Sunday, 12th January 2025

Bengaluru Horror: ಹಸುಗಳ ಕೆಚ್ಚಲು ಕೊಯ್ದು ಕಟುಕರ ಅಟ್ಟಹಾಸ!

ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲುಗಳನ್ನು ಕೊಯ್ದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ(Chamarajpete) ಈ ಭೀಕರ ಘಟನೆ ವರದಿಯಾಗಿದೆ(Bengaluru Horror).

ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳನ್ನು ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ನಿನ್ನೆ(ಜ.11) ರಾತ್ರಿ ಮೂರು ಹಸುಗಳ ಕೆಚ್ಚಲನ್ನು ದುರುಳರು ಕೊಯ್ದಿದ್ದು, ವಿಪರೀತ ರಕ್ತಸ್ರಾವದಿಂದ ಮೂಕವೇದನೆ ಅನುಭವಿಸಿದ ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಮರಾಜಪೇಚೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಕೆಚ್ಚಲನ್ನು ಕೊಯ್ದು ದುರುಳರು ವಿಕೃತಿ ಮೆರೆದಿದ್ದಾರೆ. ಅವರ ಬಳಿ 8 ಹಸುಗಳಿದ್ದು, ಈ ಪೈಕಿ ಮೂರು-ನಾಲ್ಕು ಹಸುಗಳು ಮನೆಯಿಂದ ಸ್ವಲ್ಪ ದೂರದಲ್ಲಿರುವ ರಸ್ತೆಯಲ್ಲಿ ಮಲಗುತ್ತವೆ ಎನ್ನಲಾಗಿದೆ. ಹೀಗೆ ನಿನ್ನೆ ರಾತ್ರಿ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ. ಮೂಕಪ್ರಾಣಿಗಳ ನರಳಾಟ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಕಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ಸಂಸದ ಪಿ.ಸಿ ಮೋಹನ್ ಭೇಟಿ ನೀಡಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೂ ಸ್ಥಳದಿಂದ ಹೋಗುವುದಿಲ್ಲ. ವಿರೋಧ ಪಕ್ಷದ ನಾಯಕರು ಸ್ಥಳಕ್ಕೆ ಬರಲಿದ್ದಾರೆ. ಇಲ್ಲಿ ಗೋ ಆಸ್ಪತ್ರೆಯಿತ್ತು. ಅದನ್ನು ಮುಚ್ಚಲು ಮುಂದಾಗಿದ್ದರು. ಇದನ್ನು ಕರ್ಣ ಅವರು ತೀವ್ರವಾಗಿ ವಿರೋಧಿಸಿದ್ದರು. ಅದಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಪಿ.ಸಿ ಮೋಹನ್ ಆರೋಪಿಸಿದ್ದಾರೆ.

ಹಸು ಕಳ್ಳಸಾಗಣೆದಾರನೆಂದು ಭಾವಿಸಿ ಬೆನ್ನಟ್ಟಿ ವಿದ್ಯಾರ್ಥಿ ಹತ್ಯೆ

ಕೆಲ ತಿಂಗಳ ಹಿಂದೆ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ದನ ಕಳ್ಳಸಾಗಣೆದಾರನೆಂದು ತಪ್ಪಾಗಿ ತಿಳಿದು ಗೋರಕ್ಷಕರು ಕಾರಿನಲ್ಲಿ ಹಿಂಬಾಲಿಸಿ ಗುಂಡಿಕ್ಕಿ ಹತ್ಯೆಗೈದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿತ್ತು. ಆರ್ಯನ್ ಮಿಶ್ರಾ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ. ಆಗಸ್ಟ್ 23 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿತ್ತು.

ಆರ್ಯನ್ ಮಿಶ್ರಾ ಮತ್ತು ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ ಆರೋಪಿಗಳು ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣದ ಗಧಪುರಿ ಬಳಿ ಸುಮಾರು 25 ಕಿಲೋಮೀಟರ್ ವರೆಗೆ ಅವರ ಕಾರನ್ನು ಹಿಂಬಾಲಿಸಿದ್ದರು. ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವು ಜಾನುವಾರು ಕಳ್ಳಸಾಗಣೆದಾರರು ನಗರ ದಾಟಿ ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿತ್ತು.

ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್

Leave a Reply

Your email address will not be published. Required fields are marked *