Thursday, 28th November 2024

B.S.Yediyurappa: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಶಿಫಾರಸ್ಸು; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

B.S.Yediyurappa

ಬೆಂಗಳೂರು: ಟಿ.ಜೆ.ಅಬ್ರಹಾಂ ಅವರು 2020ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹಾಗೂ ಅವರ ಕುಟುಂಬದ ವಿರುದ್ಧ ನೀಡಲಾದ ಭ್ರಷ್ಟಾಚಾರದ ದೂರಿನಲ್ಲಿ ಗಂಭೀರವಾದ 16 ಆರೋಪಗಳನ್ನು ಮಾಡಿದ್ದಾರೆ. ಅವರು ಈ ಆರೋಪಗಳನ್ನು ತನಿಖೆ ಮಾಡಿಸುವಂತೆ ರಾಜ್ಯಪಾಲರಿಗೆ ದೂರನ್ನೂ ನೀಡಿದ್ದಾರೆ. ಆದರೆ ರಾಜ್ಯಪಾಲರು ತನಿಖೆ ಮಾಡಲು ಅನುಮತಿ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ (ನ. 28) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಈ ಬಗ್ಗೆ ಚರ್ಚೆ ನಡೆಸಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಿದೆ.

ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಸಚಿವ ಸಂಪುಟವು ದಿ. 23-24/6/2021ರ ನಿರ್ಣಯವನ್ನು ಹಿಂಪಡೆದು ಪುನರ್ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಣಯಿಸಿದೆ.

ಇತರ ಪ್ರಮುಖ ತೀರ್ಮಾನಗಳು

ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ: ರಾಯಚೂರು ಜಿಲ್ಲೆಯ ಯರಮರಸ್ ಗ್ರಾಮದಲ್ಲಿನ 14 ಗುಂಟೆ ಗೋಮಾಳ ಜಮೀನನ್ನು ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಇವರಿಗೆ ಮಂಜೂರು ಮಾಡಲಾಗಿದೆ.

ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್: ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲ ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್ ಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಮೊದಲ ಹಂತದಲ್ಲಿ ರಾಜ್ಯದ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಳು ಗುರುತಿಸಿದ 15 ಸ್ಥಳಗಳಲ್ಲಿ 11.01 ಕೋಟಿ ರೂ.ಗಳಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

ಸೇತುವೆ ನಿರ್ಮಾಣ: ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವನ್ನು 25 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತನೆ: Asian Development Bankನ 2,500 ಕೋಟಿ ರೂ.ಗಳ ಬಾಹ್ಯ ನಿಧಿ ಸಹಯೋಗದೊಂದಿಗೆ 2025ರ ಜುಲೈಯಿಂದ 2029ರವರೆಗೆ ಜೂನ್‌ವರೆಗೆ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿ ಖರೀದಿ: 4,300 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ (ರೈಲ್ವೆ ಮಂತ್ರಾಲಯ) ಅನುದಾನದಿಂದ (Equity ಮಾದರಿ 50:50 ಅನುಪಾತದಲ್ಲಿ) ಖರೀದಿಸಲು ಅನುಮೋದನೆ ನೀಡಲಾಗಿದೆ.

ಕೇಂದ್ರ ಪ್ರವಾಸೋದ್ಯಮದ ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಮೈಸೂರಿನಲ್ಲಿ Ecological Experience Zone ನ್ನು 18.47 ಕೋಟಿ ಮೊತ್ತದಲ್ಲಿ ಹಾಗೂ ಹಂಪಿಯಲ್ಲಿ Travellers Nook ನ್ನು 25.63 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಟೆಂಡರ್ ಕರೆಯಲು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ , ನಿರ್ವಹಣೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಟೆಂಡರ್ ಮೂಲಕ ಹೋಟೆಲ್ ಆಪರೇಟರ್‌ಗಳನ್ನು ಆಯ್ಕೆ ಮಾಡಲು ಅನುಮೋದನೆ ನೀಡಲಾಗಿದೆ. ಪಂಚತಾರಾ ಹೋಟೆಲ್‌ಗಳ ಸಮರ್ಪಕ ನಿರ್ವಹಣೆಯ ಸಲುವಾಗಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡದ ಪುನರ್ ನಿರ್ಮಾಣ, ನವೀಕರಣ, ನಿವರ್ಹಣೆಗಾಗಿ ಖಾಸಗಿಯವರಿಂದ ಟೆಂಡರ್ ಕರೆಯಲಾಗುವುದು. ಖಾಸಗಿ ನಿರ್ವಹಣೆಯ ಮೂಲಕ ಉತ್ತಮ ಲಾಭ ಹಾಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: ಬಿಜೆಪಿ- ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ