Saturday, 4th January 2025

Murder Case: ಬಿಜೆಪಿ ನಾಯಕಿ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ 7 ಪಾತಕಿಗಳಿಗೆ ಜೀವಾವಧಿ ಶಿಕ್ಷೆ

rekha kadiresh murder case

ಬೆಂಗಳೂರು: ನಗರವನ್ನು ಬೆಚ್ಚಿ ಬೀಳಿಸಿದ್ದ ಹೈ ಪ್ರೊಫೈಲ್‌ ಕೊಲೆ (Murder Case) ಪ್ರಕರಣವೊಂದರಲ್ಲಿ, 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು (Life Sentence) ನೀಡಿ ಕೋರ್ಟ್‌ ತೀರ್ಪು ನೀಡಿದೆ. ಬಿಜೆಪಿ ನಾಯಕಿ, ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್‌ ಮಾಜಿ ಸದಸ್ಯೆ ರೇಖಾ ಕದಿರೇಶ್ (Rekha Kadiresh) ಹತ್ಯೆ ಪ್ರಕರಣದಲ್ಲಿ 7 ಜನರ ವಿರುದ್ಧದ ಅಪರಾಧ ಸಾಬೀತಾಗಿದೆ.

ರೇಖಾ ಕದಿರೇಶ್ ಅವರನ್ನು ಕಚೇರಿ ಮುಂದೆಯೇ 2021ರಲ್ಲಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಏಳು ಜನರ ವಿರುದ್ಧದ ಅಪರಾಧ ಸಾಬೀತಾಗಿದೆ. ಬೆಂಗಳೂರು ನಗರದ 72ನೇ ಸಿಸಿಎಚ್ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡವನ್ನು ವಿಧಿಸಿ ಆದೇಶಿಸಿದೆ. ರೇಖಾ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು.

ನಗರದ ಅಂಜನಪ್ಪ ಗಾರ್ಡನ್ ನಿವಾಸಿ ರೇಖಾ ಕದಿರೇಶ್ 2021ರ ಜೂನ್‌ನಲ್ಲಿ ಕಏರಿ ಮುಂದೆಯೇ ಹತ್ಯೆಯಾಗಿದ್ದರು. ಪೀಟರ್, ಸೂರಜ್, ಸ್ಟೀಫನ್, ಪುರುಷೋತ್ತಮ, ಅಜಯ್, ಅರುಣ್ ಕುಮಾರ್ ಮತ್ತು ಸೆಲ್ವರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಆರೋಪಿ ಮಾಲಾ ಎಂಬಾಕೆ ವಿಚಾರಣೆ ವೇಳೆ ಮೃತಪಟ್ಟಿದ್ದಳು. 8 ಮಂದಿ ಸೇರಿ ಸಂಚು ರೂಪಿಸಿ ರೇಖಾ ಅವರನ್ನು 2021ರಲ್ಲಿ ಹತ್ಯೆ ಮಾಡಿದ್ದರು. ರೇಖಾ ಕದಿರೇಶ್ ಹತ್ಯೆ ಪ್ರಕರಣ ಸಂಬಂಧ 2021ರ ಸೆಪ್ಟೆಂಬರ್‌ನಲ್ಲಿ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಾಟನ್‌ ಪೇಟೆ ಪೊಲೀಸರು 780 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ಪ್ರಕರಣದ ಹಿನ್ನೆಲೆ

2018ರಲ್ಲಿ ರೇಖಾ ಪತಿ ಕದಿರೇಶ್ ಹತ್ಯೆಯಾಗಿತ್ತು. ಬಳಿಕ ಪ್ರತ್ಯೇಕವಾಗಿ ವಾಸವಾಗಿದ್ದ ರೇಖಾ, ಪತಿ ಕುಟುಂಬದವರನ್ನು ರಾಜಕೀಯವಾಗಿ ದೂರವಿಟ್ಟಿದ್ದರು. ಇದರಿಂದಾಗಿ ಕದಿರೇಶ್ ಸಹೋದರಿ ಮಾಲಾ ಮತ್ತು ಸಂಬಂಧಿಕರು ಅಸಮಾಧಾನಗೊಂಡಿದ್ದರು. ಅಲ್ಲದೇ ಕದಿರೇಶ್ ಜೊತೆ ಇದ್ದ ಪೀಟರ್ ಅವರನ್ನು ರೇಖಾ ದೂರ ಮಾಡಲು ಪ್ರಯತ್ನ ಮಾಡುತ್ತಿದ್ದರು. ಮಾಲಾ ತನ್ನ ಸಹೋದರನ ರಾಜಕೀಯ ಶಕ್ತಿಯನ್ನು ರೇಖಾ ಒಬ್ಬಳೇ ಬಳಕೆ ಮಾಡಿಕೊಂಡು ರಾಜಕೀಯವಾಗಿ ಬೆಳೆಯುತ್ತಿದ್ದಾಳೆ ಎಂದು ಅಸಮಾಧಾನಗೊಂಡು ಆಕೆಯ ಕೊಲೆಗೆ ಸಂಚು ರೂಪಿಸಿದ್ದಳು. ಇದಕ್ಕಾಗಿ ಆಕೆ ಕದಿರೇಶ್ ಜೊತೆ ಓಡಾಡಿಕೊಂಡಿದ್ದ ಪೀಟರ್ ಸಂಪರ್ಕ ಮಾಡಿದ್ದಳು. ರೇಖಾ ತಮ್ಮನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿರುವ ಕುರಿತು ಅಸಮಾಧಾನ ಹೊಂದಿದ್ದ ಪೀಟರ್ ಕೊಲೆಗೆ ಒಪ್ಪಿದ್ದ.

ಇತರ ಆರೋಪಿಗಳ ಜೊತೆ ಸೇರಿ 2021ರಲ್ಲಿ ಕಚೇರಿಯ ಮುಂಭಾಗದಲ್ಲಿಯೇ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣ ನಗರದ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಕೊಲೆಯಾದ 24 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಮಾಲಾ ಮತ್ತು ಆಕೆಯ ಪುತ್ರ ಅರುಣ್ ಕುಮಾರ್ ಆರೋಪಿಗಳಾಗಿದ್ದರು. ಮಾಲಾ ವಿಚಾರಣೆ ವೇಳೆ ಮೃತಪಟ್ಟಿದ್ದಳು. ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ಅಪರಾಧ ಸಾಬೀತಾಗಿದೆ. ಏಳು ಜನರಲ್ಲಿ ಮೂವರು ಷರತ್ತು ಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು.

ಇದನ್ನೂ ಓದಿ: Murder Case: ಕಾರಿಗೆ ದಾರಿ ಬಿಡಿ ಎಂದಿದ್ದಕ್ಕೆ ಚೈತನ್ಯ ಟೆಕ್ನೋ ಕಾಲೇಜಿನ ಡೀನ್‌ ಹೊಡೆದು ಕೊಲೆ