Tuesday, 26th November 2024

ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನ

ಸುಳ್ಯ: ಅಲ್ಪ ಕಾಲದ ಅಸೌಖ್ಯದಿಂದ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನರಾದರು.

ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಗಮನ ಸೆಳೆದಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರು ಕರ್ನಾಟಕ ಮೇಳದಲ್ಲಿ ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಚೇತನಗಳ ಒಡನಾಡಿಯಾಗಿದ್ದರು.

ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದರು. ಇತ್ತೀಚೆ ಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

1949ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದ ವಿಶ್ವನಾಥ ರೈ ಅವರು 2 ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ಅಚ್ಚುತ ಮಣಿಯಾಣಿ ಅವರಲ್ಲಿ ಯಕ್ಷ ನಾಟ್ಯಾಭ್ಯಾಸ ಮಾಡಿ 9ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದರು.

ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ವಿಶ್ವನಾಥ ರೈ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದರು.