihari Vajpayee 100th Birth Anniversary) ಸ್ಮರಣಾರ್ಥ ಹಾಗೂ ಸುಶಾಸನ ದಿನದ ನಿಮಿತ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರದರ್ಶಿನಿ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ಕಟ್ಟಡ ನಮಗೆ ಕಾಣುತ್ತಿದೆ. ಪಕ್ಷ ಬೆಳೆದು ನಿಂತಿರುವುದು ಗೋಚರಿಸುತ್ತಿದೆ. ಆದರೆ, ಅದರ ಅಡಿಪಾಯ ನಮ್ಮ ಕಣ್ಣಿಗೆ ಕಾಣಲಸಾಧ್ಯ ಎಂದರು.

ಅಟಲ್‍ಜೀ, ಅಡ್ವಾಣಿಜೀ, ಮೋದಿಜೀ, ಅಮಿತ್ ಶಾ ಜೀ, ನಡ್ಡಾಜೀ ಅವರನ್ನು ನಾವು ನೆನಪಿಸಿಕೊಳ್ಳಬೇಕು. ಬೂತ್ ಮಟ್ಟದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ಪ್ರಧಾನಿಯಾಗುವ ಹಂತಕ್ಕೆ ಬೆಳೆದು ನಿಲ್ಲುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | WhatsApp Features: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಜ.3ರವರೆಗೆ ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ ಫ್ರೀ… ಫ್ರೀ…

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ದೇಶಾದ್ಯಂತ ಮತ್ತು ರಾಜ್ಯದ ಎಲ್ಲ ಬೂತ್‍ಗಳಲ್ಲೂ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವಾಜಪೇಯಿ ಎಂದರೆ ಒಂದು ರೀತಿ ರೋಮಾಂಚನ

ಹಿಂದೆ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ವಿಪಕ್ಷ ನಾಯಕರಾಗಿದ್ದರು. ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರ ಅಧಿಕೃತ ನಿವಾಸಕ್ಕೆ ಹಲವಾರು ಬಾರಿ ವಾಜಪೇಯಿ ಅವರು ಬಂದಿದ್ದರು ಎಂದು ಅವರು ನೆನಪಿಸಿಕೊಂಡರು.

ಅಟಲ್‍ಜೀ ಅವರು ಶಾಸಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶಿಕಾರಿಪುರಕ್ಕೆ ಭೇಟಿ ಕೊಟ್ಟಿದ್ದರು. 1999 ರಲ್ಲಿ ಜೆ.ಎಚ್. ಪಟೇಲರ ಸರ್ಕಾರದ ವಿರುದ್ಧ ಜನಾಂದೋಲನ ನಡೆದಿತ್ತು. ಯಡಿಯೂರಪ್ಪ, ಅನಂತಕುಮಾರ್, ರಾಮಚಂದ್ರ ಗೌಡ, ಶಂಕರಮೂರ್ತಿ ಮೊದಲಾದವರ ನೇತೃತ್ವದಲ್ಲಿ ಜನಾಂದೋಲನ ನಡೆದಿತ್ತು. ಹುಬ್ಬಳ್ಳಿ ಸಮಾವೇಶದಲ್ಲಿ 1.5 ಲಕ್ಷದಿಂದ 2 ಲಕ್ಷದಷ್ಟು ಜನಸ್ತೋಮ ಸೇರಿತ್ತು. ವಾಜಪೇಯಿ ಅವರಿಗೆ ಇಷ್ಟು ದೊಡ್ಡ ಸಮಾವೇಶ ಎಂಬುದು ನಂಬಲಾಗದ ಮಾತಾಗಿತ್ತು. ಭಾಷಣ ಮುಗಿಸಿ ಹೆಲಿಕಾಪ್ಟರ್ ಏರುವ ಮೊದಲು ಯಡಿಯೂರಪ್ಪ ಅವರನ್ನು ಬಾಚಿ ಅಪ್ಪಿಕೊಂಡಿದ್ದರು. ವಾಜಪೇಯಿ ಎಂದರೆ ಒಂದು ರೀತಿ ರೋಮಾಂಚನ ಆಗುತ್ತದೆ ಎಂದು ವಿಶ್ಲೇಷಿಸಿದರು.

ವಾಜಪೇಯಿ ಅವರ ಜತೆಗಿದ್ದು ಪಕ್ಷದ ಸಂಘಟನೆ ಮಾಡಿದ ಅನೇಕ ಹಿರಿಯರು ಇವತ್ತು ವೇದಿಕೆ ಮೇಲಿದ್ದಾರೆ ಎಂದು ತಿಳಿಸಿದ ಅವರು, ವಾಜಪೇಯಿಯವರು ಒಬ್ಬ ಶ್ರೇಷ್ಠ ನಾಯಕ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ

ರಾಜ್ಯದ ಬೆಳಗಾವಿಯ ಘಟನೆ ನೋಡಿದ್ದೀರಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ. ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ಬೆಳೆ ಹಾನಿ ಪರಿಶೀಲಿಸಲು ತಯಾರಿಲ್ಲ. ಪರಿಹಾರ ಕೊಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಟೀಕಿಸಿದ ಅವರು, ಇಲ್ಲಿನ ಹಣಕಾಸಿನ ದುಸ್ಥಿತಿ ಒಂದೆಡೆ ಇದ್ದರೆ ತೆಲಂಗಾಣದಲ್ಲೂ ಕಾಂಗ್ರೆಸ್ ಮುಖ್ಯಮಂತ್ರಿ ನನ್ನ ಕೈಯಲ್ಲಿ ಗ್ಯಾರಂಟಿ ಈಡೇರಿಸಲು ಅಸಾಧ್ಯ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ದೂರಿದರು.

ರಾಜ್ಯದ ಪರಿಸ್ಥಿತಿ ಬಗ್ಗೆ ‘ಆಲ್ ಈಸ್ ವೆಲ್ʼ ಎಂದು ಮುಖ್ಯಮಂತ್ರಿಗಳು ಭಾಷಣ ಬಿಗಿಯಬಹುದು. ಆದರೆ, ಸತ್ಯ ಏನೆಂದರೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಹಣಕಾಸಿನ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ನಿನ್ನೆ ಕೂಡ ಆಡಳಿತ ಪಕ್ಷದ ಶಾಸಕ ರಾಜು ಕಾಗೆಯವರು ಈ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ ಎಂದು ತಿಳಿಸಿದರು.

ನಮ್ಮ ಸಮಸ್ಯೆಗಳು, ವ್ಯತ್ಯಾಸಗಳನ್ನು ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ, ಕಾರ್ಯಕರ್ತರ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗಬೇಕು. ವಾಜಪೇಯಿಯವರ ಪಕ್ಷ ಸಂಘಟನೆ, ಉತ್ತಮ ಆಡಳಿತದ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ರಾಮಚಂದ್ರ ಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಮತ್ತು ಶಾಸಕ ಎನ್. ಮುನಿರತ್ನ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳಾ, ಸುಶಾಸನ ದಿನದ ರಾಜ್ಯ ಸಹ-ಸಂಚಾಲಕ ಜಗದೀಶ್ ಹಿರೇಮನಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | AUS vs IND: ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?

ವಾಜಪೇಯಿಯವರು ಈ ದೇಶದ ಪ್ರಧಾನಿ ಆಗುತ್ತಾರೆಂದು ಜವಾಹರಲಾಲ್ ನೆಹರೂ ಅವರು ಹೇಳಿದ್ದರು. ಭೌತಿಕವಾಗಿ ಅಟಲ್‍ಜೀ ಈ ದೇಶದಲ್ಲಿ ನಮ್ಮ ಜತೆ ಇಲ್ಲದಿದ್ದರೂ ಅವರು ಈ ದೇಶದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ.

-ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ.

ವಾಜಪೇಯಿ ಅವರು ಒಬ್ಬ ಕವಿ, ಸಹೃದಯಿ, ಒಬ್ಬ ರಾಜಕಾರಣಿ, ಒಬ್ಬ ಕಾರ್ಯಕರ್ತನಾಗಿ, ಒಬ್ಬ ನಾಯಕನಾಗಿ ಸದಾ ಕಾಲಕ್ಕೂ ಅವರ ನೆನಪುಗಳು ನಮ್ಮ ಜತೆ ಇರುವಂತೆ ಜೀವನ ನಡೆಸಿದ್ದಾರೆ. ಪಾಂಚಜನ್ಯದ ಉಪ ಸಂಪಾದಕರಾಗಿದ್ದ ವಾಜಪೇಯಿಯವರು ರಾಜಕೀಯಕ್ಕೆ ಬಂದದ್ದೇ ಆಕಸ್ಮಿಕ.

ನಿಷೇಧಿತ ಔಷಧಿ ಕೊಟ್ಟು ಬಾಣಂತಿಯರನ್ನು ಕೊಲ್ಲುವುದು ಸುಶಾಸನ ಅಲ್ಲ. ಒಂದು ರೂಪಾಯಿ ದೆಹಲಿಯಿಂದ ಹಾಕಿದರೆ 15 ಪೈಸೆ ಹಳ್ಳಿಗೆ ತಲುಪುವುದು ಸುಶಾಸನ ಅಲ್ಲ. ಟೆಕ್ನಾಲಜಿ ಹಿಂದೆಯೂ ಇತ್ತು. ಅದರ ಬಳಕೆಯನ್ನು ಆರಂಭಿಸಿದ್ದು ವಾಜಪೇಯಿಯವರು. ಮುಂದುವರೆಸಿದ್ದು ನರೇಂದ್ರ ಮೋದಿಯವರು.

-ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ.

ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ಮೌನವಾಗಿಯೇ ಮಾಡುವುದನ್ನು ಸುಶಾಸನ ದಿನ ಎಂದು ಕರೆಯುತ್ತೇವೆ. ಆರ್ಭಟ ಮಾಡದೇ ಜನರ ಕಣ್ಣೀರನ್ನು ಒರೆಸಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಕರ್ನಾಟಕದಲ್ಲಿ ಸುಶಾಸನ ಇಲ್ಲ. ಅದು ದುಶ್ಶಾಸನ ಆಗಿದೆ. ಇದು ನಮಗೆ ಬೇಕೇ? ಅಮಿತ್ ಶಾ ಅವರು ಅಂಬೇಡ್ಕರರಿಗೆ ನಿರಂತರ ಅವಮಾನ ಮಾಡಿದ ಕಾಂಗ್ರೆಸ್‍ನ ಮುಖವಾಡ ಕಳಚಿದ್ದಾರೆ.

-ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ.

ಸಂವಿಧಾನ ಹಿಡಿದುಕೊಂಡು ಓಡಾಡುವ ಅಂಬೇಡ್ಕರರ ಕುರಿತು ಘೋಷಣೆ ಕೂಗುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಸಂವಿಧಾನದ ಒಳಗಡೆ, ಆಶಯ ಏನಿದೆ ಎಂದು ಅವರು ನೋಡಿಲ್ಲ. ಜನಪ್ರತಿನಿಧಿಗಳು ಇಂದು ತಮ್ಮ ನಡವಳಿಕೆ ಮತ್ತು ಪ್ರಮಾಣವಚನಕ್ಕೆ ಸಂಬಂಧ ಇದೆಯೇ ಎಂದು ಆತ್ಮಾವಲೋಕನ ಮಾಡಬೇಕಿದೆ.

-ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ.

ಈ ಸುದ್ದಿಯನ್ನೂ ಓದಿ | KL Rahul: ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೆ.ಎಲ್‌ ರಾಹುಲ್‌