ಬೆಂಗಳೂರು: ಲಯವಾದ್ಯಗಳ ಪರಿಣಿತ, ದಕ್ಷಿಣ ಭಾರತದ ರಿದಂ ಕಿಂಗ್ (Rhythm King) ಎಂದೇ ಕರೆಯಲ್ಪಡುತ್ತಿದ್ದ, ಜೀ ಕನ್ನಡ ವಾಹಿನಿಯ ಪ್ರಸಿದ್ಧ ಸರಿಗಮಪ (Saregamapa Reality Show) ಸಂಗೀತ ರಿಯಾಲಿಟಿ ಶೋನ ಜ್ಯೂರಿಯಾಗಿದ್ದ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ. ಆತ್ಮೀಯರು ಅವರನ್ನು ʼಬಾಲಿʼ (Baali Death) ಎಂದು ಕರೆಯುತ್ತಿದ್ದರು.
ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು. ತಬಲಾ, ಮೃದಂಗ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹಲವಾರು ಲಯವಾದ್ಯಗಳನ್ನು ನುಡಿಸುವಲ್ಲಿ ಅವರು ಪರಿಣಿತರಾಗಿದ್ದರು. ಕನ್ನಡ ಚಿತ್ರರಂಗದ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕ ಮತ್ತು ನಿರ್ದೇಶಕ ಎಂಬ ಹೆಗ್ಗಳಿಕೆ ಗಳಿಸಿದ್ದರು.
1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿ ಬಾಲಿ ಅವರ ತಂದೆ ಎಂ.ವಿ. ಸುಂದರೇಶನ್ ಮತ್ತು ತಾಯಿ ಸಾವಿತ್ರಿ. ಸಂಗೀತದ ವಾತಾವರಣದಲ್ಲಿ ಬೆಳೆದು, ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ನಂತರ ಸ್ವಯಂ ಪರಿಶ್ರಮದಿಂದಲೇ ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿ ಪಡೆದರು.
ಸುಗಮ ಸಂಗೀತದಲ್ಲೂ ಇವರು ಪರಿಣಿತರಾಗಿದ್ದರು. ಹೆಸರಾಂತ ಸುಗಮ ಸಂಗೀತ ಗಾಯಕರುಗಳಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಶ್ಯಾಮಲಾ ಭಾವೆ, ಸಿ ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಮುಂತಾದವರ ಕಾರ್ಯಕ್ರಮಗಳಲ್ಲಿ ಬಾಲಿ ಸಾಥ್ ನೀಡಿದ್ದಾರೆ. ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದ್ದಾರೆ.
ಚಲನಚಿತ್ರ, ನೃತ್ಯ, ನಾಟಕ, ಕಿರುತೆರೆ, ಧ್ವನಿಮುದ್ರಣ ಕಾರ್ಯಗಳಲ್ಲಿ ಖ್ಯಾತ ಸಂಗೀತಗಾರರಾದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಮುಂತಾದವರ ಸಂಗೀತ ಸಂಯೋಜನೆಗಳಿಗೆ ಬಾಲಿ ಲಯ ಸಂಯೋಜನೆ ಮಾಡಿದ್ದಾರೆ. ಬಾಲಿ ಅವರು ಕನ್ನಡದ ಮೊಟ್ಟಮೊದಲ ಭಾವಗೀತೆ ಧ್ವನಿಸುರುಳಿ ʼನಿತ್ಯೋತ್ಸವʼದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯ ನೆರವು ನೀಡಿದರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.