ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ರಾಜಧಾನಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Bengaluru Rain), ಈ ನಡುವೆ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಸೋಮವಾರ ವರದಿಯಾಗಿದೆ. ಚಾಮರಾಜಪೇಟೆಯ ಜೆ.ಜೆ.ನಗರದಲ್ಲಿ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಸಿದ ಮನೆಯಲ್ಲಿ ಸಿಲುಕಿದ್ದ ವೃದ್ಧ ದಂಪತಿಯನ್ನು ಪೊಲಿಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಳೆಯ ಮನೆ ಇದಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕುಸಿದು ಬಿದ್ದಿದೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಶೀತಗಾಳಿಗೆ ಜನರು ತತ್ತರಿಸುವಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಸುದ್ದಿಯನ್ನೂ ಓದಿ | Farmers Protest: ರೈತರಿಂದ ದೆಹಲಿ ಚಲೋ; ಭಾರೀ ಟ್ರಾಫಿಕ್ ಜಾಮ್, ಜನ ಹೈರಾಣ
ಪಶ್ಚಿಮ ಘಟ್ಟದಲ್ಲಿ ಭೂಕಂಪದ ಅನುಭವ, ಜನ ಭಯಭೀತ
ಕಾರವಾರ: ಪಶ್ಚಿಮ ಘಟ್ಟ (Western Ghats) ಪ್ರದೇಶಗಳ ಶಿರಸಿ, ಕುಮಟಾ ಸೇರಿ ಹಲವೆಡೆ ನಿನ್ನೆ ರಾತ್ರಿ ಭೂಕಂಪನದ (Earthquake) ಅನುಭವ ಆಗಿದ್ದು, ಜನ ಭಯಭೀತರಾಗಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ, ಶಿರಸಿಯ ಹಲವು ಕಡೆಗಳಲ್ಲಿ ಭಾನುವಾರ ಭೂಕಂಪನದ ಅನುಭವವಾಗಿದ್ದು ಜನ ಭಯಭೀತರಾಗಿದ್ದಾರೆ. ಕುಮಟಾ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಹಳ್ಳಿ, ಕಸಗೆ ಮತ್ತು ಬಂಡಳದಲ್ಲಿ ಭೂಕಂಪನದ ಅನುಭವವಾಗಿದೆ. 3 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು ಜನ ಒಂದು ಕ್ಷಣ ಕಂಗಾಲಾಗಿದ್ದಾರೆ.
ಕುಮಟಾ-ಶಿರಸಿ ನಡುವೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕೊರೆಯುತ್ತಿರುವುದರಿಂದ ಬಂಡೆ ಕಲ್ಲುಗಳನ್ನು ಸಿಡಿಸಿರಬಹುದು ಎಂದು ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ಇದು ಭೂಕಂಪನ ಎನ್ನುವುದು ಬಳಿಕ ತಿಳಿದುಬಂದಿದೆ. ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಭೂಕಂಪನವಾಗಿದ್ದು ಅದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಕಂಪನದ ಅನುಭವವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದೇ ಪ್ರದೇಶದಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪಶ್ಚಿಮಘಟ್ಟದಂತಹ ಸೂಕ್ಷ್ಮ ಪ್ರದೇಶದಲ್ಲಿ ಅಣುವಿದ್ಯುತ್ ಘಟಕ ಸ್ಥಾಪನೆ ಮಾಡಿರುವುದು, ಅದರ ಜೊತೆಗೆ ಇತ್ತೀಚೆಗೆ ನಡೆಯುತ್ತಿರುವ ಭೂಕುಸಿತದಂತ ಘಟನೆಗಳು ಇಲ್ಲಿನ ಜನರನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿವೆ. ಗುರುಮೂರ್ತಿ ಹೆಗ್ಡೆ ಎನ್ನುವವರು ಎಕ್ಸ್ ಖಾತೆಯಲ್ಲಿ ಭೂಕಂಪನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ ಭಾಗದ ಘಟ್ಟಪ್ರದೇಶಗಳಲ್ಲಿ ದೊಡ್ಡ ಶಬ್ದದೊಂದಿಗೆ 2ರಿಂದ 5 ಸೆಕೆಂಡ್‌ಗಳ ಕಾಲ ಭೂಕಂಪನದ ಅನುಭವವಾಗಿದೆ. ಇದು ಏನು ಎಂದು ಯಾರಿಗೂ ಗೊತ್ತಿಲ್ಲವಾದರೂ, ಎಲ್ಲರಿಗೂ ಭೂಕಂಪನ ಅನುಭವಕ್ಕೆ ಬಂದಿದೆ. ‘ಕೈಗಾ ಅಣುಸ್ಥಾವರ ಇಲ್ಲೇ ಇದ್ದು ಆತಂಕದಲ್ಲೇ ಬದುಕುವಂತಾಗಿದೆ, ಏನಾದರೂ ಅನಾಹುತ ಸಂಭವಿಸಿದರೆ ಮುಂದೇನಾಗುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPS officer Dies: ಹಾಸನದಲ್ಲಿ ಟಯರ್ ಸ್ಫೋಟಗೊಂಡು ಜೀಪ್ ಪಲ್ಟಿ; ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಾವು