ಬೆಂಗಳೂರು: ಉದ್ದೇಶಿತ ಬೆಂಗಳೂರು- ಮಂಗಳೂರು ಎಕ್ಸ್ ಪ್ರೆಸ್ ವೇ (Bengaluru-Mangaluru Expressway) ಮಾಡಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದ್ದು, ಯೋಜನೆ ಕಾರ್ಯರೂಪಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಟೆಂಡರ್ ಕರೆಯಲಾಗಿದೆ.
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ರೀತಿಯಲ್ಲಿ ಇದು ಬರಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸುಮಾರು 350 ಕಿಮೀಗಳಿದ್ದು, ಕನಿಷ್ಟ ಆರರಿಂದ ಏಳು ಗಂಟೆಗಳ ಕಾಲ ಬೇಕಾಗುತ್ತದೆ. ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು- ಮಂಗಳೂರು ಎಕ್ಸ್ ಪ್ರೆಸ್ ವೇ ಕಾರಿಡಾರ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದ ಮೂರೂವರೆ ಗಂಟೆಯಿಂದ ನಾಲ್ಕು ಗಂಟೆಯೊಳಗೆ ಬೆಂಗಳೂರಿನಿಂದ-ಮಂಗಳೂರು ತಲುಪಬಹುದು ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಒಂಬತ್ತು ಕಂಪನಿಗಳು ಟೆಂಡರ್ನಲ್ಲಿ ಭಾಗಿಯಾಗಿವೆ. ಜನವರಿ ವೇಳೆಗೆ ಟೆಂಡರ್ ಫೈನಲ್ ಆಗುವ ಸಾಧ್ಯತೆಗಳಿವೆ. ಇದರಿಂದ ಬೆಂಗಳೂರಿನಿಂದ ವಿದೇಶಕ್ಕೆ ಸಾಗಿಸುವ ಸಾಮಾಗ್ರಿಗಳನ್ನು ಸಾಗಿಸಲು ಸಹಾಯ ಆಗುತ್ತದೆ ಮತ್ತು ವಿದೇಶದಿಂದ ಭಾರತಕ್ಕೆ ಬರುವ ಇಂಧನ, ಗ್ಯಾಸ್, ಮೈನ್ಸ್ ಮಂಗಳೂರು ಬಂದರಿನ ಮೂಲಕ ಬೆಂಗಳೂರಿಗೆ ತರಲು ಸಹಾಯ ಆಗಲಿದೆ.
ಡಿಪಿಆರ್ ರೆಡಿ ಮಾಡಲು ಒಂಬತ್ತು ಕಂಪನಿಗಳು ಟೆಂಡರ್ ಸಲ್ಲಿಸಿವೆ. ಈ ಹೈ ಸ್ಪೀಡ್ ಕಾರಿಡಾರ್ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ತಲುಪಲಿವೆ. ನಾಲ್ಕು ಅಥವಾ ಆರು ಲೈನ್ ರೋಡ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಈ ಎಕ್ಸ್‌ಪ್ರೆಸ್ ವೇ 335 ಕಿಮೀ ಉದ್ದವಿರಲಿದೆ, ಟೆಂಡರ್ ಪಡೆದುಕೊಳ್ಳುವ ಕಂಪನಿಗೆ ಡಿಪಿಆರ್ ವರದಿ ಸಲ್ಲಿಸಲು 540 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
2028ರಲ್ಲಿ ಈ ಹೈ ಸ್ಪೀಡ್ ಕಾರಿಡಾರ್ ಯೋಜನೆಯ ಕೆಲಸ ಆರಂಭವಾಗಲಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ತೊಡಕುಗಳೂ ಸಾಕಷ್ಟಿವೆ. ಕಾರಣ ಈ ಎಕ್ಸ್‌ಪ್ರೆಸ್ ವೇ ಮಾಡಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಅದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಬಹುದು. ಆದರೆ ಇದರಿಂದ ನಮ್ಮ ಖಾಸಗಿ ಬಸ್ ಗಳ ನಿರ್ವಹಣೆ ಮತ್ತು ಡಿಸೇಲ್ ಉಳಿತಾಯ ಆಗಲಿದೆ ಎಂದು ಖಾಸಗಿ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.