Thursday, 28th November 2024

Bengaluru Weather: ಬೆಂಗಳೂರು ಚಿಲ್! ಫೆಂಗಲ್‌ ಪ್ರಭಾವಕ್ಕೆ ಊಟಿಯಂತಾದ ರಾಜಧಾನಿ

bengaluru news

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿ (Bengaluru Weather) ಆವರಿಸಿಕೊಂಡಿದೆ. ಫೆಂಗಲ್‌ (Cyclone Fengal) ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ಮೂರು ದಿನಗಳಿಂದ ಇದ್ದು, ಇದೀಗ ಚಳಿಯೂ ಸೇರಿಕೊಂಡು ರಾಜಧಾನಿ ನಗರ (bengaluru news) ಊಟಿಯಂತಾಗಿಬಿಟ್ಟಿದೆ.

ಡಿಸೆಂಬರ್‌ ತಿಂಗಳಲ್ಲಿ ಗಾಢಗೊಳ್ಳಬೇಕಾದ ಚಳಿ ಈ ಬಾರಿ ನವೆಂಬರ್‌ ಅಂತ್ಯದಲ್ಲಿ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಇಬ್ಬನಿ ಹನಿಯುವ ವಾತಾವರಣ ಇದೆ. ಮೋಡ ಕವಿದ ವಾತಾವರಣ ಅನುಭವವನ್ನು ಹೆಚ್ಚಿಸಿದೆ. ಮುಂಜಾನೆ ವಾಕಿಂಗ್, ಸೈಕ್ಲಿಂಗ್‌ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಚಳಿಯಿಂದಾಗಿ ವಾಕಿಂಗ್‌ ತ್ಯಜಿಸಿ ರಗ್ಗು ಹೊದ್ದು ಮಲಗುವವರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಶಿಯಸ್ ಮತ್ತು 16 ಡಿಗ್ರಿ ಸೆಲ್ಶಿಯಸ್ ನಡುವೆ ಕಂಡುಬಂದಿದೆ. ವಾರದ ಹಿಂದೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕನಿಷ್ಠ ಉಷ್ಣಾಂಶ 12.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಸೇರಿ ವಿವಿಧೆಡೆ ರಸ್ತೆಬದಿಗಳಲ್ಲಿ ಫುಟ್‌ಪಾತ್‌ ವ್ಯಾಪಾರಿಗಳು ಅಲ್ಲಲ್ಲಿ ಬೆಂಕಿ ಹಾಕಿಕೊಂಡು ತಮ್ಮ ದೇಹವನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈ ಬಾರಿ ಚಳಿ ಹೆಚ್ಚಾದುದರಿಂದ ಬೀದಿಬದಿ ಅಂಗಡಿಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಬಿಸಿಬಿಸಿ ಚಹಾ, ಸಂಜೆ ಬಜ್ಜಿ ಬೋಂಡಾ ಮಾರಾಟದ ಪ್ರಮಾಣ ಹೆಚ್ಚಾಗಿದೆ.

ಫೆಂಗಲ್‌ ಎಫೆಕ್ಟ್‌

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮೋಡ ಕವಿದ ವಾತಾವರಣದಿಂದ ತಾಪಮಾನ ಕಡಿಮೆಯಾಗಿದ್ದು, ಕೆಲವೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂರುತ್ತಿದೆ.

ರಾಜ್ಯದಲ್ಲಿ ಒಣ ಹವಾಮಾನ ಮುಂದುವರೆಯುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಂಭವವಿದೆ. ದಕ್ಷಿಣ ಒಳನಾಡಿನ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಇದು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ.

ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮಂಜು ಕವಿಯುವ ಸಾಧ್ಯತೆಯಿದೆ. ಹಗಲಿನಲ್ಲೂ ಬಿಸಿಲು ಇಲ್ಲದಿರುವುದರಿಂದ ಚಳಿಯ ಅನುಭವ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದೆ.