Thursday, 19th September 2024

BJP Karnataka: ಕಾಂಗ್ರೆಸ್ ಅಂದ್ರೆ ಅಧಿಕಾರದಿಂದ ಅಧಿಕಾರಕ್ಕೋಸ್ಕರ ಇರುವ ಪಕ್ಷ: ವಿಜಯೇಂದ್ರ ಟೀಕೆ

BJP Karnataka

ಬೆಂಗಳೂರು: ಕೋವಿಡ್ ಅವಧಿಯಲ್ಲಿ ಜನರಿಗೆ ಸ್ಪಂದಿಸಿದ ಬಿಜೆಪಿ (BJP Karnataka) ಒಂದು ವಿಭಿನ್ನ ಸೇವಾಪರ ಪಕ್ಷ. ಆದರೆ ಕಾಂಗ್ರೆಸ್, ಅಧಿಕಾರದಿಂದ ಅಧಿಕಾರಕ್ಕೋಸ್ಕರ ಇರುವ ಪಕ್ಷ. ಅಧಿಕಾರ ಇಲ್ಲವೆಂದರೆ ಕಾಂಗ್ರೆಸ್ ಪಕ್ಷದವರು ನೀರಿನಿಂದ ಹೊರಗೆ ಬಿದ್ದ ಮೀನಿನಂತಾಗುತ್ತಾರೆ. ಅಧಿಕಾರ ಇಲ್ಲದೆ ಬದುಕಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2047ನೇ ವರ್ಷಕ್ಕೆ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ಪ್ರಧಾನಿ ನರೇಂದ್ರ ಮೋದೀಜಿ ಅವರದು. ಮೋದೀಜಿ ಅವರಿಗೆ ಇನ್ನೂ ಹೆಚ್ಚು ಬಲ ಕೊಡುವ ಕೆಲಸ ನಡೆಸಬೇಕಿದ್ದು, ಅಭಿಯಾನದ ಯಶಸ್ವಿಗಾಗಿ ಪ್ರತಿ ಬೂತ್‍ಗಳಲ್ಲಿ ಕಾರ್ಯಕರ್ತರನ್ನು ಜೋಡಿಸಲಾಗಿದೆ ಎಂದರು.

ಕರ್ನಾಟಕವು ಬಿಜೆಪಿ ಸದಸ್ಯತ್ವದಲ್ಲಿ ಮುಂಚೂಣಿಯಲ್ಲಿ ಇರುವ ವಿಶ್ವಾಸವಿದೆ. ಮತ್ತೊಂದು ಕಡೆ ಬಿಜೆಪಿ ಸೇವೆಯೇ ಸಂಘಟನೆ ಎಂಬ ಶ್ರೇಷ್ಠ ಭಾವನೆಯಿಂದ ದೇಶ ಮೊದಲು, ನಂತರ ಪಕ್ಷ ಎಂಬ ಉತ್ತಮ ಸಿದ್ಧಾಂತ ಹೊಂದಿದೆ. ಕೋವಿಡ್ ದಿನಗಳಲ್ಲಿ ದೇಶದ ಇತರ ರಾಜಕೀಯ ಪಕ್ಷದವರು ಮನೆಯಲ್ಲಿ ಕೂತಿದ್ದರು. ಆದರೆ, ನಮ್ಮ ಪಕ್ಷವು ದೇಶದ ಲಕ್ಷಾಂತರ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು ಎಂದು ವಿವರಿಸಿದರು. ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಸೇರಿ, ಮುಖಂಡರು, ಕಾರ್ಯಕರ್ತರು ಆಹಾರದ ಕಿಟ್ ನೀಡುವುದು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಉಚಿತ ಔಷಧಿ, ಮಾತ್ರೆ ಕೊಡುವ ಕೆಲಸ ಮಾಡಿದ್ದರು ಎಂದು ನೆನಪಿಸಿದರು.

ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗುವುದು. ಎಲ್ಲ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುತ್ತಾರೆ. ಮುಂದಿನ 40-45 ದಿನಗಳ ಕಾಲ ಎರಡು ಹಂತಗಳ ಅಭಿಯಾನದಲ್ಲಿ ಭಾಗವಹಿಸೋಣ ಎಂದ ಅವರು, ಬಿಜೆಪಿ ಸದಸ್ಯತ್ವ ಅಭಿಯಾನ ಪರ್ವದ ಉದ್ಘಾಟನೆ ಇವತ್ತು ನಡೆದಿದೆ. ಇದು ಹಬ್ಬದ ವಾತಾವರಣ. ಗಣೇಶ ಹಬ್ಬದ ಹತ್ತಿರದಲ್ಲಿ ನಾವಿದ್ದು, ರಾಜ್ಯದ ಜನತೆಗೆ ಗೌರಿಗಣೇಶ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು.

ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿ ಅವರು ಮೊನ್ನೆ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಅರ್ಥಪೂರ್ಣ ಅಭಿಯಾನ ನಡೆಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ ಅವರ ಅಪೇಕ್ಷೆ ಇದೆ. ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ. ಬಿಜೆಪಿ ಸರ್ವಸ್ಪರ್ಶಿ- ಸರ್ವವ್ಯಾಪಿ ಎಂದು ತಿಳಿಸಿದರು.

ಕಾಂಗ್ರೆಸ್ಸಿನದು ಕುಟುಂಬದ ಪಕ್ಷ; ಬಿಜೆಪಿ ದೇಶಹಿತದ ಪಕ್ಷ: ಸುಧಾಕರ ರೆಡ್ಡಿ

ಕರ್ನಾಟಕ ರಾಜ್ಯ ಸಹ-ಉಸ್ತುವಾರಿ ಸುಧಾಕರ ರೆಡ್ಡಿ ಅವರು ಮಾತನಾಡಿ, ಇಲ್ಲಿ ಹಬ್ಬದ ವಾತಾವರಣ ಇದೆ. ಇದಕ್ಕಾಗಿ ವಿಜಯೇಂದ್ರ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಗುರಿ ಮೀರಿ ಸಾಧನೆ ಮಾಡಿ; ನಮ್ಮದು ಸೇವೆ, ನಿಷ್ಠೆಯೊಂದಿಗೆ ದೇಶಹಿತದ ಪಕ್ಷ. ಕಾಂಗ್ರೆಸ್ಸಿನದು ಕುಟುಂಬದ ಪಕ್ಷ ಎಂದು ಟೀಕಿಸಿದರು.

ಕಾಂಗ್ರೆಸ್, ಕುಟುಂಬ ಮೊದಲು, ದೇಶ ಕೊನೆಯಲ್ಲಿ ಎಂಬ ಧ್ಯೇಯ ಹೊಂದಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ವಿದೇಶೀಯ ಸ್ಥಾಪಿಸಿದರೆ, ನಮ್ಮದು ಭಾರತೀಯರೇ ಸ್ಥಾಪಿಸಿದ ಪಕ್ಷ. ಕಾಂಗ್ರೆಸ್‍ನದು ಬೆಲೆ ಏರಿಸುವ, ಬೇಜವಾಬ್ದಾರಿ, ಹಗರಣಗಳ ಸರ್ಕಾರ. ಖರ್ಗೆ, ಸಿದ್ದರಾಮಯ್ಯರು ಭ್ರಷ್ಟರು. ಮುಖ್ಯಮಂತ್ರಿಗೆ ಆ ಹುದ್ದೆಯಲ್ಲಿ ಮುಂದುವರೆಯುವ ಹಕ್ಕಿಲ್ಲ, ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಪಕ್ಷ: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಸ್ಯತ್ವ ಆಧಾರದಲ್ಲಿ ಪಕ್ಷ ಬೆಳೆಸುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ- ಅವರ ಕುಟುಂಬ ಇದೆಯೇ ಎಂಬುದು ಅವರಿಗೆ ಮಹತ್ವದ್ದು. ಒಂದೊಮ್ಮೆ ರಾಹುಲ್ ಗಾಂಧಿ ಅವರಿಗೆ ಬೇಸರವಾಗಿ ಇಟಲಿಗೆ ಹೋದರೆ ಆ ಪಕ್ಷ ಇರುವುದಿಲ್ಲ. ಅದು ಲೀಡರ್‌ಗಳ ಪಕ್ಷ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು.

ಸದಸ್ಯತ್ವ ಹೆಚ್ಚಿಸಲು ಕಾರ್ಯಕರ್ತರು ಬೀದಿಗೆ ಇಳಿಯಬೇಕು ಎಂದು ಮನವಿ ಮಾಡಿದ ಅವರು, ಕಾಂಗ್ರೆಸ್ ಪಕ್ಷವು ಹೆಸರಿಗೆ ಬೇಕಾಗಿ ಹಣ ತಾವೇ ನೀಡಿ ಸದಸ್ಯರನ್ನು ಮಾಡುತ್ತದೆ. ಇಲ್ಲಿ ಹಾಗಿಲ್ಲ. ನಾವು ಸದಸ್ಯತ್ವಕ್ಕೆ ಶುಲ್ಕ ಇಟ್ಟಿಲ್ಲ. ಸಕ್ರಿಯ ಸದಸ್ಯರು 100 ರೂ. ಕೊಡಬೇಕಿದೆ. ಬಿಜೆಪಿಯ ಜೀವ ಕಾರ್ಯಕರ್ತರು ಮತ್ತು ಸದಸ್ಯರಲ್ಲಿದೆ ಎಂದು ತಿಳಿಸಿದರು.

ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದು: ಛಲವಾದಿ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸದಸ್ಯತ್ವ ನೋಂದಣಿ ಕಾರ್ಯವು ಹಬ್ಬದ ಮಾದರಿಯಲ್ಲಿ ನಡೆಯಲಿ. ರಾಜ್ಯದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದು. ಆದ್ದರಿಂದ ಪಕ್ಷವನ್ನು ಬಲಪಡಿಸಲು ಶ್ರಮಿಸೋಣ ಎಂದು ಅಭಿಪ್ರಾಯಪಟ್ಟರು. ತಳಮುಖವಾಗಿ ಮೇಲಕ್ಕೆ ಬೆಳೆದ ಪಕ್ಷ ಬಿಜೆಪಿ. ಇದರ ಶಕ್ತಿ ನಾಯಕರಲ್ಲ, ಬಿಜೆಪಿ ಶಕ್ತಿ ಕಾರ್ಯಕರ್ತರ ರೂಪದಲ್ಲಿದೆ. ಸಮಾಜದ ಅನೇಕಾನೇಕ ಪ್ರಕೋಷ್ಠಗಳಲ್ಲಿ ಕೆಲಸ ಮಾಡುವವರೇ ಕಾರ್ಯಕರ್ತರು ಎಂದು ವಿಶ್ಲೇಷಿಸಿದರು.

1980ರಲ್ಲಿ ಶೇ.1 ಮತ ಪಡೆದರೆ ಖುಷಿ ಪಡುವ ಪಕ್ಷ ನಮ್ಮದಾಗಿತ್ತು. ಇದೀಗ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಹಿಂದೆ ದೇಶದಲ್ಲಿ 18 ಕೋಟಿ ಸದಸ್ಯರಿದ್ದು, ರಾಜ್ಯದಲ್ಲಿ 1.04 ಕೋಟಿ ಸದಸ್ಯರಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ನವಚೈತನ್ಯ ನಮ್ಮ ಪಕ್ಷಕ್ಕೆ ಲಭಿಸಿದೆ ಎಂದು ವಿವರಿಸಿದರು. ನಮ್ಮ ಶಕ್ತಿ ಈಗ ಏರುಮುಖವಾಗುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದ ಆಡಳಿತವುಳ್ಳ ರಾಜ್ಯಗಳು ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.

ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್‍ಕುಮಾರ್, ಪ್ರೀತಂ ಗೌಡ, ಶಾಸಕರಾದ ಗೋಪಾಲಯ್ಯ, ರಾಮಮೂರ್ತಿ, ಎಸ್.ಆರ್.ವಿಶ್ವನಾಥ್, ಮುನಿರತ್ನ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕೋರ್ ಕಮಿಟಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು,ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ನಂದೀಶ್ ರೆಡ್ಡಿ ಅವರು ಸ್ವಾಗತಿಸಿದರು. ಒಂದೇದಿನದಲ್ಲಿ 50.31 ಲಕ್ಷ ಜನರಿಗೂ ಹೆಚ್ಚು ಜನರು ಸದಸ್ಯರಾಗಿದ್ದಾರೆ ಎಂದರು. ಈಗ ಕರ್ನಾಟಕ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಸದಸ್ಯರ ನೋಂದಣಿ ಆಗಿದೆ ಎಂದು ವಿವರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಚಲನಚಿತ್ರ ನಟಿಯರಾದ ಪದ್ಮಾ ವಾಸಂತಿ, ಮಾನಸ ಜೋಷಿ, ಪ್ರಿಯಾ, ರೂಪಿಕಾ, ಗಾಯಕ ಬದ್ರಿಪ್ರಸಾದ್, ನಿರ್ಮಾಪಕಿ- ಪತ್ರಕರ್ತೆ ರೇಖಾರಾಣಿ, ಮೀರಾ, ಪದ್ಮಶ್ರೀ ಪ್ರಶಸ್ತಿ ವಿಜೇತ ವೆಂಕಟೇಶ್, ವಿಕ್ರಂ ಆಸ್ಪತ್ರೆಯ ಡಾ. ವಿಜಯಕುಮಾರ್, ಜೀವಿಕಾ ಆಸ್ಪತ್ರೆಯ ಡಾ.ಅಶೋಕ್, ಮಣಿಪಾಲ ಆಸ್ಪತ್ರೆಯ ಡಾ.ಶ್ರೀಧರ್, ಗಣ್ಯರಾದ ಡಾ.ಸುಬ್ರತಾದಾಸ್, ಪ್ರೊ.ವಸಂತ್ ಶೆಟ್ಟಿ, ಡಾ.ಸುಭಾಷ್ ಪಾಟೀಲ್, ಬಿ.ವಸಂತ ಪಡಿಯಾರ್, ಸುಬ್ರಹ್ಮಣ್ಯ ಹೊಳ್ಳ, ವೀರೇಂದ್ರ ಎಸ್., ನಿಖಿಲ್ ಆತ್ರೇಯ, ಚಾರ್ಟರ್ಡ್ ಅಕೌಂಟೆಂಟ್ ಹರೀಶ್, ಆದೇಶ್ ಬುರ್ಜಿ, ರೇಣುಕಾನಂದ, ಗದಿಗೇಶಪ್ಪ ಗೌಡ, ರಮೇಶ್, ಪ್ರೊ. ಅನಂತಕೃಷ್ಣ, ರಾಜೇಶ್ ಕುಮಾರ್, ಮಂಜುನಾಥ್ ಅವರು ಭಾಗವಹಿಸಿದ್ದರು.