Saturday, 23rd November 2024

Bengaluru Building Collapse: ಬೆಂಗಳೂರಿನ ಕಟ್ಟಡ ಕುಸಿತದ ಭಯಾನಕ ವಿಡಿಯೋ; ಇನ್ನೂ ಸಿಗದ ಏಳು ಕಾರ್ಮಿಕರು

building collapse

ಬೆಂಗಳೂರು: ಇಲ್ಲಿನ ಬಾಬುಸಾಪಾಳ್ಯದಲ್ಲಿ ಸಂಭವಿಸಿದ (Bengaluru rains) ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡದ ಕುಸಿತ (Bengaluru Building Collapse) ಪ್ರದೇಶದಲ್ಲಿ ತುರ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು, ಕಟ್ಟಡದ ಒಳಗೆ ಸಿಲುಕಿ ಮೃತಪಟ್ಟ ಕಾರ್ಮಿಕರೊಬ್ಬರ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಏಳು ಮಂದಿ ಕಾರ್ಮಿಕರು ಕಟ್ಟಡದ ಕೆಳಗೆ ಸಿಲುಕಿಕೊಂಡಿದ್ದಾರೆ (bengaluru news) ಎನ್ನಲಾಗಿದೆ.

ಈ ಕಟ್ಟಡ ಕುಸಿತದ ದೃಶ್ಯ ಪಕ್ಕದ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಟ್ಟಡ ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ದಿಢೀರ್‌ ಆಗಿ ಬುಡಮೇಲಾಗಿ ನೆಲಕ್ಕುರುಳಿತ್ತು. ಇನ್ನೂ ಏಳು ಕಾರ್ಮಿಕರು ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದಾರೆ. ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

’20 ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ನೆಲಮಹಡಿಯಲ್ಲಿ ಮಹಿಳೆ ಸೇರಿದಂತೆ ಕೆಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ನಾಪತ್ತೆ ಆಗಿದ್ದಾರೆ. ಕಟ್ಟಡದ ವಿವಿಧ ಭಾಗದಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಜಿಸಾನ್‌, ಮಹ್ಮದ್‌ ಸಾಹಿಲ್‌, ರಶೀದ್‌, ಸಿತಾರೆ, ಇಲೀಫ್‌, ಸೋಹಿಲ್‌ ಹಾಗೂ ಚಿತ್ತೂರಿನ ಪ್ರದೀಪ್‌ ರೆಡ್ಡಿ ಅವರನ್ನು ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಅವರೆಲ್ಲರೂ ಅ‍ಪಾಯದಿಂದ ಪಾರಾಗಿದ್ದಾರೆ. ಯಾದಗಿರಿಯ ಜಗಮ್ಮ, ಮಲ್ಲಪ್ಪ, ನಾಗರಾಜು, ಬಿಹಾರದ ರಮೇಶ್ ಕುಮಾರ್, ಪಾಶ್ವಾನ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರದ ಮಹ್ಮದ್‌ ಅರ್ಮಾನ್‌, ಮಹ್ಮದ್ ಅರ್ಷದ್‌, ತಿರುಪಾಲಿ, ಸೋಲೊಪಾಶ್ವನ್ , ಚಿತ್ತೂರಿನ ತುಳಸಿ ರೆಡ್ಡಿ ಹಾಗೂ ಗಜೇಂದ್ರ ನಾಪತ್ತೆ ಆಗಿದ್ದಾರೆ. ಗಜೇಂದ್ರ ಅವರ ಊರು ಗೊತ್ತಾಗಿಲ್ಲ.

‘ಕಳಪೆ ಕಾಮಗಾರಿಯಿಂದಲೇ ಕಟ್ಟಡ ಬುಡಮೇಲಾಗಿ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮಾಲೀಕ ಆಂಧ್ರಪ್ರದೇಶದ ಮುನಿರಾಜು ರೆಡ್ಡಿ, ಅವರ ಪುತ್ರ ಮೋಹನ್ ರೆಡ್ಡಿ ಹಾಗೂ ಕಟ್ಟಡದ ನಿರ್ಮಾಣ ಕಾಮಗಾರಿಯ ಮೇಸ್ತ್ರಿ ನಾಪತ್ತೆ ಆಗಿದ್ದಾರೆ. ಅವರಿಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ತಳಪಾಯದಲ್ಲಿ ಕಬ್ಬಿಣದ ರಾಡುಗಳನ್ನು ಸರಿಯಾಗಿ ಅಳವಡಿಕೆ ಮಾಡಿರಲಿಲ್ಲ. ಇದೇ ಕಾರಣಕ್ಕೆ ಭಾರ ತಡೆಯದೇ ಕಟ್ಟಡ ಉರುಳಿರುವ ಸಾಧ್ಯತೆಯಿದೆ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರು ಶಂಕಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ಕಟ್ಟಡ ಉರುಳಿದೆ. ಎದುರು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಟ್ಟಡವು ಬುಡಮೇಲಾಗಿ ಉರುಳುತ್ತಿರುವ ದೃಶ್ಯವು ಸೆರೆಯಾಗಿದೆ. ಕೆಳ ಅಂತಸ್ತಿನಲ್ಲಿ ಮಹಿಳೆ ಸೇರಿದಂತೆ ಐವರು ಕೆಲಸ ಮಾಡುತ್ತಿದ್ದ ದೃಶ್ಯವೂ ಸೆರೆಯಾಗಿತ್ತು. ಅವರ ಮೇಲೆಯೇ ಕಟ್ಟಡ ಕುಸಿದಿದೆ.

ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕದ ದಳದ 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಗೆ ಜೆಸಿಬಿ ಯಂತ್ರ ಬಳಕೆ ಮಾಡಲಾಗಿದೆ. ಉರುಳಿ ಬಿದ್ದ ಕಟ್ಟಡದ ಮಧ್ಯಭಾಗದಲ್ಲಿ ಸಿಲುಕಿದ್ದರು. ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳನ್ನು ತೆಗೆದು ಅವರನ್ನು ರಕ್ಷಿಸಲಾಗಿದೆ. ನಾಪತ್ತೆ ಆದವರಿಗೆ ಶ್ವಾನ ದಳ ಹಾಗೂ ಎನ್‌ಡಿಆರ್‌ಎಫ್‌ ಬಳಸಿಕೊಂಡು ಶೋಧ ನಡೆಸಲಾಗುತ್ತಿದೆ.

ಕಟ್ಟಡದ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿತ್ತು. ಪೇಂಟಿಂಗ್ ಹಾಗೂ ಟೈಲ್ಸ್ ಕಾಮಗಾರಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕಟ್ಟಡ ನೆಲಕ್ಕುರುಳಿದೆ. ಅರ್ಧ ಕಟ್ಟಡ ಕುಸಿದು ಪಕ್ಕದ ಖಾಲಿ ನಿವೇಶನದ ಮೇಲೆ ಬಿದ್ದಿದೆ. ಬೃಹತ್‌ ಗಾತ್ರದ ಕಾಂಕ್ರೀಟ್‌ ಪಿಲ್ಲರ್‌ಗಳಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸತೀಶ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

‘ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರಿಂದ ಕಾಂಪೌಂಡ್‌ ನಿರ್ಮಾಣಕ್ಕೆ ಕಟ್ಟಡದ ಸುತ್ತಲೂ ದೊಡ್ಡದಾದ ಗುಂಡಿ ತೆಗೆಯಲಾಗಿತ್ತು. ಹೆಣ್ಣೂರು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಜೋರು ಮಳೆ ಸುರಿದಿತ್ತು. ಗುಂಡಿಗಳಲ್ಲಿ ನೀರು ತುಂಬಿತ್ತು. ತೇವಾಂಶ ಹೆಚ್ಚಳವಾಗಿ ಕಟ್ಟಡ ಕುಸಿದಿರುವ ಸಾಧ್ಯತೆಯೂ ಇದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: DK Shivakumar: ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಕೆ ಶಿವಕುಮಾರ್