ಬೆಳಗಾವಿ: ಬಾಣಂತಿಯರ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಆರೋಗ್ಯ ಇಲಾಖೆಯ ಬಗ್ಗೆ ಸುಳ್ಳುಗಳನ್ನು ಸದನದಲ್ಲಿ ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ವಿಧಾನ ಸಭೆ ಕಲಾಪದಲ್ಲಿ (Belagavi Winter Sessoin 2024) ಬಾಣಂತಿಯರ ಸಾವುಗಳ ಕುರಿತು ನೈಜ ವಿಚಾರಗಳನ್ನ ಸದನದ ಮುಂದಿಟ್ಟ ಸಚಿವರು, ಇಲಾಖೆಯ ಕಾರ್ಯಪ್ರಗತಿ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಬಾಣಂತಿಯರ ಸಾವಿನ ಪ್ರಕರಣ ವಿಚಾರದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲು ಸಿಎಂ ಜತೆ ಮಾತನಾಡುವುದಾಗಿ ಸದನಕ್ಕೆ ಸ್ಪಷ್ಟಪಡಿಸಿದ ದಿನೇಶ್ ಗುಂಡೂರಾವ್ ಅವರು, ಈ ವಿಚಾರದಲ್ಲಿ ನಾವು ಯಾವುದನ್ನು ಮುಚ್ಚಿಡುವ ಉದ್ದೇಶ ಹೊಂದಿಲ್ಲ. ಅಲ್ಲದೇ ಆರೋಗ್ಯ ಇಲಾಖೆಯ ಬಗ್ಗೆ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಅವರು ಸದನದಲ್ಲಿ ಹೇಳಿದ ಹೇಳಿಕೆಗಳು ಹಸಿ ಸುಳ್ಳು ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | DK Shivakumar: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ; ಡಿ.ಕೆ. ಶಿವಕುಮಾರ್ ಟೀಕೆ
108 ಅಂಬ್ಯುಲೆನ್ಸ್ಗಳಲ್ಲಿ ಜಿ.ಪಿ.ಎಸ್ ವ್ಯವಸ್ಥೆಯಿಲ್ಲ ಎಂಬ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ 108 ಅಂಬ್ಯುಲೆನ್ಸ್ಗಳಲ್ಲಿ ಜಿಪಿಎಸ್ ಇರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಅಂಬ್ಯುಲೆನ್ಸ್ಗಳಿಗೆ ಜಿ.ಪಿ.ಎಸ್ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಉತ್ತರಿಸಿದರು.
25-26 ಕ್ಕೆ ಬೇಕಾದ ಔಷಧಿಗಳಿಗೂ ಈಗಲೇ ಟೆಂಡರ್ ಪ್ರಕ್ರಿಯೆ ಪೂರ್ಣ
ಆಸ್ಪತ್ರೆಗಳಿಗೆ ಔಷಧಿಗಳ ಸರಬರಾಜು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಸದನದಲ್ಲಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿಂದಿನ ಸರ್ಕಾರದ ಅವಧಿಯಲ್ಲಿ ಔಷಧಿ ಸರಬರಾಜು ನಿಗಮದಿಂದ ಆಸ್ಪತ್ರೆಗಳಿಗೆ ಕೇವಲ ಶೇ.35 ರಷ್ಟು ಔಷಧಿಗಳು ಮಾತ್ರ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ KSMCL ನಿಂದ ಶೇ. 85 ರಷ್ಟು ಔಷಧಿಗಳನ್ನು ಆಸ್ಪತ್ರೆಗಳಿಗೆ ಪೂರೈಸಲಾಗಿದೆ.
ಔಷಧಿ ಸರಬರಾಜಿನಲ್ಲಿ ಸಾಕಷ್ಟು ಪ್ರಗತಿಯನ್ನು ನಾವು ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ 400 ಔಷಧಿಗಳ ಖರೀದಿಯನ್ನು ಮಾಡಲಾಗಿತ್ತು. ನಾನು ಸಚಿವನಾದ ಬಳಿಕ 718 ಔಷಧಿಗಳನ್ನು ಖರೀದಿಸಿ ಪೂರೈಸಲಾಗಿದೆ. ಮುಂದಿನ ವರ್ಷಕ್ಕೆ 1126 ಔಷಧಿಗಳನ್ನ ಖರೀದಿಸಲು ಪಟ್ಟಿ ಮಾಡಲಾಗಿದೆ. ಶೇ.10 ರಷ್ಟು ಮಾತ್ರ ಆಸ್ಪತ್ರೆಗಳು ARS ಫಂಡ್ನಲ್ಲಿ ಖರೀದಿಸುತ್ತಿವೆ. ಈ ಮೊದಲು ಔಷಧಿ ಖರೀದಿ ವಿಳಂಬವಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಎರಡು ವರ್ಷಕ್ಕೆ ಔಷಧಿಗಳ ಖರೀದಿ ಟೆಂಡರ್ ಪ್ರಕ್ರಿಯೆ ನಡೆಸಿದ್ದು, 25-26 ಕ್ಕೆ ಬೇಕಾದ ಔಷಧಿಗಳಿಗೂ ಈಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಬ್ರೇನ್ ಹೆಲ್ತ್ ಕ್ಲಿನಿಕ್ಗಳಲ್ಲಿ ನ್ಯುರೋಲಾಜಿಸ್ಟ್ ವೈದ್ಯರಿಲ್ಲ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಸದನದಲ್ಲಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬ್ರೇನ್ ಹೆಲ್ತ್ ಕ್ಲಿನಿಕ್ಗಳನ್ನ ನಮ್ಮ ಸರ್ಕಾರ ಬಂದ ಬಳಿಕ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ತೆರೆಯಲಾಗಿದೆ. ನಿಮ್ಹಾನ್ಸ್ ಸಹಯೋಗದೊಂದೊಗೆ ನಾವು ಆರಂಭಿಸಿದ ಬ್ರೇನ್ ಹೆಲ್ತ್ ಕ್ಲಿನಿಕ್ಗಳಿಗೆ ಸ್ವತಃ ಕೇಂದ್ರದ ನೀತಿ ಆಯೋಗ ಶ್ಲಾಘಿಸಿದ್ದು, ಕರ್ನಾಟಕದ ಈ ಮಾದರಿಯನ್ನ ದೇಶಾದ್ಯಂತ ಜಾರಿಗೆ ತರಬೇಕು ಎಂದಿದೆ. 8 ಜಿಲ್ಲೆಗಳಲ್ಲಿ ಪಾರ್ಟ್ ಟೈಮ್ ನ್ಯುರೋಲಾಜಿಸ್ಟ್ಗಳನ್ನ ನೇಮಕ ಮಾಡಲಾಗಿದ್ದು, 8 ಜಿಲ್ಲೆಗಳಲ್ಲಿ ಎಂಡಿ ಫಿಸೀಷಿಯನ್ ವೈದ್ಯರಿದ್ದಾರೆ. ಅಲ್ಲದೇ ಎಲ್ಲಡೆ ಫಿಜಿಯೋ ಥೆರಪಿಸ್ಟ್ಗಳು ಸೇವೆ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಯಾವ ಆಸ್ಪತ್ರೆಗಳಲ್ಲೂ ಸೇವಾ ಶುಲ್ಕ ಹೆಚ್ಚಿಸಿಲ್ಲ
ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಿಸಲಾಗಿದೆ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಸದನದಲ್ಲಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಿಸಿಲ್ಲ. ಕೆ.ಸಿ ಜನರಲ್ ಆಸ್ಪತ್ರೆ ಒಂದರಲ್ಲಿ ಮಾತ್ರ ಪ್ರಾಯೋಗಿಕವಾಗಿ ಸೇವಾ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಅದು ಬಿಟ್ಟರೆ ಆರೋಗ್ಯ ಇಲಾಖೆಯ ಯಾವ ಆಸ್ಪತ್ರೆಗಳಲ್ಲೂ ಸೇವಾ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಶ್ವತ್ಥ್ ನಾರಾಯಣ್ ಅವರು ಮಾಜಿ ಡಿಸಿಎಂ ಆಗಿದ್ದವರು. ಸತ್ಯಾಂಶಗಳನ್ನ ತಿಳಿದು ಮಾತನಾಡಬೇಕು. ಸದನದಲ್ಲಿ ಮನಬಂದಂತೆ ಸುಳ್ಳುಗಳನ್ನ ಹೇಳಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಆರೋಪಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲಾಖೆ ಇದ್ದ ಪರಿಸ್ಥಿತಿಗೆ ಹೊಲಿಸಿದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Reliance Jio: ಆ್ಯಂಡ್ರಾಯ್ಡ್ಗೂ ಬಂತು ಜಿಯೋಟ್ಯಾಗ್ ಗೋ ಟ್ರ್ಯಾಕರ್; ಏನಿದರ ವಿಶೇಷತೆ?
ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಠಿಣ ಕಾಯ್ದೆಗಳ ಅಗತ್ಯವಿದೆ
ಬಾಣಂತಿಯರ ಸಾವಿನ ವಿಚಾರದಲ್ಲಿ ನೋವಿದೆ. ಕಳೆಪೆ ಐವಿ ದ್ರಾವಣದಿಂದ ಆಗಿದ್ದರೂ, ಆರೋಗ್ಯ ಸಚಿವನಾಗಿ ನಾನು ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲ. ಫಾರ್ಮಾ ಕಂಪನಿಗಳ ಲಾಬಿ ಇಂದು ದೇಶಾದ್ಯಂತ ಇದೆ. ಅವರಿಗೆ ಕಡಿವಾಣ ಹಾಕಲು ನಮ್ಮ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಠಿಣ ಕಾಯ್ದೆಗಳ ಅಗತ್ಯವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಐವಿ ರಿಂಗರ್ ಲ್ಯಾಕ್ಟೇಟ್ ಅನ್ನ ಪೂರೈಸಿದ್ದ ಪಶ್ಚಿಮ ಬಂಗಾಳ ಕಂಪನಿಯನ್ನ ದೇಶದ ಯಾವ ರಾಜ್ಯದಲ್ಲೂ ಬ್ಲಾಕ್ ಲಿಸ್ಟ್ ಗೆ ಸೇರಿಸಿರಲಿಲ್ಲ. ನಾವೇ ಮೊದಲು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ವಿ. ಏಪ್ರಿಲ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಐವಿ ದ್ರಾವಣ ಬಳಕೆ ಮಾಡಿದಾಗ ರೋಗಿಗಳಿಗೆ ಚಳಿಯಾಗುತ್ತಿದೆ ಎಂಬ ವರದಿ ಇತ್ತು. ತಕ್ಷಣವೇ ಈ ಬಗ್ಗೆ ಟೆಸ್ಟಿಂಗ್ ನಡೆಸಿದಾಗ ರಾಜ್ಯದ ಡ್ರಗ್ ಕಂಟ್ರೋಲರ್ ಎರಡು ಬ್ಯಾಚ್ ಗಳ ಬಗ್ಗೆ NSQ ವರದಿ ನೀಡಿದರು. ಎರಡು ಬ್ಯಾಚ್ ಗಳು ಗುಣಮಟ್ಟ ಹೊಂದಿಲ್ಲ ಎಂದ ತಕ್ಷಣ ಕಂಪನಿ ಪೂರೈಸಿದ್ದ 192 ಬ್ಯಾಚ್ ಗಳನ್ನ ತಡೆಹಿಡಿದು, ಕಂಪನಿಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿತ್ತು. ಅಲ್ಲದೇ ಕಂಪನಿಯವರಿಗೆ ಒಂದು ರೂಪಾಯಿ ಕೂಡಾ ಹಣ ಪಾವತಿ ಮಾಡಿರಲಿಲ್ಲ. ಆದರೆ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬ್ ಗೆ ಹೋಗಿ ಐವಿ ದ್ರಾವಣ ಗುಣಮಟ್ಟ ಹೊಂದಿದೆ ಎಂದು ವರದಿ ತಂದರು. ಟೆಸ್ಟಿಂಗ್ ವಿಚಾರದಲ್ಲಿ CDL ವರದಿಯೇ ಅಂತಿಮವಾಗಿರುವುದರಿಂದ ನಾವು ಕಂಪನಿಯ ಔಷಧಿಗಳನ್ನ ತಿರಸ್ಕರಿಸಲು ಟೆಂಡರ್ ನಿಯಮದಲ್ಲಿ ಅವಕಾಶವಿಲ್ಲ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯದ ಡ್ರಗ್ ಕಂಟ್ರೋಲ್ ಹೇಳಿದೆ ಗುಣಮಟ್ಟ ಹೊಂದಿರದ 22 ಬ್ಯಾಚ್ ಗಳನ್ನ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿರಲಿಲ್ಲ. ಯಾವ ಬ್ಯಾಚ್ ಗಳು ಗುಣಮಟ್ಟ ಹೊಂದಿದೆ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರು ಆ ಬ್ಯಾಚ್ ಗಳನ್ನ ಮಾತ್ರ KSMCL ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು. ಪೂರೈಕೆಯಾದ ಎರಡು ತಿಂಗಳ ವರೆಗೆ ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಬಳಕೆಯಾಗಿದೆ. ಎಲ್ಲಿಂದಲೂ ದೂರುಗಳಿರಲಿಲ್ಲ. ಬಳ್ಳಾರಿಯಲ್ಲಿ 34 ಸಿಸೇರಿಯನ್ಗಳು ನಡೆದಾಗ 7 ಬಾಣಂತಿಯರಿಗೆ ತೊಂದರೆ ಎದುರಾಯಿತು. ಅದರಲ್ಲಿ ಐವರು ಸಾವನ್ನಪ್ಪಿದ್ದು, 2 ಬಾಣಂತಿಯರು ಚೇತರಿಸಿಕೊಂಡಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ರಾಜೀವ್ ಗಾಂಧಿ ಆರೋಗ್ಯ ವಿ.ವಿ ತಜ್ಞ ವೈದ್ಯರ ತಂಡ ರಚಿಸಿ ವರದಿ ಪಡೆದಿಯಲಾಗಿದೆ. ವರದಿ ಪ್ರಕಾರ ವೈದ್ಯರ ಸೇವೆಯಲ್ಲಿ ಕುಂದುಕೊರತೆಗಳಾಗಿಲ್ಲ. ಆದರೆ ಐವಿ ದ್ರಾವಣ ಒಂದು ಕಾರಣವಾಗಿರಬಹುದು ಎಂದು ತಂಡ ಅನುಮಾನ ವ್ಯಕ್ತಪಡಿಸಿತ್ತು. ತಂಡದ ವರದಿ ಹಿನ್ನೆಲೆಯಲ್ಲಿ ಕಂಪನಿ ಪೂರೈಸಿದ್ದ 192 ಬ್ಯಾಚ್ಗಳನ್ನ ಐವಿ ದ್ರಾವಣವನ್ನ ತಡೆಹಿಡಿಯಲಾಗಿದ್ದು, ಕಂಪನಿಯ 9 ಬ್ಯಾಚ್ಗಳ ವಿಚಾರದಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಳ್ಳಾರಿಯಲ್ಲಿ ಬಾಣಂತಿಯರಿಗೆ ಆದ ಸಮಸ್ಯೆಯ ಕುರಿತು ಕೇಂದ್ರ ಡ್ರಗ್ ಕಂಟ್ರೋಲರ್ಗೂ ಕೂಡಾ ನಾವು ಪತ್ರ ಬರೆದಿದೆವು. ನಮ್ಮಲ್ಲಿ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಇದ್ದರೂ, CDL ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪತ್ರದಲ್ಲಿ ಮನವಿ ಮಾಡಿದ್ದೆವು. ಬಳಿಕ ಕೇಂದ್ರ ಡ್ರಗ್ ಕಂಟ್ರೋಲರ್, ರಾಜ್ಯದ ಡ್ರಗ್ ಕಂಟ್ರೋಲರ್ ಹಾಗೂ ಪಶ್ಚಿಮ ಬಂಗಾಳದ ಡ್ರಗ್ ಕಂಟ್ರೋಲರ್ ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಐವಿ ದ್ರಾವಣ ಉತ್ಪಾದಿಸದಂತೆ ಪಶ್ಚಿಮ ಬಂಗಾಳ ಕಂಪನಿಗೆ ನಿರ್ಬಂಧ ಹೇರಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Kidney Health: ಕಿಡ್ನಿ ಆರೋಗ್ಯದ ಕುರಿತು ಈ ಸಂಗತಿ ತಿಳಿದುಕೊಳ್ಳುವುದು ಅತಿ ಮುಖ್ಯ
ಫಾರ್ಮಾ ಕಂಪನಿಗಳು ಇಂದು ನಮ್ಮ ದೇಶಕ್ಕೊಂದು ಉತ್ಪಾದನಾ ಘಟಕ ಹಾಗೂ ವಿದೇಶಕ್ಕೆ ಕಳಿಸುವ ಔಷಧಿಗಳಿಗೆ ಪ್ರತ್ಯೇಕ ಉತ್ಪಾದನಾ ಘಟಕಗಳನ್ನ ಹಾಕಿಕೊಂಡಿವೆ. ದೇಶಕ್ಕೆ ಒಂದು ರೀತಿ, ವಿದೇಶಗಳಿಗೆ ಇನ್ನೊಂದು ರೀತಿಯ ಗುಣಮಟ್ಟದ ಔಷಧಿಗಳನ್ನ ಪೂರೈಸುತ್ತಿವೆ. ಈ ತಾರತಮ್ಯ ಇರಲೇ ಬಾರದು. ಬಾಣಂತಿಯರ ಸಾವನ್ನ ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಳ್ಳಾರಿಯಲ್ಲಿ ಅಷ್ಟೇ ಅಲ್ಲ. ರಾಜ್ಯದ ಬೇರೆ ಕಡೆಯೂ ಐವಿ ದ್ರಾವಣದಿಂದ ಸಾವುಗಳಾಗಿರಬಹುದು. ಹೀಗಾಗಿ ಪ್ರತಿಯೊಂದು ತಾಯಿ ಮಗುವಿನ ಸಾವುಗಳನ್ನು ಪರಿಶೀಲಿಸಲು ನಾನು ಸೂಚಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.