Saturday, 23rd November 2024

Bengaluru Rains: ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌, ರಸ್ತೆಯಲ್ಲೇ ಕಾರು ಬಿಟ್ಟು ಮನೆಗೆ ನಡೆದ ಜನ; ವಿಡಿಯೊ ಇದೆ

electronic city

ಬೆಂಗಳೂರು: ಒಂದು ವಾರದಿಂದ ಪ್ರತಿದಿನ ಸಂಜೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Bengaluru Rains) ನಗರದ ಟ್ರಾಫಿಕ್‌ ವ್ಯವಸ್ಥೆ ನರಕಸದೃಶವಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ (Electronic City Flyover) ಟ್ರಾಫಿಕ್‌ ಜಾಮ್‌ (traffic jam) ಆಗಿದ್ದು, ಗಂಟೆಗಟ್ಟಲೆ ಕಾರುಗಳು ನಿಂತಲ್ಲೇ ನಿಂತವು. ಇದರಿಂದ ಬೇಸತ್ತ ಜನ ಕಾರುಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಮನೆಗೆ ನಡೆದು ಹೋದರು. ಇದೀಗ ಅದರ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.

ಕಳೆದ 15 ದಿನಗಳಿಂದ ಬೆಂಗಳೂರು ಭಾರಿ ಮಳೆಗೆ ತೊಯ್ದು ಹೋಗಿದೆ. ನಿನ್ನೆ ಕೂಡ ಇದೇ ರೀತಿ ಭಾರಿ ಮಳೆ ಸುರಿದಿತ್ತು. ಅಲ್ಲದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಹಿನ್ನೆಲೆ ಸಾಕಷ್ಟು ಪ್ರದೇಶದಲ್ಲಿ ನೀರು ತುಂಬಿ ಹೋಗಿತ್ತು. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕೂಡ ಮಳೆ ಅಬ್ಬರ ಜೋರಾಗಿ ರಸ್ತೆಯಲ್ಲಿ ನೀರು ತುಂಬಿ ಹೋಗಿ ವಾಹನಗಳು ಚಲಿಸಲಾಗದ ಸ್ಥಿತಿಗೆ ಬಂದಿದ್ದವು.

ಪರಿಣಾಮ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ನಿಂತಿತ್ತು. ಸುಮಾರು 5 ಗಂಟೆಗಳ ಕಾಲ ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ಮೇಲೆ ಟ್ರಾಫಿಕ್ ಉಂಟಾಗಿದೆ. ಕೊನೆಗೆ ಗಂಟೆಗಟ್ಟಲೆ ಕಾದ ಜನ ಫ್ಲೈಓವರ್ ಮೇಲಿಂದಲೇ ಕಾರುಗಳನ್ನು ನಿಲ್ಲಿಸಿ ವಾಹನಗಳಿಂದ ಇಳಿದು ನಡೆದುಕೊಂಡು ಹೋದರು.

ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವರು ಟ್ರಾಫಿಕ್‌ ನಿರ್ವಹಣೆಗೆ ಪ್ಲಾನಿಂಗ್‌ ಇಲ್ಲದ ಬೆಂಗಳೂರಿನ ಆಡಳಿತ ವ್ಯವಸ್ಥೆಯ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದರು. ಇವರಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ತಮ್ಮ ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದ ಟೆಕ್ಕಿಗಳು ಹೆಚ್ಚಿದ್ದರು.

ಮಳೆರಾಯ ಸೈಲೆಂಟ್ ಆಗುವ ಸೂಚನೆ ತೋರಿಸಿಲ್ಲ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇನೂ ಎರಡು ದಿನ ಭಾರಿ ಮಳೆ ಆಗುವ ಎಚ್ಚರಿಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಶಿವಮೊಗ್ಗ & ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲೂ ಮಳೆಯು ಗ್ಯಾರಂಟಿ. ಇನ್ನು ಬೆಂಗಳೂರಿನ ದಕ್ಷಿಣ ವಲಯ, ಬೊಮ್ಮನಹಳ್ಳಿ ವಲಯ, ಮಹದೇವಪುರ, ಆರ್.ಆರ್. ನಗರ, ದಾಸರಹಳ್ಳಿ, ಉತ್ತರ ವಲಯ ಭಾಗದಲ್ಲಿ ಭಾರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ಇದ್ದು, ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Viral Video: ಮೊಬೈಲ್ ಕಳ್ಳನನ್ನು ಹಿಡಿದು ತಕ್ಕ ಶಾಸ್ತಿ ಮಾಡಿದ ಮಹಿಳೆ; ವಿಡಿಯೊ ವೈರಲ್