Thursday, 19th December 2024

Techie Atul Subhash: ಟೆಕ್ಕಿ ಅತುಲ್‌ ಸಾವಿನ ಪ್ರಕರಣ; ನ್ಯಾಯ ಕೋರಿ ರಾಹುಲ್‌ ಗಾಂಧಿ ಕಾರನ್ನು ಬೆನ್ನಟ್ಟಿದ ಹೋರಾಟಗಾರರು

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್‌ (Techie Atul Subhash) ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರರ ಗುಂಪೊಂದು ದೆಹಲಿಯ ಬೀದಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಅಶ್ವದಳವನ್ನು ಬೆನ್ನಟ್ಟಿದೆ. ವಿರೋಧ ಪಕ್ಷದ ನಾಯಕ ಅವರ ಮಾತುಗಳನ್ನು ಕೇಳಿಸಿಕೊಂಡು ಚಾಕೊಲೇಟ್ ಎಸೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಅವರ ಪ್ರಕರಣ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 34 ವರ್ಷದ ಅತುಲ್ ಡಿಸೆಂಬರ್ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ನಿಖಿತಾ ಸಿಂಘಾನಿಯಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು. 80 ನಿಮಿಷಗಳ ವಿಡಿಯೊ ಚಿತ್ರಿಸಿ 24 ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದರು (Tragic Suicide).

ಕಾರ್ ಚೇಸ್‌ನ ವಿಡಿಯೊವನ್ನು ಹಂಚಿಕೊಂಡ ವಕೀಲರಾದ ದೀಪಿಕಾ ನಾರಾಯಣ್ ಭಾರದ್ವಾಜ್ (Deepika Narayan Bharadwaj), ತಾನು ಮತ್ತು ಇತರರು ಅತುಲ್ ಸುಭಾಷ್ ಅವರ ನೆನಪಿನ ಸಂತಾಪ ಸೂಚಿಸುವ ಸಭೆಗೆ ಹೋಗುತ್ತಿದ್ದಾಗ ರಾಹುಲ್‌ ಗಾಂಧಿ ಅವರ ಅಶ್ವದಳವನ್ನು ನೋಡಿದೆವು. ಜೋರಾಗಿ ಕೂಗಿದೆವು ಎಂದಿರುವ ದೀಪಿಕಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ. “ಸಮಾಜದಲ್ಲಿನ ಸಮಸ್ಯೆಗಳಿಗೆ ಸರ್ಕಾರವನ್ನು ಜವಾಬ್ದಾರರನ್ನಾಗಿ ಮಾಡುವುದು ಪ್ರತಿಪಕ್ಷಗಳಿಗೆ ಮುಖ್ಯವಾಗಿದೆ. ಇದು ಒಂದು ಗಂಭೀರ ಸಮಸ್ಯೆ. ರಾಹುಲ್‌ ಗಾಂಧಿ ಅವರು ಇದನ್ನು ಗಮನಿಸುತ್ತಾರೆ ಮತ್ತು ಅದರ ಬಗ್ಗೆ ಏನಾದರೂ ಮಾತನಾಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

“ಅತುಲ್ ಸುಭಾಷ್ ಅವರ ಆತ್ಮಹತ್ಯೆ ಮತ್ತು ದೇಶದಲ್ಲಿನ ಹಲವು ಪುರುಷರ ಆತ್ಮಹತ್ಯೆಯ ಹಿಂದಿನ ಕಾರಣಗಳ ಬಗ್ಗೆ ಯಾವುದೇ ಸಂಸದರು ಮಾತನಾಡಲಿಲ್ಲ. ನಾವು ದೆಹಲಿಯಲ್ಲಿ ಸಂತಾಪ ಸೂಚಕ ಸಭೆಗೆ ಹೋಗುತ್ತಿದ್ದಾಗ, ರಾಹುಲ್ ಗಾಂಧಿ ಅವರನ್ನು ಹೆದ್ದಾರಿಯಲ್ಲಿ ಹೋರಾಟಗಾರರ ಕೂಗಿನ ಮಧ್ಯೆಯೂ ಗುರುತಿಸಿದೆವು. ಅವರ ಸಹಾಯಕರಿಗೆ ಸಂದೇಶವೊಂದನ್ನು ರವಾನಿಸಿದೆವು. ಈ ಕುರಿತು ರಾಹುಲ್‌ ಗಾಂಧಿ ಧ್ವನಿ ಎತ್ತಿದರೆ ಸಾವಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ” ಎಂದು ಎಕ್ಸ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.‌ “ಅವರು ಪ್ರಕರಣದ ಕುರಿತು ತಲೆಕೆಡಿಸಿಕೊಳ್ಳುತ್ತಾರೆಯೇ ಎಂದು ನಮಗೆ ತಿಳಿದಿಲ್ಲ. ಆದರೆ ಈ ಸಮಯದಲ್ಲಿ ಯಾರಾದರೂ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Rahul Gandhi: ಸಂಸದೆ ಜೊತೆಗೆ ರಾಹುಲ್‌ ಗಾಂಧಿ ಅನುಚಿತ ವರ್ತನೆ? ರಾಜ್ಯಸಭಾ ಸ್ಪೀಕರ್‌ಗೆ ದೂರು