Monday, 13th January 2025

Bengaluru Traffic: ವಿಶ್ವದಲ್ಲೇ ಅತಿ ನಿಧಾನ ಟ್ರಾಫಿಕ್‌ ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ!

Bengaluru News

ಬೆಂಗಳೂರು: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಇರುವ (Bengaluru Traffic) ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದ್ದು, ಭಾರತದ (India) ನಾಲ್ಕು ನಗರಗಳು ಟಾಪ್ 4ರಲ್ಲಿ ಸ್ಥಾನ ಪಡೆದುಕೊಂಡಿದೆ.

ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್ ಹಾವಳಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. 2024ರ ಟಾಂ ಟಾಂ ಟ್ರಾಫಿಕ್ ಇಂಡೆಕ್ಸ್ ರಿಪೋರ್ಟ್ (TomTom Traffic Index 2024) ಅನ್ವಯ, ವಿಶ್ವದ ಸ್ಲೋಯೆಸ್ಟ್ ಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳಲ್ಲಿ ಭಾರತದ ನಾಲ್ಕು ನಗರಗಳೇ ಇವೆ ಎಂಬುದು ನಮಗೆ ಹೆಗ್ಗಳಿಕೆಯನ್ನಂತೂ ತಂದಿಲ್ಲ.

ಡಚ್ ಮೂಲದ ಲೋಕೇಶನ್ ಟೆಕ್ನಾಲಜಿ ಸಂಸ್ಥೆ ಟಾಂ ಟಾಂ, ಪ್ರತಿ ವರ್ಷ ಪ್ರಪಂಚದಾದ್ಯಂತ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 2024ರ ವರದಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಕೊಲಂಬಿಯಾದ ಬರಾಂಕ್ವಿಲ್ಲಾ ಮೊದಲ ಸ್ಥಾನ ಪಡೆದುಕೊಂಡಿದ್ದು, ಎರಡನೇ ಸ್ಥಾನದಲ್ಲಿ ಕೋಲ್ಕತ್ತಾ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ಕೆಲವು ವರ್ಷಗಳ ಹಿಂದೆ ಇದ್ದ ಖಾಸಗಿ ವಾಹನಗಳ ಸಂಖ್ಯೆ ದೆಹಲಿಗೆ ಹೋಲಿಕೆ ಮಾಡಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಸುಮಾರು 2.5 ಮಿಲಿಯನ್ ಖಾಸಗಿ ವಾಹನಗಳಿದ್ದು, ದಿನಕ್ಕೆ 2 ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿದೆಯಂತೆ. ಇದರೊಂದಿಗೆ ನಗರದಲ್ಲಿ ಟ್ರಾಫಿಕ್ ಒತ್ತಡ ಮತ್ತಷ್ಟು ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ 10 ಕಿಮೀ ದೂರ ಪ್ರಯಾಣ ಮಾಡಲು ಸರಾಸರಿ 30 ನಿಮಿಷ 10 ಸೆಕೆಂಡ್ ಬೇಕಂತೆ. ಇದು 2023ಕ್ಕೆ ಹೋಲಿಕೆ ಮಾಡಿದರೆ 50 ಸೆಕೆಂಡ್ ಹೆಚ್ಚಾಗಿದೆ. ಉಳಿದಂತೆ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಬರಾಂಕ್ವಿಲ್ಲಾದಲ್ಲಿ 10 ಕಿಮೀ ಪ್ರಯಾಣ ಮಾಡಲು ಸರಾಸರಿ 36 ನಿಮಿಷ 6 ಸೆಕೆಂಡ್ ಬೇಕಂತೆ. ಕೋಲ್ಕತ್ತಾದಲ್ಲಿ ಈ ಸಮಯ ಸರಾಸರಿ 34 ನಿಮಿಷ 33 ಸೆಕೆಂಡ್. ಉಳಿದಂತೆ ಪಟ್ಟಿಯಲ್ಲಿ ಪುಣೆ ನಗರ 4ನೇ ಸ್ಥಾನ ಪಡೆದುಕೊಂಡಿದೆ.

ಭಾರತದ ವಿಚಾರಕ್ಕೆ ಬಂದರೆ ಅತ್ಯಧಿಕ ಟ್ರಾಫಿಕ್ ಇರುವ ನಗರಗಳಲ್ಲಿ ಕೋಲ್ಕತ್ತಾವನ್ನು ಟಾಂ ಟಾಂ ವರದಿ ಹೈಲೈಟ್ ಮಾಡಿದ್ದು, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ಬೆಂಗಳೂರು ನಗರದಲ್ಲಿ 10 ಕಿಮೀ ಪ್ರಯಾಣ ಮಾಡಲು ಸರಾಸರಿ 28 ನಿಮಿಷ 10 ಸೆಕೆಂಡ್ ಬೇಕಾಗಿತ್ತು. 2022ರಲ್ಲಿ 29 ನಿಮಿಷ 9 ಸೆಕೆಂಡ್ ತೆಗೆದುಕೊಳ್ಳುತ್ತಿತ್ತು. ಈ ವರ್ಷಗಳಲ್ಲಿ ಬೆಂಗಳೂರು ವಿಶ್ವದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. 2022ರಲ್ಲಿ ಸರಾಸರಿ ವೇಗ ಗಂಟೆಗೆ 18 ಕಿಮೀ ಇತ್ತು, ಭಾರತದ ಬ್ಯುಸಿಯೆಸ್ಟ್​ ಟ್ರಾಫಿಕ್ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ: ಟೋಕಿಯೋ ನಗರದ ಹಾದಿಯಲ್ಲಿದೆಯೇ ಬೆಂಗಳೂರು ?

Leave a Reply

Your email address will not be published. Required fields are marked *