Saturday, 11th January 2025

Bengaluru News: ʼಉಷಾ ಹರಣ ಕಾವ್ಯ-ವಿಮರ್ಶೆ ಸ್ಪರ್ಧೆʼ; ಪ್ರಬಂಧಗಳ ಆಹ್ವಾನ

Bengaluru News

ಬೆಂಗಳೂರು: ಹರಿದಾಸ ಚಂದ್ರಿಕಾ ಫೌಂಡೇಷನ್‌ ಮತ್ತು ಒಆರ್‌ಪಿ ಚಾರಿಟೇಬಲ್‌ ಫೌಂಡೇಷನ್‌ ವತಿಯಿಂದ ʼಉಷಾ ಹರಣ ಕಾವ್ಯ-ವಿಮರ್ಶೆ ಸ್ಪರ್ಧೆʼಯನ್ನು ಏರ್ಪಡಿಸಲಾಗಿದೆ. (Bengaluru News) ವಾಯುಸ್ತುತಿಯಂಥಾ ಮೇರುಕೃತಿಯನ್ನು ಮಧ್ವ ಮತಾನುಯಾಯಿಗಳಿಗೆ ಒದಗಿಸಿಕೊಟ್ಟ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಇನ್ನೊಂದು ಮಹಾಕಾವ್ಯವೇ ʼಉಷಾಹರಣʼ. ತ್ರಿವಿಕ್ರಮ ಪಂಡಿತರೆಂದರೆ ನೆನಪಾಗುವುದೇ ವಾಯುಸ್ತುತಿ. ಅವರದೇ ಇನ್ನೊಂದು ಮಹಾಕಾವ್ಯ ʼಉಷಾಹರಣʼ.

ವಿಶ್ವಾದ್ಯಂತ ಇರುವ ಸಂಸ್ಕೃತ ಬಲ್ಲ ವಿದ್ವಾಂಸರಿಗೆಲ್ಲ ಉಷಾಹರಣ ಕೃತಿಯನ್ನು ಅಧ್ಯಯನ ಮಾಡಿ ತನ್ಮೂಲಕ ಒಂದು ಸ್ಪರ್ಧೆಯಲ್ಲಿ ಭಾಗಿಗಳಾಗುವಂಥ ಅವಕಾಶವನ್ನು ತಮ್ಮೆಲ್ಲರ ಮುಂದಿಡುತ್ತಿದ್ದೇವೆ. ಉಷಾಹರಣ ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಆಸ್ತಿಕ ಬಂಧುಗಳಿಗೆ ತಲುಪುವಂತೆ ಪ್ರಯತ್ನ ಮಾಡಿದ್ದ ಬನ್ನಂಜೆ ಗೋವಿಂದಾಚಾರ್ಯರಿಗೆ, ಈ ಕೃತಿಯ ಅಧ್ಯಯನ ಮತ್ತು ಅದರ ವಿಶ್ಲೇಷಣೆಯ ಕುರಿತಾಗಿ ಏರ್ಪಡಿಸುವ ಸ್ಪರ್ಧೆಯನ್ನು ಸಮರ್ಪಿಸುತ್ತಿದ್ದೇವೆ. ಇದು ನಾವು ಅವರಿಗೆ ಸಲ್ಲಿಸುವ ಗೌರವ ಎಂಬುದು ನಮ್ಮ ನಂಬಿಕೆ ಎಂದು ತಿಳಿಸಿದೆ.

ಸ್ಪರ್ಧೆಯ ವಿವರ

ಈ ಸ್ಪರ್ಧೆಯ ಅಂಗವಾಗಿ ವಿದ್ವಾಂಸರು ಉಷಾಹರಣದ ಆಳವಾದ ಅಧ್ಯಯನ ಮಾಡಿ ಅದರ ಕುರಿತಾಗಿ ಒಂದು ವಿಮರ್ಶಾತ್ಮಕ ಪ್ರಬಂಧವನ್ನು ಮಂಡಿಸಬೇಕು.

ಪ್ರಬಂಧ ರಚನೆಯ ಸ್ವರೂಪ

ಸಾರಾಂಶ 2-3 ವಾಕ್ಯವೃಂದಗಳಲ್ಲಿ (2-3 ಪ್ಯಾರಾಗ್ರಾಫ್‌ಗಳು), ಪರಿಚಯ, ವಿವರವಾದ ವಿಶ್ಲೇಷಣೆ, ಉಪಸಂಹಾರ. ಈ ಮಹಾಕಾವ್ಯದ ವಿಶ್ಲೇಷಣೆಯು ಉಷಾಹರಣದ ಪ್ರಮುಖ ಅಂಶಗಳನ್ನು ಎತ್ತಿ ಹಿಡಿದು ತೋರುವ ವಿಮರ್ಶಾತ್ಮಕ ಒಳನೋಟವಾಗಿರಬೇಕು. ವಿಶೇಷವಾಗಿ, ಸಾಹಿತ್ಯ ಪ್ರಸ್ತುತಿಯ ಶೈಲಿ, ವ್ಯಾಕರಣದ ವೈಶಿಷ್ಟ್ಯ ಮತ್ತು ಸಂಸ್ಕೃತದಲ್ಲಿನ ಇತರ ಪ್ರಮುಖ ಕೃತಿಗಳೊಂದಿಗೆ ತುಲನಾತ್ಮಕವಾದ ಸಾಮ್ಯ ಮತ್ತು ಭಿನ್ನತೆಗಳನ್ನು ವಿವರಿಸಬೇಕು. ಸ್ಪರ್ಧೆಗೆ ಸಲ್ಲಿಸಲಾಗುವ ಎಲ್ಲಾ ಪ್ರಬಂಧಗಳನ್ನು ವಿದ್ವಾಂಸರ ಸಮಿತಿಯು ಮೌಲ್ಯಮಾಪನ ಮಾಡುತ್ತದೆ. ಆಯ್ಕೆಯಾದ ಮೊದಲ ಎರಡು ಪ್ರಬಂಧಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಪ್ರಬಂಧಗಳು ಮತ್ತು ಫಲಿತಾಂಶಗಳನ್ನು ಮೌಲ್ಯಮಾಪನ ಪೂರ್ಣಗೊಂಡ ನಂತರ ನಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು.

ಸ್ಪರ್ಧಿಗಳು https://forms.gle/fiZXFvbNEjdGze3d8 ರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿಸಲು ಫೆಬ್ರವರಿ 28, 2025 ಕೊನೆಯ ದಿನಾಂಕವಾಗಿದೆ. ಪ್ರಬಂಧದ ಮೊದಲ ಪ್ರತಿ: ಎಪ್ರಿಲ್ 31, 2025 (50% ಗಡುವು), ಅಂತಿಮ ಪ್ರತಿ: ಮೇ 31, 2025 ಆಗಿದೆ. ಪ್ರಬಂಧವು ಸುಮಾರು 5 ಪುಟಗಳು (ಎ4 ಗಾತ್ರದ ಪುಟಗಳಲ್ಲಿ). ಹಾರ್ಡ್ ಕಾಪಿ ಅಥವಾ ಸಾಫ್ಟ್ ಕಾಪಿ ಅಪ್‌ಲೋಡ್ (ಲಿಂಕ್ ಅನ್ನು ಒದಗಿಸಲಾಗುವುದು).

ಪ್ರಶಸ್ತಿಯು ಮೊದಲ ಸ್ಥಾನ: ರೂ. 50,000, ಎರಡನೇ ಸ್ಥಾನ: ರೂ. 25000, ಮೂರನೇಯ ಸ್ಥಾನ: ರೂ: 10,000 ಆಗಿದೆ. ಪ್ರಶಸ್ತಿಗಳನ್ನು ಶ್ರೀ ಬನ್ನಂಜೆ ಗೋವಿಂದಾಚಾರ್ಯರ 90ರ ನಮನ, ಉಡುಪಿಯಲ್ಲಿ ನಡೆಯುವ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮ ಆಗಸ್ಟ್ 3, 2025 ರಂದು ನಡೆಯಲಿದೆ. ಕಾರ್ಯಕ್ರಮದ ಸ್ಥಳವನ್ನು ಮುಂಬರುವ ದಿನಗಳಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕನ್ನಡ, ಭಾರತೀಯ, ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳ ಆಹ್ವಾನ

ಸ್ಪರ್ಧೆಯನ್ನು ಹರಿದಾಸ ಚಂದ್ರಿಕಾ ಫೌಂಡೇಷನ್‌ ಮತ್ತು ಒಆರ್‌ಪಿ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮವು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಉಡುಪಿಯ ಪರ್ಯಾಯ ಪುತ್ತಿಗೆ ಮಠ ಹಾಗೂ ಭಾರತೀಯ ವಿದ್ಯಾ ಪರಿಷತ್ ಸಹಯೋಗದಲ್ಲಿ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *