Friday, 22nd November 2024

Bengaluru News: ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ನ ಹೊಸ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ

Bengaluru News

ಬೆಂಗಳೂರು: ಯಲಹಂಕ, ಜಕ್ಕೂರು, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ (Bengaluru News) 200ಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಯ 35,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಠಿಕ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಉದ್ದೇಶದಿಂದ ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ (ಟಿಎಪಿಎಫ್) (Akshaya Patra Foundation) ಹೊಸ ಅತ್ಯಾಧುನಿಕ ಅಡುಗೆ ಮನೆಯನ್ನು ಉದ್ಘಾಟಿಸಿದೆ.

ಥಕ್ಕರ್ ಫ್ಯಾಮಿಲಿ ಫೌಂಡೇಷನ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಅಡುಗೆ ಮನೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಲಿಮಿಟೆಡ್‌ನ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರು ಮಾತನಾಡಿ, “ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪೌಷ್ಠಿಕ ಆಹಾರವನ್ನು ಒದಗಿಸುವ ಅಕ್ಷಯ ಪಾತ್ರದ ಮಹತ್ತರ ಕಾರ್ಯ ಶ್ಲಾಘನೀಯ. ಎಲ್ಲರೂ ಒಟ್ಟಾಗಿ ಸೇರಿದರೆ ಬದುಕನ್ನು ಬದಲಿಸಬಹುದು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯ ಒದಗಿಸಬಹುದು. ಈ ಅಡುಗೆ ಮನೆ ಸ್ಥಾಪನೆಗೆ ಸಹಯೋಗ ಒದಗಿಸಿದ ಥಕ್ಕರ್ ಕುಟುಂಬಕ್ಕೆ ಮತ್ತು ಊಟ ಒದಗಿಸುವ ಯೋಜನೆಯ ಶೇ.55-56ರಷ್ಟು ಊಟದ ಖರ್ಚು ಭರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಈ ಸುದ್ದಿಯನ್ನೂ ಓದಿ | Madhyantara Short Movie: ಮನಕ್ಕೆ ಮುದನೀಡುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಿರುಚಿತ್ರ ‘ಮಧ್ಯಂತರ’

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, “ನಾರಾಯಣ ಮೂರ್ತಿಯವರು ಮತ್ತು ಜನಾರ್ಧನ ಥಕ್ಕರ್ ಅವರು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಮೆಚ್ಚುಗೆ ಸಲ್ಲಿಸಲೇಬೇಕಾದ ವಿಚಾರವಾಗಿದೆ. ಮತ್ತಷ್ಟು ಶ್ರೀಮಂತ ವರ್ಗದ ಮಂದಿ ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದಾಗಲು ಅವರು ಸ್ಫೂರ್ತಿ ನೀಡಿದ್ದಾರೆ” ಎಂದು ಹೇಳಿದರು.

ಅಕ್ಷಯ ಪಾತ್ರ ಫೌಂಡೇಶನ್‌ನ ಸಂಸ್ಥಾಪಕ- ಅಧ್ಯಕ್ಷ ಮಧು ಪಂಡಿತ್ ದಾಸ ಮಾತನಾಡಿ, “ನಮ್ಮ ರಾಜ್ಯದ ಮಕ್ಕಳಿಗೆ ಊಟ ಒದಗಿಸುವ ಅವಕಾಶ ಒದಗಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ. ನಾವು ಪ್ರಸ್ತುತ ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು ಮತ್ತು ಮೈಸೂರುಗಳಲ್ಲಿರುವ ಒಂಭತ್ತು ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಆಹಾರವನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.

ಬೆಂಗಳೂರಿನ ಚಿಕ್ಕಜಾಲದಲ್ಲಿ ಆರಂಭಗೊಂಡಿರುವ ಅಡುಗೆ ಮನೆಯು ದೇಶದಲ್ಲಿರುವ ಅಕ್ಷಯ ಪಾತ್ರದ 75ನೇ ಕೇಂದ್ರೀಕೃತ ಅಡುಗೆ ಮನೆ ಆಗಿದೆ. ಬೆಂಗಳೂರಿನಲ್ಲಿನ 5ನೇ ಅಡುಗೆ ಮನೆ ಆಗಿದೆ.

ಈ ಸುದ್ದಿಯನ್ನೂ ಓದಿ | Kannada New Movie: ಫಸ್ಟ್ ಲುಕ್‌ನಲ್ಲೇ ಕುತೂಹಲ ಮೂಡಿಸಿದೆ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ ಅಭಿನಯದ ʼ#ಪಾರುಪಾರ್ವತಿʼ ಚಿತ್ರ

ಕಾರ್ಯಕ್ರಮದಲ್ಲಿ ದಾನಿಗಳಾದ ಥಕ್ಕರ್ ಫ್ಯಾಮಿಲಿ ಫೌಂಡೇಶನ್‌ನ ಚೇರ್ಮನ್ ಜನಾರ್ದನ್ ಠಕ್ಕರ್, ವೈಸ್ ಚೇರ್ಮನ್ ಲಿಂಡಾ ಥಕ್ಕರ್, ರಿಲಯನ್ಸ್ ಲಿಮಿಟೆಡ್‌ನ ಸಿಐಓ ಜ್ಯೋತಿಂದ್ರ ಥಕ್ಕರ್, ಅಕ್ಷಯ ಪಾತ್ರ ಫೌಂಡೇಶನ್‌ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ ಮತ್ತು ಸಿಇಓ ಶ್ರೀಧರ್ ವೆಂಕಟ್ ಉಪಸ್ಥಿತರಿದ್ದರು.