Sunday, 15th December 2024

Bigg Boss Kannada 11: ಬಿಗ್‌ ಬಾಸ್‌ ಶೋ ಶೀಘ್ರದಲ್ಲೇ ಅಂತ್ಯ? ಕೋರ್ಟ್‌ ನೋಟೀಸ್

Bigg Boss Kannada 11 TRP

ಶಿವಮೊಗ್ಗ: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗೆ (Reality Show) ಈ ಬಾರಿ ವಿಘ್ನಗಳ ಮೇಲೆ ವಿಘ್ನಗಳು ಉಂಟಾಗುತ್ತಿವೆ. ಲೇಟೆಸ್ಟ್‌ ಆದ ಬೆಳವಣಿಗೆ ಎಂದರೆ, ಬಿಗ್‌ ಬಾಸ್‌ ಶೋ (Bigg Boss Kannada 11, Bigg Boss show) ಅನ್ನು ಕಾಯಂ ಆಗಿ ರದ್ದುಗೊಳಿಸುವಂತೆ ಕೋರಿ ವಕೀಲರೊಬ್ಬರು ಕೋರ್ಟ್‌ ಮೆಟ್ಟಿಲು ಹತ್ತಿದ್ದು, ಈ ಕುರಿತು ಶೋ ಆಯೋಜಕರಿಗೆ ಕೋರ್ಟ್‌ ನೋಟೀಸ್‌ ನೀಡಿದೆ.

ಸಾಗರದ ವಕೀಲ ಕೆ.ಎಲ್. ಭೋಜರಾಜ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಸಾಗರದ ಪ್ರಧಾನ ವ್ಯವಹಾರ ನ್ಯಾಯಾಲಯದಲ್ಲಿ ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಕೋರ್ಟ್‌ ನೋಟೀಸ್‌ ನೀಡಿದೆ. ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ಈ ಬಗ್ಗೆ ಕೋರ್ಟ್‌ ತುರ್ತು ನೋಟಿಸ್ ನೀಡಿದೆ. ಅರ್ಜಿ ವಿಚಾರಣೆ ಅಕ್ಟೋಬರ್ 28ರಂದು ನಡೆಯಲಿದ್ದು ಈ ಕೋರ್ಟ್‌ ವಿಚಾರಣೆಗೆ ವಾಹಿನಿಯವರು ಹಾಜರಾಗಬೇಕಿದೆ.

ಈ ಹಿಂದೆಯೂ ಪೊಲೀಸರು ಬಿಗ್‌ ಬಾಸ್‌ಗೆ ನೋಟೀಸ್‌ ನೀಡಿದ್ದರು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ದೂರು ನೀಡಲಾಗಿತ್ತು. ಜೊತೆಗೆ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೂಡ ದೂರು ಸಲ್ಲಿಸಲಾಗಿತ್ತು. ಈ ದೂರುಗಳ ಮೇಲೆ ಪೊಲೀಸ್‌ ನೋಟೀಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಬಿಗ್‌ ಬಾಸ್‌ನಲ್ಲಿದ್ದ ʼಸ್ವರ್ಗ-ನರಕʼ ಕಲ್ಪನೆಗೆ ಅಂತ್ಯ ಹಾಡಲಾಗಿತ್ತು.

ಇದರ ನಡುವೆ ಬಿಗ್‌ ಬಾಸ್‌ ಶೋ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್‌ ಕೂಡ, ತಮ್ಮದು ಇದೇ ಕೊನೆಯ ಬಿಗ್‌ ಬಾಸ್‌ ಶೋ ಎಂದಿದ್ದರು. ಮುಂದಿನ ಸೀಸನ್‌ನಿಂದ ತಾನು ಶೋ ನಡೆಸಿಕೊಡುವುದಿಲ್ಲ. ಈ ಸೀಸನ್‌ಗೆ ತನ್ನ ಹಾಗೂ ಬಿಗ್‌ ಬಾಸ್‌ ಸಂಬಂಧ ಅಂತ್ಯವಾಗಿದೆ ಎಂದಿದ್ದರು. ಇದಕ್ಕೆ ಕಿಚ್ಚ ಸುದೀಪ್‌ಗೆ ಆಗಿರುವ ಅವಮಾನ ಹಾಗೂ ಹಾಗೂ ಕನ್ನಡಕ್ಕೆ ಆದ್ಯತ ನೀಡಲಾಗುತ್ತಿಲ್ಲ ಎನ್ನುವುದು ಕಾರಣ ಎನ್ನಲಾಗಿತ್ತು.

ಇನ್ನೊಂದೆಡೆ ಸ್ಪರ್ಧಿಗಳ ಅತಿರೇಕದ ವರ್ತನೆಯೂ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಗ್​ಬಾಸ್ ಮನೆಯೊಳಗೆ ಡೇ ವನ್​ನಿಂದಲೂ ಜಗಳ ಜೋರಾಗಿದೆ. ಜಗದೀಶ್ ಸಹ ಸ್ಪರ್ಧಿಗಳಿಗೆ ಅಗೌರವದಿಂದ ಮಾತನಾಡುವುದು ಕಾಮನ್ ಆಗಿದೆ. ಇತ್ತೀಚೆಗೆ ಹೆಣ್ಮಕ್ಕಳ ಮೇಲೆ ಅವಹೇಳನಕಾರಿ ಪದವನ್ನು ಕೂಡಾ ಬಳಸಿದ್ದು ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಜಗದೀಶ್‌, ಬಿಗ್‌ ಬಾಸ್‌ನಿಂದ ಹೊರಗೆ ಬಂದ ಬಳಿಕ ಶೋವನ್ನೇ ನಿಲ್ಲಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: BBK 11: ಬಿಗ್‌ ಬಾಸ್‌ಗೆ ಶಾಕ್‌; ನೊಟೀಸ್‌ ಜಾರಿ ಮಾಡಿದ ರಾಮನಗರ ಪೊಲೀಸರು: ಶೋ ನಿಲ್ಲುತ್ತಾ?