ಬೆಂಗಳೂರು: ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಹಾಗೂ ʼಆ ದಿನಗಳುʼ ಖ್ಯಾತಿಯ ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಚಿತ್ರ ʼಬಲರಾಮನ ದಿನಗಳುʼ (Balaramana Dinagalu Movie). ಇದು ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ಕೂಡ.
ಬಹು ನಿರೀಕ್ಷಿತ ʼಬಲರಾಮನ ದಿನಗಳುʼ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ʼರಾಜಕುಮಾರʼ, ʼಜೇಮ್ಸ್ʼ, ʼಆರೆಂಜ್ʼ, ʼಕರಟಕ ದಮನಕʼ ದಂತಹ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರಿಯಾ ಆನಂದ್ ಜನಪ್ರಿಯರಾಗಿದ್ದಾರೆ. ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಪ್ರಿಯಾ ಆನಂದ್ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ.
ʼಬಲರಾಮನ ದಿನಗಳುʼ 1980 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಇತ್ತೀಚೆಗಷ್ಟೇ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ʼಅಟ್ಟಕತ್ತಿʼ, ʼಕಾಲʼ, ʼಕಬಾಲಿʼ, ʼಭೈರವʼ, ʼದಸರಾʼ, ʼಕಲ್ಕಿʼ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಭಾರತದ ಖ್ಯಾತ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ಸಂಯೋಜಿಸುತ್ತಿರುವ 51ನೇ ಚಿತ್ರ ಹಾಗೂ ಕನ್ನಡದ ಮೊದಲ ಚಿತ್ರ.
ಈ ಸುದ್ದಿಯನ್ನೂ ಓದಿ | Prize Money: ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಹೀಗೆ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ ಹಾಗೂ ಆರಂಭದಿಂದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ʼಬಲರಾಮನ ದಿನಗಳುʼ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಶ್ರೇಯಸ್ ತಿಳಿಸಿದ್ದಾರೆ.