Friday, 10th January 2025

Bangla Terrorist: ಬಾಂಗ್ಲಾದೇಶಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ!

ಬೆಂಗಳೂರು:ದೇಶಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಾಂಗ್ಲಾದೇಶ ಪ್ರಜೆಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಜಮಾತ್ ಉಲ್(Jamaat-ul) ಉಗ್ರ ಸಂಘಟನೆಯ ಕೃತ್ಯಗಳಿಗೆ ಭಾರತದಲ್ಲಿ ಉತ್ತೇಜನ ನೀಡಿದ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆ ಜಾಹಿದುಲ್ ಇಸ್ಲಾಂ(Jahidul Islam) ಅಲಿಯಾಸ್ ಕೌಸರ್ ಎಂಬಾತನಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು (Special court of the National Investigation Agency) ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ತಿಳಿದು ಬಂದಿದೆ. ಡಕಾಯಿತಿ, ಪಿತೂರಿ, ಭಯೋತ್ಪಾದನೆಗೆ ನಿಧಿ ಸಂಗ್ರಹ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಹಿದುಲ್‌ಗೆ 57,000 ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ(Bangla Terrorist).

ಬುರ್ದ್ವಾನ್ ಸ್ಫೋಟ(Burdwan Blast) ಪ್ರಕರಣದ ತನಿಖೆಯ ಸಮಯದಲ್ಲಿ ಏಜೆನ್ಸಿಯ ಕೋಲ್ಕತ್ತಾ ಶಾಖೆಯ ಕಚೇರಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ 2019 ರ ಜೂನ್​ನಲ್ಲಿ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಎನ್‌ಐಎ ಕೂಡ ಪ್ರಕರಣ ದಾಖಲಿಸಿಕೊಂಡಿತ್ತು.

ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಬಾಂಗ್ಲಾ ಉಗ್ರ

ಎನ್‌ಐಎ ತನಿಖೆಯಲ್ಲಿ ದೊರೆತ ಮಾಹಿತಿಯ ಪ್ರಕಾರ, 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರ ವಶದಲ್ಲಿದ್ದ ಜಾಹಿದುಲ್, 2014ರಲ್ಲಿ ಜೆಎಂಬಿ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ 2014 ರ ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ತಿಳಿದು ಬಂದಿತ್ತು. ಬುರ್ದ್ವಾನ್ ಸ್ಫೋಟದ ನಂತರ, ಜಾಹಿದುಲ್ ಮತ್ತು ಸಹಚರರು ಬೆಂಗಳೂರಿಗೆ ಪರಾರಿಯಾಗಿದ್ದರು. ಬೆಂಗಳೂರಿನಲ್ಲಿದ್ದುಕೊಂಡೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮುಸ್ಲಿಂ ಯುವಕರಿಗೆ ಭಾರತ-ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಕುಮ್ಮಕ್ಕು ನೀಡಿದ್ದರು ಎಂಬ ಮಾಹಿತಿಯಿದೆ.

ಇನ್ನು 2018 ರ ಜನವರಿಯಲ್ಲಿ ಬೋಧಗಯಾದಲ್ಲಿ ಸಂಭವಿಸಿದ ಸ್ಫೋಟದಲ್ಲಿಯೂ ಜಾಹಿದುಲ್ ಮತ್ತು ಸಹಚರರ ಕೈವಾಡ ಇತ್ತು ಎನ್ನಲಾಗಿದೆ. ಜಾಹಿದುಲ್ ಮತ್ತು ಆತನ ಸಹಚರರು ಜೆಎಂಬಿಯ(Jama’atul Mujahideen Bangladesh) ಚಟುವಟಿಕೆಗಳನ್ನು ಮುನ್ನಡೆಸಲು ದರೋಡೆ ಮೂಲಕ ಹಣವನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ತನಿಖೆಯ ಮೂಲಕ ತಿಳಿದು ಬಂದಿದೆ . 2018 ರಲ್ಲಿ, ಅವರು ಬೆಂಗಳೂರಿನಲ್ಲಿ ನಾಲ್ಕು ಡಕಾಯಿತಿ ಕೃತ್ಯದಲ್ಲಿ ತೊಡಗಿದ್ದರು. ಲೂಟಿ ಮಾಡಿದ ಹಣವನ್ನು ಮದ್ದುಗುಂಡುಗಳನ್ನು ಸಂಗ್ರಹಿಸಲು, ಅಡಗುತಾಣಗಳ ವ್ಯವಸ್ಥೆ ಮಾಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳ ತರಬೇತಿ ನೀಡಲು ಬಳಸಿದ್ದರು ಎಂದು ಎನ್​ಐಎ ತಿಳಿಸಿತ್ತು.

ಈ ಸುದ್ದಿಯನ್ನೂ ಓದಿ:Canadian Plane Fire: ದ.ಕೊರಿಯಾ ಬೆನ್ನಲ್ಲೇ ಕೆನಡಾದಲ್ಲೂ ಭಾರೀ ವಿಮಾನ ದುರಂತ-ಲ್ಯಾಂಡಿಂಗ್‌ ವೇಳೆ ಬೆಂಕಿ!